ಕಪ್ಪತಗುಡ್ಡ-ಬಂಡೀಪುರ ಕಾಡ್ಗಿಚ್ಚು ಪ್ರಕರಣ : ಸಿಐಡಿ ತನಿಖೆಗೆ ವಹಿಸಲು ನಿರ್ಧಾರ: ರಮಾನಾಥ ರೈ

Update: 2017-03-06 17:07 GMT

 ಬೆಂಗಳೂರು, ಮಾ.6: ಕಪ್ಪತಗುಡ್ಡ ಹಾಗೂ ಬಂಡೀಪುರ ಅಭಯಾರಣ್ಯದಲ್ಲಿ ಸಂಭವಿಸಿದಂತಹ ಕಾಡ್ಗಿಚ್ಚು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಂತಹ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿನಲ್ಲಿ ಪದೇ ಪದೇ ಸಂಭವಿಸುತ್ತಿರುವ ಬೆಂಕಿ ಅನಾಹುತದ ಕುರಿತು ಸಿಐಡಿ ತನಿಖೆ ನಡೆಸಲು ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಎಲ್ಲ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ವನ್ಯಜೀವಿಗಳಿಗೆ ಕುಡಿಯುವ ನೀರು ಪೂರೈಸಲು ಅರಣ್ಯ ಪ್ರದೇಶದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಸೋಲಾರ್ ಪಂಪ್‌ಸೆಟ್‌ಗಳ ಮೂಲಕ ನೀರನ್ನು ಎತ್ತಿ, ಅರಣ್ಯದಲ್ಲಿರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ, 5-6 ಕಡೆ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧ ಕಿಡಿ: ಪಶ್ಚಿಮಘಟ್ಟಗಳ ಸಂರಕ್ಷಣೆ ವಿಚಾರದಲ್ಲಿ ಆರು ರಾಜ್ಯಗಳ ಪೈಕಿ ಕೇರಳ ಹಾಗೂ ಕರ್ನಾಟಕ ಮಾತ್ರ ಹೆಚ್ಚು ಮುತುವರ್ಜಿ ವಹಿಸಿವೆ. ಅಲ್ಲದೆ, ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಿರುವುದು ಈ ಎರಡು ರಾಜ್ಯಗಳು ಮಾತ್ರ. ಗುಜರಾತ್, ಮಹಾರಾಷ್ಟ್ರ, ಗೋವಾದಲ್ಲಿ ಯಾರ ಸರಕಾರವಿದೆ ಎಂದು ಅವರು ಪ್ರಶ್ನಿಸಿದರು.

ರಾಜ್ಯ ಸರಕಾರವು ಈಗಾಗಲೆ ಎರಡು ಬಾರಿ ಆಕ್ಷೇಪಣೆಗಳನ್ನು ಸಲ್ಲಿಸಿದೆ. ಆದರೂ, ಕೇಂದ್ರ ಸರಕಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ, ಈಗಲೂ 60 ದಿನಗಳ ಕಾಲಾವಕಾಶವಿದ್ದು, ನಾವು ಆಕ್ಷೇಪಣೆಯನ್ನು ಸಲ್ಲಿಸುತ್ತೇವೆ ಎಂದು ರಮಾನಾಥ ರೈ ಹೇಳಿದರು.

ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯವು ಕರೆದಿದ್ದ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಭಾಗಿಯಾಗಿದ್ದು, ರಾಜ್ಯ ಸರಕಾರದ ವಾದವನ್ನು ಮಂಡಿಸಿದ್ದಾರೆ. ಆದರೆ, ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುವಂತಹ ಸಂಸದರು ಮಾತ್ರ ಯಾವ ಸಭೆಗೂ ಬಂದಿಲ್ಲ ಎಂದು ರಮಾನಾಥ ರೈ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News