ದೇಶೀ ಬಂಡವಾಳ-ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ಸಿಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆ.13: ನಾವು ವಿದೇಶಿ ಬಂಡವಾಳ ಮತ್ತು ತಂತ್ರಜ್ಞಾನಕ್ಕೆ ಅವಲಂಬಿತವಾಗುವ ಬದಲು ದೇಶೀಯ ಬಂಡವಾಳ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಮೇಕ್ ಇನ್ ಕರ್ನಾಟಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೆಕ್ ಇನ್ ಇಂಡಿಯಾ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಹೀಗಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.
2030 ರ ವೇಳೆಗೆ ಭಾರತ ವಿಶ್ವದ 5ನೆ ಅತಿ ದೊಡ್ಡ ಗ್ರಾಹಕರ ಮಾರುಕಟ್ಟೆಯಾಗಿ ಸ್ಥಾನ ಪಡೆದುಕೊಳ್ಳಲಿದೆ. ಕರ್ನಾಟಕದ 2015ರ ಕೈಗಾರಿಕಾ ನೀತಿ ಉತ್ಪಾದನಾ ನೀತಿಯಾಗಿದೆ. ಈ ಮೂಲಕ ದೇಶದ ಹೈಟೆಕ್ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಸ್ಥಾನ ಪಡೆದುಕೊಂಡಿದೆ. ಬೀಜ ಬಿತ್ತನೆಗಾಗಿ ಸರಕಾರ 5 ಕೋಟಿ ರೂ ಬಂಡವಾಳ ಹೂಡಿದೆ. ಸ್ಟಾರ್ಟ್ ಅಪ್ ಕಂಪನಿಗಳಿಗೆ ಅತ್ಯಂತ ಕಡಿಮೆ ಬೆಲೆಗೆ 1 ಎಕರೆ ಜಾಗವನ್ನು ನೀಡಲಾಗಿದೆ ಎಂದು ತಿಳಿಸಿದರು.
ಕಳೆದೆರಡು ದಶಕಗಳಲ್ಲಿ ಕರ್ನಾಟಕ ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ, ಐಟಿ-ಬಿಟಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ .ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಮೇಕ್ ಇನ್ ಕರ್ನಾಟಕ ಸಮಾವೇಶ ಯಶಸ್ಸು ಕಾಣಲಿದೆ ಎಂದರು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿ, ಭಾರತವನ್ನು ಕೇವಲ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶ ಎಂದರೆ ಸಾಲದು. ನಮಗೆ ಅದರಲ್ಲಿ ತೃಪ್ತಿ ಇಲ್ಲ. ದೇಶದಲ್ಲಿರುವ ತ್ವರಿತ ಬೆಳವಣಿಗೆ ವಾತಾವರಣವನ್ನು ಉಪಯೋಗಿಸಿಕೊಂಡು ಕರ್ನಾಟಕ ಇನ್ನು ಅತ್ಯುನ್ನತ ರೀತಿಯಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಾಗಿದೆ ಎಂದು ಕರೆ ನೀಡಿದರು.
ಈ ವರ್ಷದ ಮಧ್ಯದಲ್ಲಿ ಜಾರಿಗೆ ಬರಲಿರುವ ಜಿಎಸ್‌ಟಿ ತೆರಿಗೆ ವ್ಯವಸ್ಥೆಯಿಂದ ಇಡೀ ದೇಶದಲ್ಲಿ ಏಕರೂಪದ ತೆರಿಗೆ ವಿಧಿಸಲಾಗುವುದು. ಆದ್ದರಿಂದ ಇಡೀ ದೇಶವೇ ಒಂದಾದಂತಾಗುತ್ತದೆ. ಕರ್ನಾಟಕ ಈ ವಿಚಾರದಲ್ಲಿ ಕೇಂದ್ರ ಸರಕಾರದೊಂದಿಗೆ ಪೂರಕವಾಗಿ ಸಹಕರಿಸುತ್ತಲೇ ಬಂದಿದೆ. ಜಿಎಸ್‌ಟಿ ಬಂದ ನಂತರದಲ್ಲಿ ತೆರಿಗೆಯ ಮೇಲೆ ತೆರಿಗೆ ಹಾಕುವ ಪದ್ಧತಿ ತಪ್ಪುತ್ತದೆ ಎಂದರು.
ಬಜೆಟ್‌ನಲ್ಲಿ 3 ಲಕ್ಷ 96 ಸಾವಿರ ಕೋಟಿ ರೂ. ಗಳನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಿಯೋಗ ಮಾಡಲಾಗಿದೆ. ಕರ್ನಾಟಕ ರಾಜ್ಯ ತಮ್ಮ ವಿವಿಧ ನೀತಿಗಳನ್ನು ಸಮಗ್ರಗೊಳಿಸಿ ಇನ್ನು ಹೆಚ್ಚಿನ ಬಂಡವಾಳ ಉತ್ಪಾದನಾ ಕ್ಷೇತ್ರದಲ್ಲಿ ರಾಜ್ಯಕ್ಕೆ ಹರಿದು ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಈಗ ಮುಂಚೂಣಿಯಲ್ಲಿರುವ ಕರ್ನಾಟಕ ದೇಶದ ಬೆಳವಣಿಗೆ ದರಕ್ಕಿಂತ ಶೇ. 3 ರಷ್ಟು ಹೆಚ್ಚಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಕೆಲಸ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಅನಂತ್‌ಕುಮಾರ್ ಮಾತನಾಡಿ, ಮುಂದಿನ ಮೂರು ವರ್ಷದೊಳಗೆ ರಾಜ್ಯದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪಿಸಲು ಚಿಂತನೆ ನಡೆದಿದೆ. ಉತ್ತರ ಕರ್ನಾಟಕದಲ್ಲಿ ರಸಗೊಬ್ಬರ ಕಾರ್ಖಾನೆಯನ್ನು ಸ್ಥಾಪಿಸಲು ಸರಕಾರ ಒಲವು ತೋರಿದೆ. ಈ ಕಾರ್ಖಾನೆ ಸ್ಥಾಪನೆಯಾದರೆ, ಗೊಬ್ಬರವನ್ನು ನಾವೇ ರಫ್ತು ಮಾಡಬಹುದು ಎಂದರು.
ಸಮಾರಂಭದಲ್ಲಿ ತುಮಕೂರಿನಲ್ಲಿ ಮೆಶಿನ್ ಟೂಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡವು. ಈ ವೇಳೆ ರಾಜ್ಯ ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಪ್ರಿಯಾಂಕ ಖರ್ಗೆ ಸೇರಿದಂತೆ ಇತರರು ಇದ್ದರು.
ಉದ್ದಿಮೆದಾರರಿಗೂ ರಾಜ್ಯೋತ್ಸವ ಪ್ರಶಸ್ತಿ : ಮುಂದಿನ ವರ್ಷದಿಂದ ಉದ್ದಿಮೆದಾರರಿಗೂ ರಾಜ್ಯ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.