ಸಾಮಾಜಿಕ-ಆರ್ಥಿಕ ಸಮೀಕ್ಷೆ : ಎಪ್ರಿಲ್‌ನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲು ಆಯೋಗದ ಸಿದ್ಧತೆ

Update: 2017-03-03 15:43 GMT

 ಬೆಂಗಳೂರು, ಮಾ.3: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ ಜನಗಣತಿ)ಯ ವರದಿಯನ್ನು ಎಪ್ರಿಲ್‌ನಲ್ಲಿ ಸರಕಾರಕ್ಕೆ ಸಲ್ಲಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸ್ವತಂತ್ರ ಭಾರತದಲ್ಲಿ ನಡೆದಂತಹ ಮೊಟ್ಟಮೊದಲ ಜಾತಿವಾರು ಜನಗಣತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಮೀಕ್ಷಾ ವರದಿಯು ವಿವಿಧ ಕಾರಣಗಳಿಂದಾಗಿ ಇನ್ನೂ ಸರಕಾರದ ಕೈ ಸೇರಿಲ್ಲ. ಇದೀಗ, ವರದಿಯ ಸಿದ್ಧತೆ ಕಾರ್ಯವು ಅಂತಿಮ ಹಂತದಲ್ಲಿದ್ದು ಎಪ್ರಿಲ್‌ನಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಸಭೆಗಳನ್ನು ನಡೆಸಿದ್ದು, ಸಮೀಕ್ಷೆ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಸಂಬಂಧ ಚರ್ಚೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ.

ವಿರೋ: ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಜಾತಿವಾರು ಜನಗಣತಿಯ ಸಮೀಕ್ಷಾ ವರದಿಯನ್ನು ಸರಕಾರ ಬಿಡುಗಡೆ ಮಾಡದಂತೆ ಕೆಲ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ ಎಂದು ಕೇಳಿ ಬಂದಿದೆ.

ಆಯೋಗವು ಸರಕಾರಕ್ಕೆ ವರದಿ ಹಸ್ತಾಂತರಿಸಿದ ಬಳಿಕವು ಸರಕಾರ ಅದನ್ನು ಬಿಡುಗಡೆ ಮಾಡದಿದ್ದರೆ, ವಿರೋಧ ಪಕ್ಷಗಳು ಈ ವಿಷಯವನ್ನು ಚುನಾವಣೆ ಸಂದರ್ಭದಲ್ಲಿ ಸರಕಾರದ ವಿರುದ್ಧ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ, ಸರಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ಸಮೀಕ್ಷಾ ವರದಿಯನ್ನು ಸರಕಾರಕ್ಕೆ ಹಸ್ತಾಂತರ ಮಾಡಿ ತನ್ನ ಪಾಲಿನ ಕರ್ತವ್ಯವನ್ನು ಪೂರ್ಣಗೊಳಿಸಲು ಆಯೋಗವು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ವರದಿಯನ್ನು ಸ್ವೀಕರಿಸಿದ ಬಳಿಕ ಅದನ್ನು ಯಾವಾಗ ಬಿಡುಗಡೆ ಮಾಡಬೇಕು ಎಂಬುದು ಸರಕಾರದ ವಿವೇಚನೆ ಬಿಟ್ಟ ವಿಚಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News