ಭಾಷೆಯನ್ನು ಮೀರಿ ಹೃದಯ ಮುಟ್ಟುವ ಕಥೆಗಳು
ಅನುವಾದವೆನ್ನುವುದು ಎರಡು ಭಾಷೆಯ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರವಲ್ಲ, ಆ ಮೂಲಕ ಎರಡು ಸಂಸ್ಕೃತಿಗಳೂ ಸೌಹಾರ್ದವಾಗಿ ಬೆಸೆದು ಕೊಳ್ಳುತ್ತದೆ. ಹತ್ತು ಹಲವು ಪ್ರಾದೇಶಿಕ ಭಾಷೆಗಳ ಮೂಲಕ ಸಂರಚನೆಗೊಂಡಿರುವ ಭಾರತೀಯ ಸಮಾಜದಲ್ಲಿ ಅನುವಾದಕರ ಹೊಣೆಗಾರಿಕೆ ಬಹುದೊಡ್ಡದು.
ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಹೊರತಂದಿರುವ ವಿವಿಧ ಭಾಷೆಗಳ ಅನುವಾದಿತ ಕತೆಗಳ ಸಂಗ್ರಹ ‘ಘನವು ಎಂಬುದು’ ತನ್ನದೇ ವೈವಿಧ್ಯತೆಗಳ ಮೂಲಕ ಗಮನ ಸೆಳೆಯುತ್ತದೆ. ಕತೆಗಾರರಾದ ಅಬ್ಬಾಸ್ ಮೇಲಿನ ಮನಿ ಈ ಕೃತಿಯ ಸಂಪಾದಕರಾಗಿದ್ದಾರೆ.
ಅನುವಾದ ಎಂಬುದು ಮಕ್ಕಿಕಾ ಮಕ್ಕಿ ಕ್ರಿಯೆಯಲ್ಲ. ಬಿಎಂಶ್ರೀ ಅವರು ಹೇಳಿದಂತೆ ‘‘ಇವಳ ಸೊಬಗನವಳಿಗಿಟ್ಟು ನೋಡುವ, ಅವಳ ತೊಡುಗೆ ಇವಳಿಗಿಟ್ಟು ಹಾಡುವ ಪ್ರೀತಿಯ ಕಾತರದ್ದು.’’ ಸೃಜನಶೀಲ ಮನಸ್ಸೊಂದು ಒಳಿತಾಗಿರುವುದನ್ನು ಅನುವಾದದ ಪ್ರಕ್ರಿಯೆಯ ಮೂಲಕ ಸಾರ್ವತ್ರಿಕಗೊಳಿಸುವಲ್ಲಿ ಸಹಜವಾಗಿಯೇ ತುಡಿಯುತ್ತದೆ. ಇದು ಭಾವ ಭಾಷೆಗಳ ಅಸ್ಮಿತೆ ಎನ್ನುವ ನಂಬಿಕೆಯೊಂದಿಗೆ ಸಂಪಾದಕರು ಪ್ರತೀ ಅನುವಾದದ ಕುರಿತು ಜಾಗರೂಕತೆವಹಿಸಿದ್ದಾರೆ. ಇಲ್ಲಿರುವ ಎಲ್ಲ ಕತೆಗಳು ತನ್ನ ಮೂಲ ಭಾಷೆಯ ಸೂಕ್ಷ್ಮತೆಗೆ ಧಕ್ಕೆ ಮಾಡದೆಯೇ ಕನ್ನಡಕ್ಕಿಳಿದಿರುವುದು ಕೃತಿಯ ಹೆಗ್ಗಳಿಕೆ.
ಇಲ್ಲಿರುವ ಕತೆಗಳು ಕೇವಲ ಭಾರತೀಯ ಭಾಷೆಗೆ ಸೀಮಿತವಾದುದಲ್ಲ. ಬಂಗಾಳಿಯ ರವೀಂದ್ರನಾಥ ಠಾಗೋರ್, ಮರಾಠಿಯ ಇರಾವತಿ ಕರ್ವೆ, ಮಲಯಾಳಂನ ಮಾನಸಿ, ಉರ್ದುವಿನ ಇಸ್ಮತ್ ಚುಗ್ತಾಯ್, ರಷ್ಯನ್ ಲೇಖಕ ಲಿಯೋ ಟಾಲ್‌ಸ್ಟಾಯ್ ಹಾಗೆಯೇ ವೈಕ್ಕಂ ಮುಹಮ್ಮದ್ ಬಶೀರ್, ಶರಣಕುಮಾರ ಲಿಂಬಾಳೆ....ಹೀಗೆ ಹೆಸರುಗಳು ಮುಂದು ವರಿಯುತ್ತವೆ.
ಜಗತ್ತಿನ ಎಲ್ಲ ಭಾಷೆಗಳ ಗಡಿಗಳನ್ನು ಮೀರಿ ಮನುಷ್ಯ ಮನಸ್ಸುಗಳು ಈ ಕೃತಿಯಲ್ಲಿ ಒಂದಾಗಿವೆ. ಜಮೀನ್ದಾರಿ ಪದ್ಧತಿಯ ಕರಾಳ ಮುಖವನ್ನು ತೋರಿಸುವ ರವೀಂದ್ರ ನಾಥ ಟಾಗೋರರ ‘ಎರಡು ಬೀೆ ಜಮೀನು’, ಭೂಮಿಯ ದಾಹದ ಪರಿಯನ್ನು ಹೇಳುತ್ತಲೇ ಹೇಗೆ ಅದು ಆತನನ್ನು ದುರಂತಕ್ಕೆ ತಳ್ಳುತ್ತದೆ ಎಂದು ಹೇಳುವ ಲಿಯೋ ಟಾಲ್‌ಸ್ಟಾಯ್ ಅವರ ‘ಮನುಷ್ಯನಿಗೆ ಅದೆಷ್ಟು ಭೂಮಿ ಬೇಕು?’, ಪ್ರಕೃತಿಯನ್ನು ಕಳೆದುಕೊಂಡ ಮನುಷ್ಯನ ತಲ್ಲಣಗಳನ್ನು ಹೇಳುವ ತಮಿಳಿನ ಡಾ. ವೈರಮುತ್ತು ಅವರ ಕತೆ ‘ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು...’, ಜಾತಿಮತ ಭೇದಗಳಾಚೆಗೆ ಮನುಷ್ಯ ಸಂಬಂಧವನ್ನು ಪ್ರತಿಪಾದಿಸುವ ತಮಿಳಿನ ನಾಂಜಿಲ್ ನಾಡನ್‌ರವರ ‘ಖಾನ್‌ಸಾಹೇಬ್..’ ಒಂದಕ್ಕಿಂತ ಒಂದು ಹೃದಯಸ್ಪರ್ಶಿ ಕತೆಗಳು ಇಲ್ಲಿವೆ. ಎಲ್ಲವೂ ಪರಸ್ಪರ ಸಂವಾದಿಸುತ್ತವೆ. ಇಲ್ಲಿ ಒಟ್ಟು 35 ಬೇರೆ ಬೇರೆ ಭಾಷೆಗಳ ಕಥೆಗಳನ್ನು ನಾವು ಕಾಣಬಹುದು.
430 ಪುಟಗಳನ್ನು ಹೊಂದಿ ರುವ ಕೃತಿಯ ಮುಖಬೆಲೆ 200 ರೂಪಾಯಿ.