ಕಂಬಳ ಕ್ರೀಡೆಗೆ ಮಾನ್ಯತೆ ನೀಡಲು ಪ್ರತ್ಯೇಕ ಕಾನೂನು: ಟಿ.ಬಿ.ಜಯಚಂದ್ರ

Update: 2017-01-25 14:25 GMT

ಬೆಂಗಳೂರು, ಜ.25: ದಕ್ಷಿಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಕಂಬಳ ಕ್ರೀಡೆಗೆ ಮಾನ್ಯತೆ ನೀಡಲು ರಾಜ್ಯ ಸರಕಾರ ಪ್ರತ್ಯೇಕ ಕಾನೂನು ಜಾರಿಗೆ ತರಲು ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪಶುಸಂಗೋಪನೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕಂಬಳ ಕ್ರೀಡೆ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಂಬಳ ಕ್ರೀಡೆಗೆ ಪೂರಕವಾಗಿ ರಾಜ್ಯ ಸರಕಾರ ನಡೆದುಕೊಳ್ಳುತ್ತಿದ್ದು, ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಾಣಿಗಳ ಹಿಂಸೆ ತಡೆ ಕಾಯ್ದೆಗೆ ರಾಜ್ಯಕ್ಕೆ ಅನುಗುಣವಾಗಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾಯ್ದೆಯ ಕರಡು ಸಿದ್ಧಪಡಿಸುವಂತೆ ಪಶುಸಂಗೋಪನೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಫೆ.6ರಿಂದ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತಿರುವುದರಿಂದ ಕಂಬಳ ಕ್ರೀಡೆಗೆ ಮಾನ್ಯತೆ ಒದಗಿಸಲು ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವಿಲ್ಲ. ಆದುದರಿಂದ, ಪ್ರತ್ಯೇಕ ಕಾನೂನು ಜಾರಿಗೆ ತರುತ್ತೇವೆ. ಕಂಬಳ ಕ್ರೀಡೆಯಲ್ಲಿ ಯಾವುದೆ ರೀತಿಯ ಪ್ರಾಣಿ ಹಿಂಸೆ ಇಲ್ಲ ಎಂಬುದರ ಕುರಿತು ವಿಶ್ವವಿದ್ಯಾಲಯದ ಅಧ್ಯಯನ ವರದಿ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು

ಕಂಬಳ ಗ್ರಾಮೀಣ ಪ್ರದೇಶದ ಕ್ರೀಡೆಯಾಗಿದೆ. ಅದರೊಂದಿಗೆ ಎತ್ತಿನಗಾಡಿಗಳ ಸ್ಪರ್ಧೆಗೂ ಈ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಸುಮಾರು 700-800 ವರ್ಷಗಳಿಂದ ಸುಗ್ಗಿ ಕಾಲದಲ್ಲಿ ರೈತರು ಆಚರಿಸಿಕೊಂಡು ಬರುತ್ತಿರುವ ಕಂಬಳ ಕ್ರೀಡೆಗೆ ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಯಿದೆ ಎಂದು ಜಯಚಂದ್ರ ತಿಳಿಸಿದರು.

ಪಶುಸಂಗೋಪನೆ ಇಲಾಖೆ ಸಿದ್ಧಪಡಿಸುವ ಕರಡು ಪ್ರತಿಯನ್ನು ಜ.28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಅಧಿವೇಶನದಲ್ಲಿ ಮಂಡಿಸಲು ಚಿಂತನೆ ನಡೆಸಲಾಗಿದೆ. ಕಂಬಳಕ್ಕೆ ಇತಿಮಿತಿಯೊಳಗೆ ಅನುಮತಿ ನೀಡುವ ಕುರಿತು 2014ರ ಮೇ 7ರಂದು ಸಂಬಂಧಪಟ್ಟ ಸ್ಥಳೀಯ ಸಂಘ ಸಂಸ್ಥೆಗಳು, ದಕ್ಷಿಣ ಹಾಗೂ ಉಡುಪಿ ಜಿಲ್ಲೆಯ ಶಾಸಕರು, ಸಚಿವರ ಸಭೆ ನಡೆಸಿ ಅನುಮತಿ ನೀಡಲಾಗಿತ್ತು ಎಂದು ಅವರು ಹೇಳಿದರು.

ಅಲ್ಲದೆ, ಬೆಳಗಾವಿಯಲ್ಲಿ ಇತ್ತೀಚೆಗೆ ಅಧಿವೇಶನ ನಡೆಯುವಾಗ ಡಿ.2ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು, ಶಾಸಕರ ಸಭೆ ನಡೆಸಿ, ಕಂಬಳ ನಡೆಸಲು ಪೂರಕವಾದ ಸಮಿತಿ ರಚಿಸಿ ವರದಿಯನ್ನು ತರಿಸಿಕೊಳ್ಳಲು ನಿರ್ಧರಿಸಿ, ಸರಕಾರಿ ಆದೇಶವನ್ನು ಹೊರಡಿಸಲಾಗಿತ್ತು ಎಂದು ಜಯಚಂದ್ರ ಮಾಹಿತಿ ನೀಡಿದರು.

ಕಂಬಳ ಕ್ರೀಡೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದು, ಅಡ್ವೊಕೇಟ್ ಜನರಲ್ ಸರಕಾರದ ತೀರ್ಮಾನಗಳನ್ನು ನ್ಯಾಯಾಲಯದ ಗಮನಕ್ಕೆ ತರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಎಪಿಎಂಸಿಯಲ್ಲಿ ಮೇಲುಗೈ: ರಾಜ್ಯದ 130 ಎಪಿಎಂಸಿಗಳಿಗೆ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 688, ಬಿಜೆಪಿ ಬೆಂಬಲಿತ 593, ಜೆಡಿಎಸ್ ಬೆಂಬಲಿತ 182 ಹಾಗೂ ಇತರರು 89 ಮಂದಿ ಜಯಗಳಿಸಿದ್ದಾರೆ ಎಂದು ಜಯಚಂದ್ರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News