ಪ್ರತಿ 5 ಕಿ.ಮೀ.ನಲ್ಲಿ ನೂತನ ಪೊಲೀಸ್ ಠಾಣೆ: ಗೃಹ ಸಚಿವ ಪರಮೇಶ್ವರ್

Update: 2017-02-27 14:56 GMT

ಬೆಂಗಳೂರು, ಫೆ. 27: ನಗರ ವ್ಯಾಪ್ತಿಯಲ್ಲಿ ರೌಡಿಸಂ ಮಟ್ಟಹಾಕುವ ಜೊತೆಗೆ ಸಾರ್ವಜನಿಕರಿಗೆ ರಕ್ಷಣೆ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪ್ರತಿ 5 ಕಿ.ಮೀ ವ್ಯಾಪ್ತಿಯೊಳಗೆ ನೂತನ ಪೊಲೀಸ್ ಠಾಣೆಗಳನ್ನು ಪುನರ್ ವಿಂಗಡಿಸಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.

 ಸೋಮವಾರ ನಗರದ ಗುರಪ್ಪನಪಾಳ್ಯ, ಬೇಗೂರು, ಬಂಡೆಪಾಳ್ಯಗಳಲ್ಲಿ ನೂತನ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಈ ಹಿಂದೆ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಪೊಲೀಸ್ ಠಾಣೆ ಇತ್ತು. ಇದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಒಂದು ವರ್ಷದಿಂದ ಠಾಣೆಗಳ ಪುನರ್ ವಿಂಗಡಣೆ ನಡೆಯುತ್ತಿದೆ. ಈಗಾಗಲೇ 8 ಹೊಸ ಪೊಲೀಸ್ ಠಾಣೆಗಳು, ಒಂದು ಹೆಚ್ಚುವರಿ ಉಪ ವಲಯವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ದುಷ್ಟರನ್ನು ರಕ್ಷಿಸುವ ಕೆಲಸವನ್ನು ಪೊಲೀಸರು ಮಾಡಬಾರದು ಎಂದು ಎಚ್ಚರಿಕೆ ನೀಡಿದ ಅವರು, ಬೆಂಗಳೂರಿನಲ್ಲಿ ನಡೆದ ಎಲ್ಲ ಕೊಲೆಗಳನ್ನು ಪರಿಶೀಲಿಸಿದಾಗ ಹೆಚ್ಚಿನ ಕೊಲೆಗಳು ರಿಯಲ್ ಎಸ್ಟೇಟ್ ಕಾರಣಗಳಿಗಾಗಿ ನಡೆದಿವೆ ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಪೊಲೀಸರು ರಿಯಲ್ ಎಸ್ಟೇಟ್ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.

ಬೇಗೂರು ಪೊಲೀಸ್ ಠಾಣೆ ಪ್ರಸಕ್ತ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿನ ಶಾಸಕರು ಮತ್ತು ಜನಪ್ರತಿನಿಧಿಗಳು ಸೂಕ್ತ ಜಾಗವನ್ನು ಒದಗಿಸಿಕೊಟ್ಟರೆ, ಸುಂದರ ಕಟ್ಟಡ ನಿರ್ಮಿಸಿ ಕೊಡಲಾಗುವುದೆಂದು ಪರಮೇಶ್ವರ್ ಭರವಸೆ ನೀಡಿದರು.

ನಾಗರಿಕರು ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಪೊಲೀಸರ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ಅವರಿಗೆ 322 ಹೊಸ ವಾಹನಗಳನ್ನು ಒದಗಿಸಲಾಗಿದೆ. ಹಿಂದಿನ ಬಿಜೆಪಿ ಸರಕಾರ 5 ವರ್ಷಗಳಲ್ಲಿ ಪೊಲೀಸ್ ಹುದ್ದೆಯನ್ನು ತುಂಬುವ ಕೆಲಸ ಮಾಡಿರಲಿಲ್ಲ ಎಂದು ದೂರಿದರು.

ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಮಾಧ್ಯಮಗಳು ಅದನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡಿದವು. ಇದರಿಂದ ನಗರದ ಗೌರವಕ್ಕೆ ಧಕ್ಕೆ ಬಂತು ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯ ಪೊಲೀಸರು ಸುರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಾರದೊಳಗೆ ಅಥವಾ ಅದಕ್ಕಿಂತಲೂ ಮೊದಲು ಅಪರಾಧಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬೋವೇರಿ ಮತ್ತು ಇರಾನಿ ಗ್ಯಾಂಗ್‌ಗಳನ್ನು ಮಟ್ಟ ಹಾಕಲಾಗಿದೆ. ಇದರಿಂದ ಸರ ಅಪಹರಣಗಳಂತ ಪ್ರಕರಣಗಳು ಕಡಿಮೆಯಾಗಿವೆ. ಸಾರ್ವಜನಿಕರೂ ಕೂಡ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ, ನಗರದಲ್ಲಿ ಇನ್ನಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಪರಮೇಶ್ವರ್ ನುಡಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಪೊಲೀಸರು, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಪೊಲೀಸ್ ಮಾಹಿತಿದಾರರನ್ನಾಗಿ ನೇಮಿಸಿಕೊಳ್ಳಬಾರದು. ಅವರೊಂದಿಗೆ ಯಾವುದೇ ರೀತಿಯ ವ್ಯವಹಾರ ಕುದುರಿಸಿಕೊಳ್ಳಬಾರದು ಎಂದು ಹೇಳಿದರು. ಬೇಗೂರು ವಾರ್ಡ್‌ಗೆ ನಿರಂತರ ವಿದ್ಯುತ್, ಕುಡಿಯುವ ನೀರಿನ ಪೂರೈಕೆ ಸೇರಿದಂತೆ, ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭರವಸೆ ನೀಡಿದರು.

 ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗಕ್ಕೆ ಬಂಡೇಪಾಳ್ಯ ಪೊಲೀಸ್ ಠಾಣೆ, ಬೇಗೂರು ಪೊಲೀಸ್ ಠಾಣೆ ಹಾಗೂ ಮೈಕೋ ಲೇಔಟ್ ಉಪವಿಭಾಗ ವ್ಯಾಪ್ತಿಗೆ ಗುರಪ್ಪನಪಾಳ್ಯ ಪೊಲೀಸ್ ಠಾಣೆ ಒಳಪಡಲಿದೆ. ನೂತನ ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಬೋರಲಿಂಗಯ್ಯ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News