ಗಂಟಲಲ್ಲಿ ಸಿಕ್ಕಿಕೊಂಡ ಮುಳ್ಳಿನಂಥ ಪ್ರಶ್ನೆ!

Update: 2017-02-23 06:11 GMT

ಅನಂತಭಟ್ಟರು ಮೌನವಾಗಿದ್ದು ಪತ್ನಿಯನ್ನು ಅಳುವುದಕ್ಕೆ ಬಿಟ್ಟರು. ಇಷ್ಟಾದರೂ ಬಾಯಿ ತೆರೆದಳಲ್ಲ ಎಂದು ಅವರಿಗೆ ಸಮಾಧಾನವಾಯಿತು.

ತರಬೇತಿಗಾಗಿ ಬೆಂಗಳೂರಿಗೆಂದು ಹೊರಡುವ ಎರಡು ದಿನಗಳಷ್ಟೇ ಇವೆ. ಆದರೆ ಪಪ್ಪುವಿಗೆ ಜಾನಕಿ ಮಾತನಾಡುವುದಕ್ಕೆ ಸಿಕ್ಕಿರಲೇ ಇಲ್ಲ. ಆಕೆಯ ಫಲಿತಾಂಶವೂ ಇನ್ನೇನು ಬರುವುದರಲ್ಲಿತ್ತು. ಆದರೆ ಆಕೆ ಒಂದೆರಡು ದಿನ ಊರಲ್ಲಿ ಉಳಿದು, ವಾಪಸಾಗಿದ್ದಳು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿಗೆ ಹೋಗುವ ಉದ್ದೇಶವನ್ನು ಆಕೆ ಹೊಂದಿದ್ದಾಳೆ ಎನ್ನುವುದು ತಿಳಿಯಿತು.

ತಾನು ಸೇನೆ ಸೇರುವುದು ಗುರೂಜಿ ಆಕೆಗೆ ಖಂಡಿತವಾಗಿಯೂ ಹೇಳಿರಬಹುದು. ಆಕೆಯ ಪ್ರತಿಕ್ರಿಯೆ ಹೇಗಿದ್ದಿರಬಹುದು ಎನ್ನುವುದನ್ನು ಕೇಳಿ ತಿಳಿದುಕೊಳ್ಳುವ ಆಸೆ ಪಪ್ಪುವಿನ ಒಳಗಿತ್ತು. ಜಾನಕಿ ನನ್ನ ಬಗ್ಗೆ ಹೆಮ್ಮೆ ಪಟ್ಟಿರಬಹುದೇ? ಅಥವಾ ಯುದ್ಧಭೂಮಿಗೆ ತೆರಳುವ ನನ್ನ ಕುರಿತಂತೆ ಸಂಕಟ ಪಟ್ಟಿರಬಹುದೇ? ಆಕೆಯನ್ನು ಮುಖತಃ ಮಾತನಾಡಿಸುವ ಆಸೆ ಪಪ್ಪುವಿನ ಒಳಗಿತ್ತು. ಎರಡು ಬಾರಿ ಗುರೂಜಿಯ ಮನೆಗೆ ತೆರಳಿ ಆಕೆಯಿದ್ದಾಳೋ ಎನ್ನುವುದನ್ನು ವಿಚಾರಿಸಿದ್ದ. ಆದರೆ ಊರಿಗೆ ಬಂದವಳು ಎರಡೇ ದಿನದಲ್ಲಿ ಮತ್ತೆ ಪುತ್ತೂರಿಗೆ ವಾಪಸಾಗಿದ್ದಳು.

ಪಪ್ಪುವಿನೊಳಗೆ ಇನ್ನೊಂದು ಸಂಕಟವಿತ್ತು. ತನ್ನ ಪ್ರೀತಿಯನ್ನು ಜಾನಕಿ ತನ್ನ ಮುಂದೆ ಹೇಳಿಕೊಂಡಿರಲಿಲ್ಲ. ತಾನೂ ಅಷ್ಟೇ. ನಮ್ಮ ನಡುವಿನ ಒಡಂಬಡಿಕೆ ಪರಸ್ಪರ ಅರಿವಿಲ್ಲದೆಯೇ ನಡೆದಿದೆ.

ಆದರೆ ಸೇನೆಗೆ ಸೇರುವ ಮುನ್ನ ತನ್ನ ಭಾವನೆಗಳನ್ನು ಜಾನಕಿಯ ಮುಂದೆ ಪೂರ್ಣವಾಗಿ ತೋಡಿಕೊಳ್ಳಬೇಕು ಅನ್ನಿಸಿತ್ತು ಪಪ್ಪುವಿಗೆ. ಆದರೆ ಆಕೆ ಸಿಗುತ್ತಲೇ ಇಲ್ಲ. ಕನಿಷ್ಠ ತಾನು ಸೇನೆಗೆ ಸೇರುತ್ತೇನೆ ಎಂದು ಗೊತ್ತಾದ ಬಳಿಕವಾದರೂ ಆಕೆ ತನ್ನ ಭೇಟಿಗೆ ಬರಬಹುದಿತ್ತು. ಅಥವಾ ಒಂದು ಪತ್ರವನ್ನಾದರೂ ಬರೆಯಬಹುದಿತ್ತಲ್ಲ? ಅಥವಾ ತನ್ನಿಂದಲೇ ಆಕೆ ಪತ್ರವನ್ನು ನಿರೀಕ್ಷಿಸುತ್ತಿದ್ದಾಳೆಯೇ? ಪಪ್ಪು ಅಂದು ರಾತ್ರಿ ತನ್ನ ಲೇಖಕ್ ನೋಟ್ ಬುಕ್ಕಿನ ಮಧ್ಯದ ಹಾಳೆಗಳನ್ನು ಹರಿದು ಹರಡಿದ. ಆ ಖಾಲಿ ಹಾಳೆಗಳ ಜೊತೆಗೆ ತಿಕ್ಕಾಟಕ್ಕಿಳಿದ.

ಏನೋ ಬರೆಯಲು ಹೋಗಿ ಅದಿನ್ನೇನೋ ಆಗಿ ಹಾಳೆಯನ್ನು ಮುದುಡಿ ಹಾಕುತ್ತಿದ್ದ ಪಪ್ಪು. ಹೀಗೆ ಬರೆಯುತ್ತಾ, ತಿದ್ದುತ್ತಾ, ಹರಿಯುತ್ತಾ, ಮಧ್ಯ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಒಂದು ಪತ್ರ ರೂಪು ಪಡೆಯಿತು.

‘‘ಪ್ರೀತಿಯ ಜಾನು,

ನಿನ್ನ ಬಯಕೆಯಂತೆ ನಾನು ಸೇನೆ ಸೇರಲು ಹೋಗುತ್ತಿದ್ದೇನೆ...

ನನಗೆ ಈ ದೇಶ ಮತ್ತು ನೀನು ಬೇರೆ ಬೇರೆಯಲ್ಲ.

ಈ ದೇಶಕ್ಕಾಗಿ ಪ್ರಾಣವರ್ಪಿಸುವುದು, ನಿನ್ನ ಪ್ರೀತಿಗಾಗಿ ಪ್ರಾಣವರ್ಪಿಸುವುದಕ್ಕೆ ಸಮವೆಂದು ಭಾವಿಸಿದ್ದೇನೆ.

ಮರಳಿ ಬರುವವರೆಗೆ ನನಗಾಗಿ ಕಾಯುವೆಯಾ?

ನಿನ್ನ ಪಪ್ಪು’’

ತನ್ನ ಚೀಲದಲ್ಲಿದ್ದ ಅನಕೃ ಅವರ ‘ರಣ ವಿಕ್ರಮ’ ಕಾದಂಬರಿಯ ಪುಟಗಳ ನಡುವೆ ಆ ಪತ್ರವನ್ನು ಅವನು ಭದ್ರವಾಗಿ ಇಟ್ಟುಕೊಂಡ. ರಣ ವಿಕ್ರಮ ಕಾದಂಬರಿಯನ್ನು ಅವನಿಗೆ ಓದಲು ಸೂಚಿಸಿದ್ದೇ ಜಾನಕಿ. ಅದಕ್ಕಾಗಿ ಅವನು ಉಪ್ಪಿನಂಗಡಿಯ ಲೈಬ್ರರಿಯನ್ನು ಜಾಲಾಡಿದ್ದ. ಕೊನೆಗೂ ಆ ಕೃತಿ ಸಿಕ್ಕಿತ್ತು. ಅದನ್ನು ಓದಿದಾಗ, ಜಾನಕಿ ಯಾಕೆ ಆ ಕಾದಂಬರಿಯನ್ನು ಸೂಚಿಸಿದಳು ಎನ್ನುವುದು ಅವನಿಗೆ ಹೊಳೆದಿತ್ತು. ಯಾಕೆಂದರೆ ಅದು ರಾಣಾಪ್ರತಾಪ ಸಿಂಹನ ಕುರಿತ ಕಾದಂಬರಿಯಾಗಿತ್ತು. ಆ ಕಾದಂಬರಿಯನ್ನು ಅವನು ಮೂರು ಬಾರಿ ಓದಿದ್ದ. ಸಮಯ, ಅವಕಾಶವಿದ್ದಿದ್ದರೆ ಇನ್ನೂ ಒಂದು ಬಾರಿ ಓದುತ್ತಿದ್ದ.

ಮರುದಿನ ಎದ್ದವನೇ ಸ್ನಾನ ಮಾಡಿ ಶುಚಿಯಾಗಿ, ಒಳ್ಳೆಯ ಬಟ್ಟೆ ಹಾಕಿಕೊಂಡು ಹೊರಟ.

‘‘ಗುರೂಜಿಯ ಮನೆಗೆ ತಾನೇ?’’ ಅಪ್ಪ ಕೇಳಿದ್ದರು.

‘‘ಹೌದಪ್ಪಾ...ಅವರ ಆಶೀರ್ವಾದ ತೆಗೆದುಕೊಂಡು ಬರೋಣ ಅಂತ’’ ಆತನ ಕೈಯಲ್ಲಿ ರಣವಿಕ್ರಮ ಕಾದಂಬರಿ ಭದ್ರವಾಗಿತ್ತು.

ಒಳಗೆ ತಾಯಿ ಅವನ ಬಟ್ಟೆಬರೆಗಳನ್ನು ಸಿದ್ಧಪಡಿಸುತ್ತಿದ್ದರು. ಇತ್ತೀಚೆಗೆ ಆಕೆ ಮಗನಲ್ಲಿ ಸರಿಯಾಗಿ ಮಾತೇ ಆಡುತ್ತಿರಲಿಲ್ಲ. ಏನೇ ಮಾತನಾಡಲು ಹೊರಟರೂ ಆಕೆಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಸುಮ್ಮನೆ ಅತ್ತು ಮಗನಿಗೆ ಸಂಕಟ ಕೊಡುವುದು ಯಾಕೆ ಎಂದು, ಆತನ ಕಣ್ಣು ತಪ್ಪಿಸಿಯೇ ತಿರುಗಾಡುತ್ತಿದ್ದರು. ದೇಶ ಸೇವೆಗಾಗಿ ಹೊರಟಿದ್ದಾನೆ ಎನ್ನುತ್ತಿದ್ದಾರೆ ಎಲ್ಲರೂ. ಹೀಗಿರುವಾಗ ನನ್ನಿಂದ ಅದಕ್ಕೆ ಅಡ್ಡಿ ಏಕೆ ಎಂದು ತನ್ನ ಕರ್ತವ್ಯವನ್ನು ನಿಭಾಯಿಸುವ ಪ್ರಯತ್ನವನ್ನು ಮಾಡುತ್ತಿದ್ದರು.

ಒಮ್ಮಮ್ಮೆ ‘‘ನಾನು ಸ್ವಾತಂತ್ರ ಹೋರಾಟಗಾರ ಮುಕುಂದರಾಯರ ಮೊಮ್ಮಗಳಾಗಿ ಹುಟ್ಟಬಾರದಿತ್ತು....ಅದಕ್ಕಾಗಿ ಇಷ್ಟೊಂದು ದೊಡ್ಡ ದಂಡವನ್ನು ನಾನು ತೆರಬೇಕೆ...’’ ಎಂದು ತನಗೆ ತಾನೇ ಕೇಳಿಕೊಳ್ಳುತ್ತಿದ್ದರು.

ತಾಯಿಯ ಜೊತೆಗೆ ಮುಖಕೊಟ್ಟು ಮಾತನಾಡಲು ಪಪ್ಪುವೂ ಅಂಜುತ್ತಿದ್ದ. ತಾಯಿಯನ್ನು ತೊರೆದು ನಾನು ಹೊರಗಡೆ ಬದುಕಬಲ್ಲೆನೇ? ಎನ್ನುವ ಅನುಮಾನ ಅವನಿಗೂ ಇದೆ. ಆಕೆಯ ಮುಖವನ್ನು ನೋಡಿದಾಕ್ಷಣ ಅವನಿಗೂ ಸಂಕಟವಾಗಿ ಅಳು ಬರುತ್ತಿತ್ತು. ತಾನು ಅತ್ತರೆ, ಸೇನೆಗೆ ಹೋಗುವುದನ್ನು ತಡೆಯಲು ತಾಯಿಗೆ ಸುಲಭವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಆಕೆಗೆ ಮುಖಕೊಟ್ಟು ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದ. ಮಾತನಾಡುವುದನ್ನೆಲ್ಲ ತಾಯಿಗೆ ಕೇಳುವಂತೆ ತಂದೆಗೆ ಹೇಳುತ್ತಿದ್ದ. ಗುರೂಜಿಯ ಮನೆಗೆ ಹೊರಡುವಾಗಲೂ ಆತ ಕೂಗಿದ್ದು ತಂದೆಯನ್ನೇ ಆಗಿದ್ದರೂ, ಆ ಕರೆ ತಾಯಿಗೆ ಕೇಳುತ್ತದೆ ಎನ್ನುವುದು ಅವನಿಗೆ ಗೊತ್ತಿತ್ತು.

ಗುರೂಜಿಯ ಮನೆಯ ಬಾಗಿಲನ್ನು ತಟ್ಟಿದಾಗ ಬಾಗಿಲು ತೆರೆದದ್ದು ಗುರೂಜಿಯ ಪತ್ನಿ ಪದ್ಮವ್ವ.

‘‘ನಮ್ಮ ಮನೆಗೆ ವೀರಯೋಧ ಪ್ರತಾಪ ಸಿಂಹನ ಆಗಮನ. ನಿಜಕ್ಕೂ ನಾವು ಧನ್ಯರು’’ ಎಂದು ನಗುತ್ತಾ ನಾಟಕೀಯವಾಗಿ ಪ್ರತಾಪ ಸಿಂಹನನ್ನು ಸ್ವಾಗತಿಸಿದರು. ಅಷ್ಟು ದೊಡ್ಡ ಗೌರವವನ್ನು ಅವರು ಯಾವತ್ತೂ ತನಗೆ ನೀಡಿರಲಿಲ್ಲ. ತನ್ನನ್ನು ನೋಡುವ ದೃಷ್ಟಿಯೂ ಈಗ ಬದಲಾಗಿದೆ ಅನ್ನಿಸಿತು ಅವನಿಗೆ. ತುಂಬಾ ಮುಜುಗರವಾಯಿತು. ಜೊತೆಗೆ ಹೆಮ್ಮೆ ಅನ್ನಿಸಿದ್ದೂ ಹೌದು.

ಜಾನಕಿ ಎಲ್ಲಿ ಎಂದು ಕೇಳಬೇಕು. ‘‘ಗುರೂಜಿಯವರನ್ನು ನೋಡಬೇಕಾಗಿತ್ತು?’’ ಮಾತು ಹೊರ ಬಿತ್ತು.

‘‘ಅವರು ದೇವರ ಕೋಣೆಯಲ್ಲಿದ್ದಾರೆ. ನಿನಗಾಗಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ಈಗ ಬರುತ್ತಾರೆ...’’ ಎಂದರು.

‘‘ಕುಳಿತುಕೋ, ಕುಡಿಯುವುದಕ್ಕೆ ಹಾಲು ತರುವೆ’’ ಎನ್ನುತ್ತಾ ಒಳಹೋದರು.

ತುಸು ಹೊತ್ತಲ್ಲಿ ಗುರೂಜಿ ಹೊರ ಬಂದರು. ಅವರ ಕೈಯಲ್ಲಿ ಕುಂಕುಮವಿತ್ತು. ಪಪ್ಪು ಅವರ ಕಾಲಿಗೆ ಬಿದ್ದ. ಆಶೀರ್ವಾದಿಸಿ ಹಣೆಗೆ ತಿಲಕವಿಟ್ಟರು. ಅಷ್ಟರಲ್ಲಿ ಹಾಲು ಹಿಡಿದುಕೊಂಡು ಗುರೂಜಿ ಪತ್ನಿಯೂ ಬಂದು ಬಿಟ್ಟರು.

‘‘ಜಾನಕಿ ಇಲ್ಲವೇ?’’ ಕೇಳಿಯೇ ಬಿಟ್ಟ.

‘‘ಅಯ್ಯೋ...ಮೊನ್ನೆ ಬಂದಿದ್ದಳು. ಇಡೀ ದಿನ ನಿನ್ನದೇ ಮಾತು. ನೀನು ಸೈನ್ಯಕ್ಕೆ ಸೇರುತ್ತಿರುವುದು ಕೇಳಿ ಅವಳಿಗೆ ತುಂಬಾ ಹೆಮ್ಮೆ...ನಿನ್ನ ಜೊತೆ ಮಾತನಾಡಬೇಕು ಎಂದು ಬಯಸಿದ್ದಳು. ಆದರೆ ಇಂದು ಬೆಳಗ್ಗೆ ಹತ್ತು ಗಂಟೆಗೆ ಪುತ್ತೂರು ತಲುಪಲೇ ಬೇಕಾಗಿತ್ತು. ಬೇಜಾರಿನಿಂದ ಹೋದಳು. ನಿನಗೆ ವಿಶೇಷ ಶುಭ ಹಾರೈಕೆಯನ್ನು ತಿಳಿಸಿದ್ದಾಳೆ...’’ ಗುರೂಜಿ ಪತ್ನಿಯೇ ಹೇಳಿದರು. ಪಪ್ಪುವಿಗೆ ಅದು ಕೇಳಿ ಸಂತೋಷವಾಯಿತು. ಆಕೆ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು ಅನ್ನಿಸಿತು.

‘ತನ್ನ ಕೈಯಲ್ಲಿರುವ ಪತ್ರವನ್ನು ಏನು ಮಾಡಲಿ?’ ಎನ್ನುವುದು ಅವನ ಮತ್ತೊಂದು ಸಮಸ್ಯೆ. ‘ಜಾನಕಿಗೆ ಕೊಟ್ಟುಬಿಡಿ’ ಎಂದು ಗುರೂಜಿ ಪತ್ನಿಯ ಕೈಯಲ್ಲಿ ಕೊಟ್ಟರೆ? ಬೇಡ, ಅದು ಬೇರೆ ಅನಾಹುತ ಮಾಡಿದರೆ ಕಷ್ಟ.

ಗುರೂಜಿ ಆತನ ಜೊತೆಗೆ ಇನ್ನೂ ಒಂದಿಷ್ಟು ಮಾತನಾಡಿದರು. ದೇಶ, ರಾಷ್ಟ್ರೀಯತೆ ಇತ್ಯಾದಿಗಳನ್ನು ಅವನಿಗೆ ನೆನಪಿಸಿಕೊಟ್ಟರು. ಊರನ್ನು ಮರೆಯಬೇಡ ಎಂದರು. ಮಾತೃ ಭೂಮಿಗಾಗಿ ಪ್ರಾಣ ತ್ಯಾಗ ಮಾಡುವುದು ಪ್ರತೀ ಭಾರತೀಯನ ಬದುಕಿನ ಅವಿಸ್ಮರಣೀಯ ಕ್ಷಣ ಎಂದೂ ಹೇಳಿದರು. ಎಲ್ಲವನ್ನೂ ತನ್ಮಯತೆಯಿಂದ ಪಪ್ಪು ಆಲಿಸಿದ. ಹೊರಡುವ ಮುನ್ನ ಮತ್ತೊಮ್ಮೆ ಅವರ ಕಾಲಿಗೆರಗಿದ.

ಮನೆಯ ಕಾಂಪೌಂಡ್ ದಾಟಿದಾಗ ತನ್ನ ಕೈಯಲ್ಲಿರುವ ‘ರಣವಿಕ್ರಮ’ ಕೃತಿಯನ್ನು ಮುಖದೆಡೆಗೆ ತಂದ. ಅದರೊಳಗೆ ನಿದ್ರಿಸುತ್ತಿರುವ ಪತ್ರವನ್ನು ನೆನೆದು ಅವನ ಮನಸ್ಸು ಭಾರವಾಯಿತು. ಕೃತಿಯನ್ನು ಎದೆಗೆ ಬಲವಾಗಿ ಒತ್ತಿಕೊಂಡ. ಎಲ್ಲೋ ಎನೋ ಸಣ್ಣದೊಂದು ನೋವು ಕದಲಿದಂತಾಯಿತು.

ಬೆಳ್ಳಂಬೆಳಗ್ಗೆ ನೋಡಿದರೆ ಜೋರಾಗಿ ಮಳೆ. ಇನ್ನೂ ಬೆಳಕು ಹರಿದಿಲ್ಲ. ಅಂತಹದೊಂದು ಮಳೆಯನ್ನು ಆ ಹೊತ್ತಲ್ಲಿ ಅನಂತಭಟ್ಟರೂ ನಿರೀಕ್ಷಿಸಿರಲಿಲ್ಲ. ಗುರೂಜಿ ತಮ್ಮ ಮನೆಯಲ್ಲಿ ಕಾರಿನ ಜೊತೆಗೆ ಪಪ್ಪುವಿಗಾಗಿ ಕಾಯುತ್ತಿದ್ದರು. ‘‘ಮಂಗಳೂರಿನವರೆಗೆ ನಾನೂ ಬರುತ್ತೇನೆ, ನನ್ನ ಕಾರಿನಲ್ಲೇ ಹೋಗುವ’’ ಎಂದು ಅವರೇ ಅನಂತ ಭಟ್ಟರಲ್ಲಿ ಹೇಳಿದ್ದರು.

ಮನೆಯೊಳಗೆ ಮರದ ಕಾಲಿನ ಒಂದು ದೊಡ್ಡ ಕೊಡೆಯಿತ್ತು. ಲಕ್ಷ್ಮಮ್ಮ ಆ ಕೊಡೆಯಲ್ಲಿರುವ ಧೂಳನ್ನು ಕೊಡವಿ ಬಿಡಿಸಿದರು. ಆ ಕೊಡೆಯೊಳಗೆ ಮೂರು ಜೀವಗಳೂ ತೂರಿಕೊಂಡವು. ನೆಪಕ್ಕಷ್ಟೇ ಆ ಛತ್ರಿ ಅವರ ನೆತ್ತಿಯ ಮೇಲಿತ್ತು. ಆದರೆ ಮೂವರು ಮಳೆಗೆ ಒದ್ದೆಯಾಗುತ್ತಲೇ ಗದ್ದೆ ಪುಣಿಯನ್ನು ದಾಟಿ ಬಜತ್ತೂರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಮೂವರೊಳಗೂ ಹೆಪ್ಪುಗಟ್ಟಿದ ವೌನ. ಯಾರಿಗೂ ಆ ವೌನವನ್ನು ಮುಟ್ಟುವ ಧೈರ್ಯವಿರಲಿಲ್ಲ.

ಗುರೂಜಿಯ ಮನೆ ತಲುಪಿದವರೇ ಎಲ್ಲರೂ ಕಾರು ಹತ್ತಿ ಮಂಗಳೂರು ಕಡೆ ಹೊರಟರು.

‘‘ಇದೆಂಥದು ಮಾಷ್ಟ್ರೆ....ಎಲ್ಲ ಒದ್ದೆಯಾಗಿ ಬಿಟ್ಟಿದ್ದೀರಿ. ನಾನೇ ಕಾರು ಸಮೇತ ಅಲ್ಲಿಯವರೆಗೆ ಬರುತ್ತಿದ್ದೆ....ನಿಮ್ಮ ಆ ಗದ್ದೆ ಪುಣಿಯಲ್ಲಿ ನನ್ನ ಕಾರು ಹೋಗುವುದಿಲ್ಲ ಎನ್ನುವುದು ಇನ್ನೊಂದು ಸಮಸ್ಯೆ...’’ ಎಂದರು.

ಯಾರದೂ ಮಾತಿಲ್ಲ. ಆಗಾಗ ಗುರೂಜಿಯೇ ಪ್ರತಾಪಸಿಂಹನನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

‘‘ನಿನ್ನೆ ಬೆಳಗ್ಗೆ ನಮ್ಮ ಶಾಖೆಯಲ್ಲಿ ಪ್ರತಾಪಸಿಂಹನದೇ ಮಾತು...’’ ಎಂದರು.

ತನಗಾಗಿ ಗೂರೂಜಿ ತಮ್ಮ ಕಾರಿನಲ್ಲಿ ಬಂದಿರುವುದು ಪಪ್ಪುವಿಗೆ ತುಂಬಾ ಹೆಮ್ಮೆಯಾಗಿತ್ತು. ಅದೇನೇ ಇರಲಿ, ಜಾನಕಿ ಈ ಹೊತ್ತಿನಲ್ಲಿ ಇದ್ದಿದ್ದರೆ ಎಷ್ಟು ಅರ್ಥಪೂರ್ಣವಾಗುತ್ತಿತ್ತು ಎಂದು ಅವನಿಗೆ ಪದೇ ಪದೇ ಅನ್ನಿಸಿತು. ಲಕ್ಷ್ಮಮ್ಮ ಪ್ರಯಾಣದುದ್ದಕ್ಕೂ ತನ್ನ ಒದ್ದೆ ತಲೆ, ಕೆನ್ನೆಯನ್ನು ಒರೆಸುತ್ತಲೇ ಇದ್ದರು. ಆಗಾಗ ಅವರು ‘ಎಂಥ ಮಳೆ ಇದು...ಎಂಥ ಮಳೆ ಇದು...’’ ಎಂದು ಗೊಣಗುತ್ತಿದ್ದರು. ಮಂಗಳೂರು ತಲುಪಿ ಬಸ್ಸು ಹತ್ತುವ ಮೊದಲು ತಾಯಿಯ ಕಾಲಿಗೆ ಎರಗಿದ ಪಪ್ಪುವಿಗೆ ಅಳು ಉಕ್ಕಿ ಬಂತು. ತಾಯಿಯನ್ನು ತಬ್ಬಿಕೊಂಡ. ಲಕ್ಷ್ಮಮ್ಮನಿಗೆ ಮಗನನ್ನು ಕಾಡಿಗೆ ಕಳುಹಿಸುತ್ತಿದ್ದೇನೆ ಅನ್ನಿಸಿತು. ಅವರೊಳಗೆ ನೂರು ಪ್ರಶ್ನೆಗಳು ಇದ್ದವು ಕೇಳುವುದಕ್ಕೆ. ಅದರಲ್ಲಿ ಮುಖ್ಯವಾದದ್ದೊಂದು ಗಂಟಲಲ್ಲಿ ಮುಳ್ಳಿನಂತೆ ಸಿಕ್ಕಿಕೊಂಡಿತ್ತು.

‘‘ಸೇನೆಯಲ್ಲಿ ಮಾಂಸ ತಿನ್ನುತ್ತಾರಂತೆ, ಹೌದೇನೋ?’’

ಆದರೆ ಇಂತಹ ಪ್ರಶ್ನೆ ಕೇಳುವುದಕ್ಕೆ ಇದು ಸಂದರ್ಭವಲ್ಲ ಅನ್ನಿಸಿ, ಪ್ರಶ್ನೆಯನ್ನು ಹೊಟ್ಟೆಯೊಳಗೇ ಉಳಿಸಿಕೊಂಡರು.

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News