ಅಂತೂ ಇಂತೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರಸ್ತೆ ಸಿದ್ಧ
ಬೆಂಗಳೂರು, ಫೆ.11: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹು ನಿರೀಕ್ಷಿತ ಪರ್ಯಾಯ ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆ. ಈ ತಿಂಗಳ 17ರಂದು ಆಯೋಜಿಸಿರುವ ಏರೊ ಇಂಡಿಯಾ- 2017 ಉದ್ಘಾಟನೆಗೆ ಮುನ್ನ ಇದನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದ್ದು, ರವಿವಾರದಿಂದ ಪರ್ಯಾಯ ಮಾರ್ಗ ಕಾರ್ಯಾಚರಿಸುವ ನಿರೀಕ್ಷೆ ಇದೆ.
ಈ ಪರ್ಯಾಯ ಮಾರ್ಗ ಮುಖ್ಯವಾಗಿ ಪೂರ್ವ ಬೆಂಗಳೂರಿನಿಂದ ಆಗಮಿಸುವ ವಾಹನ ಸವಾರರಿಗೆ ಪ್ರಯೋಜನಕಾರಿಯಾಗಿದ್ದು, ಬೇಗೂರು ಗ್ರಾಮದ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸಲು ಸಾಧ್ಯವಾಗಲಿದೆ. ಸಂಚಾರಿ ಪೊಲೀಸ್ ವಿಭಾಗದ ಸಮೀಕ್ಷೆಯ ಪ್ರಕಾರ ಶೇಕಡ 35ರಷ್ಟು ವಾಹನಗಳು ಪೂರ್ವ ಅಥವಾ ಆಗ್ನೇಯ ಬೆಂಗಳೂರು ಭಾಗದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿವೆ. "ಏರೊ ಇಂಡಿಯಾ ಉದ್ಘಾಟನೆಗೆ ಮುನ್ನ ಪರ್ಯಾಯ ಮಾರ್ಗವನ್ನು ಉದ್ಘಾಟಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಬಳ್ಳಾರಿ ರಸ್ತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ತಿಳಿಸಿದ್ದಾರೆ.
ರವಿವಾರದಿಂದ ಪೂರ್ವ ಬೆಂಗಳೂರು ಪ್ರದೇಶದ ವಾಹನಗಳು ಕೆ.ಆರ್.ಪುರಂ, ಹೆಣ್ಣೂರು ಕ್ರಾಸ್, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ನೈರುತ್ಯ ಪ್ರವೇಶದ್ವಾರದ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಲಿವೆ ಎಂದು ಅವರು ವಿವರಿಸಿದ್ದಾರೆ.
ಇದಕ್ಕಾಗಿ ವಿಮಾನ ನಿಲ್ದಾಣದ ಆಗ್ನೇಯ ಭಾಗದ ಆವರಣ ಗೋಡೆಯನ್ನು ಭಾಗಶಃ ತೆರವುಗೊಳಿಸಿ ವಾಹನ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸದ್ಯಕ್ಕೆ ಈ ರಸ್ತೆ ಭಾಗಶಃ ಮಣ್ಣು ರಸ್ತೆಯಾಗಿದ್ದರೂ, ಅಗಲವಾಗಿದೆ. ವಾಹನ ಸಂಚಾರ ಆರಂಭಕ್ಕೆ ಮುನ್ನ ಡಾಂಬರೀಕರಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡಾ ಇದನ್ನು ದೃಢಪಡಿಸಿದ್ದಾರೆ