ಬಾಲ್ಯ ವಿವಾಹ ತಡೆಗೆ ದೇಶದಲ್ಲೇ ಮೊದಲ ವೆಬ್‌ಸೈಟ್‌ಗೆ ಚಾಲನೆ
ಬೆಂಗಳೂರು, ಜ.21: ಬಾಲ್ಯ ವಿವಾಹ ತಡೆಗಟ್ಟಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದೇಶದಲ್ಲೇ ಮೊದಲ ಬಾರಿಗೆ ಹಾಗೂ ವಿನೂತನವಾಗಿ ವಿನ್ಯಾಸಗೊಳಿಸಿರುವ ‘ಕರೆ’ ವೆಬ್ ಸೈಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಮಕ್ಕಳು ನಮ್ಮ ಸಮಾಜದ ಆಸ್ತಿ. ದೇಶದ ಮುಂದಿನ ಪ್ರಜೆಗಳು. ಅವರ ಹಕ್ಕುಗಳ ರಕ್ಷಣೆ ಸರ್ಕಾರದ ಜವಾಬ್ದಾರಿ. ಬಾಲ್ಯ ವಿವಾಹ ಪದ್ಧತಿ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಅದು ಕಾನೂನುಬಾಹಿರ. ಶಿಕ್ಷಾರ್ಹ ಅಪರಾಧ. ಈ ಸಂಬಂಧ ಕಾನೂನು ಜಾರಿಗೆ ತರಲಾಗಿದೆ. ಆದರೂ ಬಾಲ್ಯ ವಿವಾಹ ನಿಂತಿಲ್ಲ. ಆದ್ದರಿಂದ ಬಾಲ್ಯ ವಿವಾಹದ ಕುರಿತು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. 2005ರಲ್ಲಿ ಬಾಲ್ಯ ವಿವಾಹದ ಪ್ರಮಾಣ ಶೇ.41.2ರಷ್ಟು ಇತ್ತು. ಈಗ ಶೇ.23.2ಕ್ಕೆ ಇಳಿದಿದೆ. ಮುಂದಿನ ಐದು ವರ್ಷದಲ್ಲಿ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಆಗಬೇಕು. ಜಾಗೃತಿ ಆಂದೋಲನ ನಿರಂತರವಾಗಿ ನಡೆಯಲಿ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಬಾಲ್ಯ ವಿವಾಹ ಮುಕ್ತ ರಾಜ್ಯವಾಗಲಿ ಎಂದು ಆಶಿಸಿದರು.
ಅನಕ್ಷರತೆ, ಬಡತನ, ಅರಿವಿನ ಕೊರತೆ ಇದಕ್ಕೆ ಕಾರಣ. ಆದರೂ ಇತ್ತೀಚೆಗೆ ಸ್ವಲ್ಪ ಕಡಿಮೆ
ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹ ತಪ್ಪು. ಸಮಾಜದಲ್ಲಿ ಪುರುಷರಿಗೆ ಎಷ್ಟು ಹಕ್ಕುಗಳು ಇವೆಯೋ ಮಹಿಳೆಯರಿಗೂ ಅಷ್ಟೇ ಇರಬೇಕು. ಏಕೆಂದರೆ ಪುರುಷರು, ಮಹಿಳೆಯರು ಸಮಾಜದಲ್ಲಿ ಸಮಾನರು ಎಂದು ಸಿದ್ದರಾಮಯ್ಯ ಹೇಳಿದರು. ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ಬಾಲ್ಯ ವಿವಾಹ ಹಿನ್ನೆಲೆಯಲ್ಲಿ ನೀಡಿರುವ ವರದಿಯನ್ನು ಸರ್ಕಾರ ಬಹುತೇಕ ಜಾರಿಗೆ ತಂದಿದೆ. ಬಾಲ್ಯ ವಿವಾಹ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡುವವರನ್ನು ಎರಡು ವರ್ಷ ಶಿಕ್ಷೆಗೆ ಗುರಿಪಡಿಸುವ ಅಂಶ ತಿದ್ದುಪಡಿಯಲ್ಲಿದೆ ಎಂದರು.