ಯಡಿಯೂರಪ್ಪ ವಿರುದ್ಧ ಬಿಜೆಪಿ ಅತೃಪ್ತರ ಆಕ್ರೋಶ

Update: 2017-03-06 15:30 GMT

ಬೆಂಗಳೂರು, ಮಾ.6: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರದಿಂದ ಪಕ್ಷದ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ನಿಷ್ಠಾವಂತ ಕಾರ್ಯಕರ್ತರು ನೋವು ಅನುಭವಿಸುವಂತಾಗಿದೆ ಎಂದು ಬಿಜೆಪಿಯ ಅತೃಪ್ತ ಬಣದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಶಾಸಕರ ಭವನದಲ್ಲಿ ಭಿನ್ನಮತೀಯ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಅತೃಪ್ತಿಗೆ ಕಾರಣವಾಗಿರುವ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಆದೇಶವನ್ನು ಪಾಲಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ನಮಗೆ ಅತೃಪ್ತಿ ಇರೋದು ನಿಜ. ನಾವು ಭಿನ್ನಮತೀಯರು ಹೌದು, ನಮಗೆ ಯಾವುದೆ ಆಸೆ ಆಕಾಂಕ್ಷೆಗಳಿಲ್ಲ. ಪಕ್ಷಕ್ಕಾಗಿ ಮನೆ, ಮಠಗಳನ್ನು ಬಿಟ್ಟು ಶ್ರಮಿಸಿದ್ದೇವೆ. ಯಡಿಯೂರಪ್ಪರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ, ನಾವು ಸಂತೋಷಪಟ್ಟಿದ್ದೇವೆ. ಹಾಗೆಯೆ, ಯಡಿಯೂರಪ್ಪ ಹಾಗೂ ಅವರ ತಂಡದಿಂದ ನೋವನ್ನು ಅನುಭವಿಸಿದ್ದೇವೆ ಎಂದು ಅವರು ಹೇಳಿದರು.

ನಮ್ಮ ಪಕ್ಷವನ್ನು ಸರ್ವನಾಶ ಮಾಡುವುದಾಗಿ ಹೇಳುತ್ತಿದ್ದ ಬೇರೆ ಪಕ್ಷದ ಮುಖಂಡರನ್ನು ಈಗ ಪಕ್ಷಕ್ಕೆ ಸೇರಿಸಿಕೊಂಡು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಅಮಿತ್ ಶಾ ಗಮನಕ್ಕೆ ತರಲಾಗಿದೆ. ನಾವೆ ಜಿಲ್ಲಾ ಪ್ರವಾಸ ಕೈಗೊಂಡು ಕಾರ್ಯಕರ್ತರ ಅಭಿಪ್ರಾಯವನ್ನು ಕ್ರೋಡೀಕರಿಸಿ, ಮಾ.15ರೊಳಗೆ ವರಿಷ್ಠರಿಗೆ ವರದಿಯನ್ನು ಸಲ್ಲಿಸುತ್ತೇವೆ ಎಂದು ಭಾನುಪ್ರಕಾಶ್ ತಿಳಿಸಿದರು.

ಪದಾಧಿಕಾರಿಗಳ ನೇಮಕವನ್ನು ಪರಿಷ್ಕರಣೆ ಮಾಡಬೇಕೆಂಬುದು ನಮ್ಮ ಒತ್ತಾಯ. ರಾಷ್ಟ್ರೀಯ ಅಧ್ಯಕ್ಷರು ನೀಡಿರುವ ಸೂಚನೆಗೂ ಗೌರವ ಇಲ್ಲದಂತಾಗಿದೆ. ಆದುದರಿಂದ, ನಾವೆ ಜಿಲ್ಲಾವಾರು ಪ್ರವಾಸ ಕೈಗೊಂಡು, ಕಾರ್ಯಕರ್ತರ ಅಭಿಪ್ರಾಯವನ್ನು ಕ್ರೋಡೀಕರಿಸಿ, ಅದರಂತೆ ಮುಂದಿನ ರಾಜಕೀಯ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದವರೆಗಿನ ನಾಯಕತ್ವದಲ್ಲಿ ತಪ್ಪುಗಳಾಗಿವೆ. ಅದನ್ನು ಸರಿಪಡಿಸಬೇಕು ಎಂಬುದು ನಮ್ಮ ಆಗ್ರಹ. ಅದನ್ನು ಹೊರತುಪಡಿಸಿದರೆ ಬೇರೆ ಯಾವ ಉದ್ದೇಶವೂ ನಮಗಿಲ್ಲ. ವೈಯಕ್ತಿಕ ಕಾರಣಕ್ಕಾಗಿ ನಾವು ಪಕ್ಷದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೆ ಜಿಲ್ಲಾವಾರು ಪದಾಧಿಕಾರಿಗಳ ನೇಮಕದಲ್ಲಿ ನೈಜ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ನಾವು ಭಿನ್ನಮತೀಯರಲ್ಲ, ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಾಲ್ಕು ಜನರ ಸಮಿತಿಯನ್ನು ರಚನೆ ಮಾಡಿ, ಫೆ.10ರೊಳಗೆ ವರದಿ ನೀಡುವಂತೆ ಅಮಿತ್ ಶಾ ಸೂಚನೆ ನೀಡಿದ್ದರು. ಆದರೆ, ಈವರೆಗೆ ಸಭೆಯನ್ನು ಕರೆದು ಚರ್ಚೆ ಮಾಡುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿಲ್ಲ ಎಂದು ಅವರು ಕಿಡಿಗಾರಿದರು.

ಜಿಲ್ಲಾವಾರು ನೇಮಕಾತಿಯಲ್ಲಿ ಆಗಿರುವ ತಪ್ಪುಗಳನ್ನು ಯಡಿಯೂರಪ್ಪ ಸರಿಪಡಿಸಬೇಕು. ಕೇಂದ್ರದ ವರಿಷ್ಠರು ಮಾ.15ರೊಳಗೆ ಈ ವಿಚಾರದಲ್ಲಿ ಮಧ್ಯೆಪ್ರವೇಶಿಸಬೇಕು. ಇಲ್ಲವಾದರೆ, ನಮ್ಮ ದಾರಿ ನಮಗೆ. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರುವುದಾದರೆ ತರಲಿ ಎಂದು ಅವರು ಹೇಳಿದರು.

ಜಿಲ್ಲಾವಾರು ಪ್ರವಾಸ ಕೈಗೊಂಡ ಬಳಿಕ ಮಾ.15ರ ನಂತರ ಅಮಿತ್ ಶಾರನ್ನು ಭೇಟಿ ಮಾಡಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಜನಸಂಘದ ಕಾಲದಿಂದಲೂ ಪಕ್ಷದಲ್ಲಿದ್ದೇವೆ. ಬೇರೆ ಪಕ್ಷದ ಮುಖಂಡರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಮುಜುಗರಕ್ಕೆ ಒಳಗಾಗದಂತೆ ನೋಡಿಕೊಳ್ಳ ಬೇಕಾಗುತ್ತದೆ ಎಂದು ಶಿವಣ್ಣ ತಿಳಿಸಿದರು.

ಸಣ್ಣ ಪುಟ್ಟ ಸಮಸ್ಯೆಗಳನ್ನ ನಾವು ಹೇಳಿಕೊಂಡಿಲ್ಲ. ಕಳೆದ 10 ವರ್ಷಗಳಿಂದ ಜಿಲ್ಲಾಧ್ಯಕ್ಷರು ಕೆಲಸ ಮಾಡಿದ್ದಾರೆ, ಈಗ ಅವರನ್ನ ಮೂಲೆಗುಂಪು ಮಾಡಲಾಗಿದೆ. ಬೇರೆಯವರಿಗೆ ಹುದ್ದೆಗಳನ್ನ ನೀಡಲಾಗಿದೆ. ಒಂದು ತಿಂಗಳಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ನಮಗೆ ಅಸಮಾಧಾನ ತಂದಿದೆ ಎಂದು ಅವರು ಹೇಳಿದರು.

ಕೆಲವರಿಗೆ ಅಮಾನತ್ತು ನೋಟಿಸ್ ನೀಡಲಾಗಿದೆ. ಆದರೆ, ಈವರೆಗೆ ಅದನ್ನು ವಾಪಸ್ ಪಡೆದಿಲ್ಲ. ಹೀಗಾಗಿ ನಾಳೆ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಜಿಲ್ಲಾವಾರು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರ ಸಚಿವ ಅರುಣ್‌ಕುಮಾರ್, ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರರಾವ್ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅತೃಪ್ತ ಬಣದ ಮುಖಂಡರಾದ ನಿರ್ಮಲ್ ಕುಮಾರ್ ಸುರಾನ, ಸೋಮಣ್ಣ ಬೇವಿನ ಮರದ, ಡಾ.ಶಿವಯೋಗಿ ಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಅರವಿಂದ ಲಿಂಬಾವಳಿಗೆ ಕುಟುಕು

ಪಕ್ಷದ ವಿಚಾರಗಳನ್ನು ಮಾಧ್ಯಮಗಳ ಎದುರು ಬಹಿರಂಗವಾಗಿ ಚರ್ಚೆ ನಡೆಸಬಾರದು ಎಂದು ಸೂಚನೆ ನೀಡಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ನೀಡಿದ್ದ ಸೂಚನೆಗೆ ಪ್ರತಿಕ್ರಿಯಿಸಿದ ಭಾನುಪ್ರಕಾಶ್, ನಮ್ಮಿಂದ ಶಿಸ್ತಿನ ಉಲ್ಲಂಘನೆ ಆಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ನೋವನ್ನು ವ್ಯಕ್ತಪಡಿಸಲು ಅವಕಾಶವಿದೆ. ಆದುದರಿಂದ, ಶಿಸ್ತು ಪಾಲನೆ ಕುರಿತು ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯ ತಮಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News