ಪೇಜಾವರಶ್ರೀಗೆ ಭಾರತೀಯನೊಬ್ಬನ ಕಳಕಳಿಯ ಪತ್ರ
‘ಅರಮನೆ-ಗುರುಮನೆ’ ನಡುವಿನ ಅನೈತಿಕ ಸಂಬಂಧ ಹೇಗೆ ನಮ್ಮ ನಾಡನ್ನು ನಾಶದ ಕಡೆಗೆ ಒಯ್ಯಬಹುದು ಎನ್ನುವುದನ್ನು ತೆರೆದಿಡುವ ಕೃತಿಯಾಗಿದೆ ಜಿ. ಕೆ. ಗೋವಿಂದರಾವ್ ಅವರು ಬರೆದ ‘ಮನು ವಿರುದ್ಧ ಅಂಬೇಡ್ಕರ್’ ಕೃತಿ. ಅತ್ಯಂತ ಕುತೂಹಲಕರ ಸಂಗತಿಯೆಂದರೆ, ಈ ಕೃತಿ ಒಂದು ಸುದೀರ್ಘ ಪತ್ರವಾಗಿದೆ. ಅರಮನೆಯ ಜೊತೆಗೆ ಪರೋಕ್ಷ ಸಂಬಂಧವನ್ನು ಇಟ್ಟುಕೊಂಡಿರುವ ಗುರುಮನೆಗೆ ಗೋವಿಂದರಾವ್ ಅವರು ಬರೆದ ಪತ್ರದ ಸಾರವೇ ಈ ಪುಸ್ತಕ ರೂಪವಾಗಿ ಹೊರಬಂದಿದೆ. ವರ್ತಮಾನದ ರಾಜಕೀಯ, ತಾತ್ವಿಕ, ಧರ್ಮಸೂಕ್ಷ್ಮ ಹಾಗೂ ವಾಸ್ತವಿಕ ಪ್ರಶ್ನೆಗಳನ್ನೆತ್ತಿ ಸಂವಾದ ನಡೆಸುವ ರೀತಿಯಲ್ಲಿ ಹಿರಿಯ ಚಿಂತಕ, ವಿಚಾರವಾದಿ ರಂಗಕರ್ಮಿ ಪ್ರೊ. ಜಿ.ಕೆ.ಗೋವಿಂದರಾವ್ ಅವರು ಪೇಜಾವರಶ್ರೀಗಳಿಗೊಂದು ದೀರ್ಘ ಪತ್ರವನ್ನು ಬರೆದಿದ್ದಾರೆ. ಮುನ್ನುಡಿಯಲ್ಲಿ ಹೇಳುವಂತೆ, ಇಲ್ಲಿ ವೈಯಕ್ತಿಕ ಅನ್ನುವಂಥದೇನೂ ಇಲ್ಲದೆ ಗೋವಿಂದರಾವ್-ಪೇಜಾವರ ಸ್ವಾಮೀಜಿ ಅಂತೆಯೇ ಅಂಬೇಡ್ಕರ್-ಮನು ಇವರೆಲ್ಲರೂ ಮನುಷ್ಯಕುಲಕ್ಕೆ ಬಿಡುಗಡೆ ನೀಡುವ, ಬಂಧನಕ್ಕೆ ಒಳಪಡಿಸುವ ಎರಡು ಮನೋಧರ್ಮಗಳ ಸಂಕೇತ, ಪ್ರತಿನಿಧಿಗಳಾಗಿದ್ದಾರೆ. ಮನುಷ್ಯ ನಾಗರಿಕತೆಯನ್ನು ಕಟ್ಟಿಕೊಂಡಾಗಿನಿಂದ ನಡೆಯುತ್ತಾ ಬಂದಿರುವ ವಾಗ್ವಾದದ ಸರಪಳಿಯಲ್ಲಿ ಗೋವಿಂದರಾವ್ ಅವರ ಬರಹ ಇತ್ತೀಚಿನ ಸೇರ್ಪಡೆಯಾಗಿದೆ.
ಒಂದು ಲೇಖನ ನಮ್ಮನ್ನು ಒಳಗೊಳ್ಳುವುದಕ್ಕಿಂತ ಒಂದು ಪತ್ರ ಹೆಚ್ಚು ಆತ್ಮೀಯವಾಗಿ ನಮ್ಮನ್ನು ತಟ್ಟುತ್ತದೆ, ಮುಟ್ಟುತ್ತದೆ. ಪತ್ರಬರೆಯುವವನು ಮತ್ತು ಓದುವವನ ನಡುವೆ ಸಂವಹನಕ್ಕೆ ಅವಕಾಶವಿದೆ. ಅಂದರೆ ತಾನು ಯಾರ ವಿರುದ್ಧ ಮಾತನಾಡುತ್ತಿದ್ದೇನೆಯೋ ಅವರ ಮಾತುಗಳನ್ನು ಆಲಿಸುವ ಉದ್ದೇಶವನ್ನು ಪತ್ರ ಹೊಂದಿರುತ್ತದೆ. ಇಲ್ಲಿ ಜಿ.ಕೆ. ರಂಗನಾಥ ರಾವ್ ಅವರ ಚಿಂತನೆಗಳು ಇಷ್ಟವಾಗುವುದು ಈ ಕಾರಣಕ್ಕಾಗಿ. ತನ್ನ ಮಾತುಗಳೇ ಅಂತಿಮ ಎಂದು ಮುಕ್ತಾಯ ಹಾಡದೆ, ಪೇಜಾವರ ಶ್ರೀಗಳನ್ನೂ ಚರ್ಚೆಗೆ ಆಹ್ವಾನಿಸುತ್ತಾರೆ. ಇಲ್ಲಿ ಪೇಜಾವರ ಶ್ರೀ ಒಂದು ನೆಪ ಮಾತ್ರ. ಸನಾತನ ಮನು ಚಿಂತನೆಯನ್ನು ತಲೆಯಲ್ಲಿ ಧರಿಸಿಕೊಂಡ ಎಲ್ಲರನ್ನೂ ಗುರಿಯಾಗಿಸಿಕೊಂಡು ಈ ಪತ್ರವನ್ನು ಬರೆಯಲಾಗಿದೆ.
ಪೇಜಾವರಶ್ರೀಗಳು ಮಾಧ್ಯಮಗಳಲ್ಲಿ ನೀಡಿದ ಕೆಲವು ಗೊಂದಲಕಾರಿ ಹೇಳಿಕೆಗಳೇ ಜಿಕೆ ಅವರ ಈ ಪತ್ರಕ್ಕೆ ಕಾರಣವಾಗಿದೆ. ಪಂಕ್ತಿಭೇದದ ಕುರಿತಂತೆ ವಿರೋಧಾಭಾಸ ಹೇಳಿಕೆಗಳು, ಶಾಸ್ತ್ರ ಮತ್ತು ಸಂವಿಧಾನವನ್ನು ಸಮನ್ವಯಗೊಳಿಸಬೇಕು ಎಂಬ ಪೇಜಾವರ ನಿಲುವುಗಳನ್ನು ಇಟ್ಟುಕೊಂಡು ತನ್ನ ಪತ್ರವನ್ನು ಆರಂಭಿಸುತ್ತಾರೆ. ಅದು ಕೇವಲ ಉಡುಪಿಗೆ ಸೀಮಿತವಾಗದೆ ಇಡೀ ದೇಶವನ್ನು ಆವರಿಸುತ್ತಿರುವ ಮತಾಂಧತೆ, ಮೂಲಭೂತವಾದ, ಜಾತೀಯತೆಯನ್ನು ಚರ್ಚಿಸುತ್ತದೆ. ಜಿಕೆ ಗೋವಿಂದರಾವ್ ಬರೆದ ಪತ್ರ, ಮಾನವೀಯ ವೌಲ್ಯಗಳ ಮೇಲೆ ನಂಬಿಕೆಯಿಟ್ಟ ಪ್ರತೀ ಭಾರತೀಯನ ಆತಂಕಗಳಾಗಿವೆ. ಅಳಲುಗಳಾಗಿವೆ. ಪೇಜಾವರ ಶ್ರೀ ಈ ಪತ್ರವನ್ನು ಬಿಡಿಸಿ ಓದಿ, ತಮ್ಮನ್ನು ತಾವು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.
ಗದಗದ ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ 68 ಪುಟಗಳನ್ನು ಹೊಂದಿವೆ. ಮುಖಬೆಲೆ 30 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.