ಬಂಗಾರದ ಬಣ್ಣದ ಪೆನ್ನು!

Update: 2017-03-11 18:52 GMT

ಮುಸ್ತಫಾ ತಲೆಯಾಡಿಸಿದ್ದ. ಮತ್ತು ಆ ಬಗ್ಗೆ ತನ್ನ ತಂದೆಯ ಬಳಿ ಒಂದಿಷ್ಟು ಮಾಹಿತಿ ಸಂಗ್ರಹಿಸಿ ಭಾಷಣ ರೂಪಿಸಿದ್ದ. ಮುಸ್ತಫಾನ ತಂದೆಯ ಹೆಸರು ಇದಿನಬ್ಬ ಬ್ಯಾರಿ. 60ರ ದಶಕದಲ್ಲೇ ಎಸೆಸೆಲ್ಸಿ ಕಲಿತವರು. ಪುಸ್ತಕ ಓದುವ ಅಭ್ಯಾಸ ಅವರಿಗೆ ಚೆನ್ನಾಗಿಯೇ ಇತ್ತು. ಪುತ್ತೂರಿನಲ್ಲೇ ಸಣ್ಣದೊಂದು ಜವಳಿ ಅಂಗಡಿ ಇಟ್ಟಿದ್ದರು. ಅವರ ಮನೆಗೆ ಪ್ರತೀ ದಿನ ಪತ್ರಿಕೆ ಬರುತ್ತಿತ್ತು. ‘‘ಹೆಗ್ಡೆ ಮೇಷ್ಟ್ರು, ಜನಸಂಖ್ಯೆ ವರ ಎಂಬ ವಿಷಯ ಕೊಟ್ಟಿದ್ದಾರೆ. ಬರೆದು ಕೊಡು’’ ಎಂದಾಕ್ಷಣ ತನ್ನಲ್ಲಿರುವ ವಿವರಗಳನ್ನೆಲ್ಲ ಕಲೆ ಹಾಕಿ ಅವನಿಗೆ ಒಂದು ಭಾಷಣ ಬರೆದು ಕೊಟ್ಟಿದ್ದರು. ಅದನ್ನು ಎಸ್. ಆರ್. ಹೆಗ್ಡೆಯವರ ಮುಂದಿಟ್ಟಿದ್ದ. ಅವರು ಅದನ್ನು ಇನ್ನಷ್ಟು ತಿದ್ದಿ ತೀಡಿ ಕೊಟ್ಟಿದ್ದರು. ಸ್ಪರ್ಧೆಯ ದಿನ ಜಾನಕಿಯ ಭಾಷಣಕ್ಕೆ ಅವನು ಬೆಕ್ಕಸ ಬೆರಗಾಗಿದ್ದ. ಮುಸ್ಲಿಮರಲ್ಲಿ ಮಕ್ಕಳು ಜಾಸ್ತಿ ಎನ್ನುವುದು ಅವನಿಗೂ ತಿಳಿದಿತ್ತು. ಆದರೆ ತನ್ನ ಮನೆಯಲ್ಲಿ ತನ್ನ್ನನ್ನು ಬಿಟ್ಟರೆ ತನ್ನ ತಂಗಿ ಮಾತ್ರವಲ್ಲವೇ? ಎಂಬ ಪ್ರಶ್ನೆ ಅವನಲ್ಲಿ ಎದ್ದಿತ್ತು.

ಜಾನಕಿಗೆ ಇದನ್ನು ಹೇಳಿ ‘‘ನಾವು ಎಲ್ಲ ಮುಸ್ಲಿಮರ ಹಾಗೆ ಅಲ್ಲ’’ ಎಂದು ವಿವರಿಸಬೇಕು ಅನ್ನಿಸಿತ್ತು. ಆದರೂ ಅವನು ವೌನವಾಗಿದ್ದ. ಅಂದು ಮಂಗಳೂರು ಕಾಲೇಜಿನಲ್ಲಿ ಬೇರೆ ಬೇರೆ ವಿಭಾಗದ ಸ್ಪರ್ಧೆಗಳಿದ್ದವು. 12 ಗಂಟೆಯ ಹೊತ್ತಿಗೆ ಭಾಷಣ ಸ್ಪರ್ಧೆ. ಬೇರೆ ಬೇರೆ ಕಾಲೇಜುಗಳಿಂದ ಸುಮಾರು 20 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಾನಕಿ ಮತ್ತು ಮುಸ್ತಫಾ ಚೆನ್ನಾಗಿಯೇ ಮಾತನಾಡಿದ್ದರು. ಸಂಜೆ 5 ಗಂಟೆಗೆ ಫಲಿತಾಂಶ ಹೊರ ಬಿದ್ದಾಗ ಅವನು ದಂಗಾಗಿದ್ದ.

ಮೊದಲ ಬಹುಮಾನ ‘ಜನಸಂಖ್ಯೆ ಶಾಪ’ ಎಂದು ವಾದಿಸಿದ್ದ ಮಂಗಳೂರು ಕಾಲೇಜಿನ ವಿದ್ಯಾರ್ಥಿನಿಗೆ ಸಂದಿದ್ದರೆ, ಎರಡನೆ ಬಹುಮಾನ ‘ಜನಸಂಖ್ಯೆ ಸರಿ’ ಎಂದು ವಾದಿಸಿದ್ದ ಮುಸ್ತಫಾನಿಗೆ ಹೋಗಿತ್ತು. ಮೂರನೆ ಬಹುಮಾನ ಕೂಡ ಮಂಗಳೂರಿನ ವಿದ್ಯಾರ್ಥಿಗೇ ಸಂದಿತ್ತು. ಜಾನಕಿ ನಾಲ್ಕನೆ ಸ್ಥಾನದಲ್ಲಿದ್ದಳು. ಅವನಿಗೆ ಆತಂಕವಾಯಿತು. ಜಾನಕಿಗೆ ಕಾಲೇಜಿನಲ್ಲಿರುವ ವರ್ಚಸ್ಸು ಗೊತ್ತಿತ್ತು. ಅಂಜುತ್ತಾ ಅವಳ ಬಳಿಗೆ ಹೋದವನು ‘‘ನೀವು ತುಂಬಾ ಚೆನ್ನಾಗಿ ಭಾಷಣ ಮಾಡಿದ್ದಿರಿ. ಏನೋ ಪಾಲಿಟಿಕ್ಸ್ ಆಗಿದೆ...’’ ಎಂದು ತಡವರಿಸುತ್ತಾ ಸಮಾಧಾನ ಮಾಡಿದ. ಜಾನಕಿಯ ಮುಖದಲ್ಲಿ ದುಃಖ, ಆಕ್ರೋಶದ ದಟ್ಟ ಮೋಡ ಕವಿದಿತ್ತು. ಮುಸ್ತಫಾನ ಮುಖವನ್ನು ತಲೆಯೆತ್ತಿಯೂ ಆಕೆ ನೋಡಿರಲಿಲ್ಲ. ‘‘ಬಾರೆ ಹೋಗೋಣ...ಈಗ ಹೋದರೆ ಪುತ್ತೂರಿಗೆ ಬಸ್ಸಿದೆ...’’ ಎನ್ನುತ್ತಾ ಮೀನಾಕ್ಷಿ ಗೆಳತಿಯನ್ನು ಎಳೆದೊಯ್ದಳು. ಮುಸ್ತಫಾನನ್ನು ನೋಡಿ ಮೀನಾಕ್ಷಿ ಮುಖ ಕೊಂಕಿಸಿದಳು. ಮುಸ್ತಫಾನಿಗೆ ಮಾತ್ರ ತನ್ನ ತಪ್ಪು ಏನೆಂದೇ ಗೊತ್ತಾಗಲಿಲ್ಲ.

‘ಛೇ...ಜನಸಂಖ್ಯೆ ವರ’ ಎಂದು ವಾದಿಸಲೇ ಬಾರದಿತ್ತು ಎಂದು ಮನದಲ್ಲೇ ಮತ್ತೊಮ್ಮೆ ಅಂದುಕೊಂಡ. ಸಾಧಾರಣವಾಗಿ ಅಂತರ್ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯಾವುದೇ ಪ್ರಶಸ್ತಿ ಪಡೆದರೂ ಅದನ್ನು ವಿವೇಕ ಶ್ರೀ ಕಾಲೇಜಿನ ನೋಟಿಸ್ ಬೋರ್ಡಿನಲ್ಲಿ ಹಾಕಲಾಗುತ್ತದೆ. ಮರುದಿನ ಮುಸ್ತಫಾ ನೋಟಿಸ್ ಬೋರ್ಡಿನಲ್ಲಿ ತನ್ನ ಹೆಸರಿರಬಹುದೆಂದು ಸಂಭ್ರಮದಿಂದ ಅತ್ತ ಓಡಿದ. ಆದರೆ ಅಲ್ಲಿ ಸ್ಪರ್ಧೆಯ ಫಲಿತಾಂಶದ ಕುರಿತಂತೆ ಯಾವ ಪ್ರಕಟನೆಯೂ ಇರಲಿಲ್ಲ. ನಿರಾಸೆಯಾಯಿತು.

‘‘ದ್ವಿತೀಯ ಬಹುಮಾನ ತಾನೆ. ಅದರಿಂದ ಹಾಕಿರಲಿಕ್ಕಿಲ್ಲ’’ ಎಂದು ಮನದಲ್ಲೇ ಸಮಾಧಾನ ಮಾಡಿಕೊಂಡ. ಅಷ್ಟೇ ಅಲ್ಲದೆ, ಜನಸಂಖ್ಯೆ ವರ ಎಂದುದಕ್ಕೆ ಬಹುಮಾನ ಸಿಕ್ಕಿರುವುದೂ ಕಾರಣವಾಗಿರಬಹುದು ಎಂದು ಅಂದುಕೊಂಡ. ಯಾಕೋ, ಬಹುಮಾನ ಪಡೆದರೂ ಮುಸ್ತಫಾನ ಮನದಲ್ಲೊಂದು ದುಗುಡ ತುಂಬಿಕೊಂಡಿತು. ಏನೋ ಒಂದು ಅಪರಾಧ ಪ್ರಜ್ಞೆ. ಇಡೀ ದಿನದಲ್ಲಿ ಯಾರೂ ಅವನ ಬಳಿ ಭಾಷಣ, ಸ್ಪರ್ಧೆ, ಪ್ರಶಸ್ತಿಯ ಬಗ್ಗೆ ವಿಚಾರಿಸಿರಲಿಲ್ಲ. ಅಂದು ಸಂಜೆ ಶಾಲೆಯ ಕೊನೆಯ ಗಂಟೆ ಬಾರಿಸಿತು. ಆತ ಜಗಳಿಯಿಂದ ಮೈದಾನಕ್ಕೆ ಕಾಲಿಡಬೇಕು, ಅಷ್ಟರಲ್ಲಿ ಅಟೆಂಡರ್ ಗೋಪಾಲ ‘‘ಏ ಮುಸ್ತಫಾ...’’ ಎಂದು ಕರೆದ. ಮುಸ್ತಫಾ ಹಿಂದೆ ತಿರುಗಿದ. ‘‘ಕನ್ನಡ ಪಂಡಿತರು ಕರೆಯುತ್ತಿದ್ದಾರೆ. ಸ್ಟಾಫ್ ರೂಮ್‌ನಲ್ಲಿದ್ದಾರೆ...’’ ಗೋಪಾಲ ಹೇಳಿದ.

ಮುಸ್ತಫಾನ ಮನದಲ್ಲಿ ಮತ್ತೆ ಆತಂಕ. ‘‘ಯಾಕೆ ಕರೆಯುತ್ತಿರಬಹುದು?’’ ಅಂಜುತ್ತಲೇ ಸ್ಟಾಫ್ ರೂಂ ಕಡೆ ನಡೆದ. ಸ್ಟಾಫ್ ರೂಂನಲ್ಲಿ ಕನ್ನಡ ಪಂಡಿತ ಎಸ್. ಆರ್. ಹೆಗ್ಡೆಯವರೊಬ್ಬರೇ ಇದ್ದರು. ಕೈಯಲ್ಲೇನೋ ಪುಸ್ತಕ. ಬಾಗಿಲಲ್ಲಿ ನಿಂತ ಮುಸ್ತಫಾ ಕೈ ಮೇಲೆತ್ತಿ ‘‘ಸಾರ್...’’ ಅಂದ. ಪಂಡಿತರು ತಲೆಯೆತ್ತಿ ‘‘ಮುಸ್ತಫಾ ಸಾಹೇಬರು.....ಬಾ...ಬಾ..’’ ಎಂದರು.

ಮುಸ್ತಫಾ ಪಂಡಿತರ ಬಳಿ ನಡೆದ. ‘‘ನಿನಗೆ ದ್ವಿತೀಯ ಬಹುಮಾನ ಬಂತಂತಲ್ಲ? ನಿನ್ನೆಯೇ ಗೊತ್ತಾಯಿತು. ಇಡೀ ಶಾಲೆಗೆ ಹೆಮ್ಮೆ ತಂದಿದ್ದೀಯ...’’ ಎಂದು ಅವನ ಬೆನ್ನು ತಟ್ಟಿದರು. ‘‘ಇದು ನಿನಗೆ ನನ್ನ ಕಡೆಯಿಂದ ಬಹುಮಾನ’’ ಎಂದವರೇ ತನ್ನ ಕಿಸೆಯಲ್ಲಿದ್ದ ಪೆನ್ನನ್ನು ತೆಗೆದು, ಮುಸ್ತಫಾನ ಕಿಸೆಯಲ್ಲಿಟ್ಟರು.

‘‘ನಿನಗೆ ಗೊತ್ತಾ...ನಿನ್ನ ಅಪ್ಪ ಇದಿನಬ್ಬ ಬ್ಯಾರಿ ಮತ್ತು ನಾನು ಕ್ಲಾಸ್‌ಮೇಟ್ಸ್. ಕಲಿಯುವುದರಲ್ಲಿ ನನಗಿಂತಲೂ ಮುಂದಿದ್ದ. ಓದು ಮುಂದುವರಿಸಿ ದ್ದರೆ ಅವನು ಯಾವುದಾದರೂ ಕಾಲೇಜಿನಲ್ಲಿ ಮೇಷ್ಟ್ರಾಗುತ್ತಿದ್ದ...’’

ಮುಸ್ತಫಾನಿಗೆ ಅಚ್ಚರಿಯ ಮೇಲೆ ಅಚ್ಚರಿ. ಮೇಷ್ಟ್ರು ಮತ್ತು ತನ್ನ ಅಪ್ಪ ಜೊತೆಯಾಗಿ ಕಲಿತಿದ್ದರು ಎನ್ನುವ ವಿಷಯವೇ ಅವನಿಗೆ ರೋಮಾಂಚನ ತಂದಿತ್ತು. ತಂದೆಯ ಬಗ್ಗೆ ಹೆಮ್ಮೆಯ ಮೇಲೆ ಹೆಮ್ಮೆ ಅನ್ನಿಸಿತ್ತು.

‘‘ನಿನಗೇನು ಪುಸ್ತಕ ಬೇಕಾದರೂ ನನ್ನಲ್ಲಿ ಕೇಳು. ರಾಮಾಯಣ, ಮಹಾಭಾರತ ಯಾವ ಪುಸ್ತಕ ಬೇಕಾದರೂ....ಹೀಗೆ ಮುಂದುವರಿಯಬೇಕು...ಅಂಜಬೇಡ...’’ ಬೆನ್ನುತಟ್ಟಿದರು. ಮುಸ್ತಫಾನಿಗೆ ಅಳುಬರುವಂತಾಗಿತ್ತು. ಯಾವತ್ತೂ ಪಂಡಿತರ ಕಿಸೆಯಲ್ಲಿ ಮಿನುಗುತ್ತಿದ್ದ ಚಿನ್ನದಂತಹ ಪೆನ್ನು, ಅದೆಷ್ಟೋ ಉತ್ತರ ಪತ್ರಿಕೆಗಳಿಗೆ ಅಂಕ ನೀಡಿದ ಬೆನ್ನು, ಎಷ್ಟೋ ಮಕ್ಕಳ ಪಾಸು, ಫೇಲು ತೀರ್ಪನ್ನು ಬರೆದ ಪೆನ್ನು ಇದೀಗ ತನ್ನ ಕಿಸೆಯಲ್ಲಿರುವುದು ಅವನಿಗೆ ನಂಬಲೂ ಸಾಧ್ಯವಾಗುತ್ತಿರಲಿಲ್ಲ.

‘‘ಥ್ಯಾಂಕ್ಯೂ ಸರ್...’’ ಮುಜುಗರ, ಸಂಭ್ರಮ ಎರಡೂ ಬೆರೆತ ಧ್ವನಿಯಿಂದ ಹೇಳಿದ. ‘‘ಸರಿ ಹೋಗು. ಶುಭವಾಗಲಿ...’’ ಎಂದರು. ಮುಸ್ತಫಾ ಸಂಭ್ರಮದಿಂದ ಸ್ಟಾಫ್ ರೂಮಿನಿಂದ ಹೊರ ಬಂದ. ತನ್ನ ಕಿಸೆಯಲ್ಲಿರುವ ಪೆನ್ನನ್ನು ಸುಮ್ಮನೆ ಬೆರಳಿಂದ ಸ್ಪರ್ಶಿಸಿದ. ಅದೇನೋ ಅಪೂರ್ವವಾದ ಅನುಭವ. ಅಂತರ್‌ಕಾಲೇಜು ಪ್ರಶಸ್ತಿಯೂ ಈ ಸಂಭ್ರಮ, ಹೆಮ್ಮೆಯನ್ನು ಅವನಿಗೆ ತಂದಿರಲಿಲ್ಲ. ನೋಟಿಸ್ ಬೋರ್ಡ್‌ನಲ್ಲಿ ಮುಸ್ತಫಾನ ಹೆಸರು ಪ್ರಕಟವಾಗ ದಿದ್ದರೂ ಮರುದಿನ ಇಡೀ ತರಗತಿಯ ಕಣ್ಣು ಅವನ ಮೇಲೆ ಬಿದ್ದಿತ್ತು. ಪಂಡಿತರು ತಮ್ಮ ಪೆನ್ನನ್ನು ಮುಸ್ತಫಾನಿಗೆ ಬಹುಮಾನವಾಗಿ ಕೊಟ್ಟಿರುವುದು ಅಟೆಂಡರ್ ಗೋಪಾಲನ ಮೂಲಕ ಇಡೀ ತರಗತಿಗೆ ಹರಡಿತ್ತು. ಕೆಲವರು ಅಸೂಯೆಯಿಂದ, ಕೆಲವರು ಅಭಿಮಾನದಿಂದ, ಕೆಲವರು ಅಚ್ಚರಿಯಿಂದ ಮುಸ್ತಫಾನನ್ನು ನೋಡುತ್ತಿದ್ದರು. ಮುಸ್ತಫಾ ಆ ಪೆನ್ನನ್ನು ಜೇಬಿನಲ್ಲಿ ಧರಿಸಿಕೊಂಡೇ ತರಗತಿಗೆ ಬಂದಿದ್ದ. ಎಲ್ಲರ ಕಣ್ಣೂ ಅವನ ಎದೆಯ ಮೇಲೆ. ಈವರೆಗೆ ತರಗತಿಯಲ್ಲಿ ತಾನಾಯಿತು, ತನ್ನ ಪಾಡಾಯಿತು ಎಂದು ಮೂಲೆಯಲ್ಲಿ ಕುಳಿತಿದ್ದ ಮುಸ್ತಫಾನಿಗೆ ಕೆಲವು ವಿದ್ಯಾರ್ಥಿಗಳು ಹತ್ತಿರವಾ ದರು. ಪಂಡಿತರ ಚಿನ್ನದ ಬಣ್ಣದ ಪೆನ್ನನ್ನು ಅವನಿಂದ ಇಸಿದು, ಮುಟ್ಟಿ, ಬರೆದು ಸಂಭ್ರಮ ಪಡುತ್ತಿದ್ದರು. ಜಾನಕಿಯೊಂದಿಗೆ ಒಳಗೊಳಗೆ ಕೆಲವು ಹುಡುಗರಿಗೆ ಸಿಟ್ಟಿತ್ತು ‘‘ಅದೊಂದು ಜಂಬದ ಕೋಳಿ...ನೀನು ಸರಿಯಾದ ಪಾಠ ಕಲಿಸಿದೆ....’’ ಎಂದು ಮುಂದಿನ ಬೆಂಚಿನ ಸ್ವರೂಪ್ ಹೇಳಿದ.

‘‘ಅವಳಿಗೆ ಕಾಲೇಜಿನಲ್ಲಿ ಫಸ್ಟ್ ಪ್ರೈಝ್ ಸಿಕ್ಕಿದ್ದೇ ಅವಳ ಅಪ್ಪನ ಹೆಸರಿನಲ್ಲಿ. ನಿನಗೇ ಸಿಗಬೇಕಿತ್ತು. ಈಗ ನೋಡು...ಅವಳ ಬಂಡವಾಳ ಹೊರಬಿತ್ತು...’’ ಹಿಂದಿನ ಬೆಂಚಿನ ಸುಧಾಕರ ಹೇಳಿದ. ‘‘ಏ..ಮುಸ್ತಫಾನ ಹೆಸರು ನೋಟಿಸ್ ಬೋರ್ಡ್‌ನಲ್ಲಿ ಯಾಕೆ ಹಾಕಲಿಲ್ಲ? ಪಂಡಿತರ ಹತ್ತಿರ ಹೋಗಿ ಹೇಳುವ...’’ ನರೇಶ್ ಸಲಹೆ ನೀಡಿದ.

ಮುಸ್ತಫಾ ಒಮ್ಮೆಲೆ ಬೆಚ್ಚಿ ‘‘ಏ...ಬೇಡ..ಬೇಡ...’’ ಎಂದು ಅವನನ್ನು ತಡೆದ. ‘‘ಸರಿ...ಹಾಗಾದರೆ ನಮಗೆಲ್ಲ ಬಿರಿಯಾನಿ ಕೊಡು...ಬಹುಮಾನ ಬಂದದ್ದಕ್ಕೆ...’’ ನರೇಶ್ ಮತ್ತೆ ತಕರಾರು ತೆಗೆದ.
‘‘ಹೇ ನೀನು ವೆಜ್ ಅಲ್ವಾನಾ....’’ ಸುಧಾಕರ ತಮಾಷೆ ಮಾಡಿದ.

‘‘ವೆಜ್ ಬಿರಿಯಾನಿ ಕೊಟ್ಟರೆ ಸಾಕು...’’ ನರೇಶ್ ತಿದ್ದಿದ. ಒಟ್ಟಿನಲ್ಲಿ ಮುಸ್ತಫಾ ಎಲ್ಲರಿಗೂ ಒಂದೇ ದಿನದಲ್ಲಿ ಚಿರಪರಿಚಿತನಾಗಿ ಬಿಟ್ಟ. ಈ ಎಲ್ಲ ಸಂಭ್ರಮವನ್ನು ಜಾನಕಿ ದೂರದಿಂದಲೇ ಗಮನಿಸುತ್ತಿದ್ದಳು.

ಕನ್ನಡ ಪಂಡಿತರು ತಮ್ಮ ಪೆನ್ನನ್ನು ಮುಸ್ತಫಾನಿಗೆ ಬಹುಮಾನ ನೀಡಿರುವ ಸುದ್ದಿ ತಿಳಿದು ಅವಳು ತುಂಬಾ ಖಿನ್ನಳಾಗಿದ್ದಳು. ಮೇಷ್ಟ್ರು ಪೆನ್ನಿನಿಂದ ಅವಳ ಎದೆಗೇ ಚುಚ್ಚಿದರೋ ಎಂಬಂತಹ ನೋವು. ತನಗೆ ಸಿಗಬೇಕಾದ ಪೆನ್ನದು. ‘ಅಪ್ಪಾಜಿ’ಗೆ ಆ ಪೆನ್ನು ತೋರಿಸಿದರೆ ತುಂಬಾ ಹೆಮ್ಮೆ ಪಡುತ್ತಿದ್ದರು.

‘ಜನಸಂಖ್ಯೆ ವರ’ ಎಂದು ಭಾಷಣ ಮಾಡಿದವನಿಗೆ ಪಂಡಿತರು ಪೆನ್ನು ಕೊಡುವುದೇ? ಅವಳಿಗೆ ಸಂಕಟವಾಯಿತು. ಹಾಗಾದರೆ ಇಡೀ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿ, ಈ ದೇಶ ಪಾಕಿಸ್ತಾನವಾಗಬೇಕು ಎಂದು ಪಂಡಿತರು ಬಯಸುತ್ತಾರೆಯೇ? ಈಗಲೇ ಹೋಗಿ ಪಂಡಿತರಲ್ಲಿ ಕೇಳಿದರೆ ಹೇಗೆ? ಎಂದು ಅವಳಿಗೆ ಅನ್ನಿಸಿತು. ಆದರೂ ತಡೆದುಕೊಂಡಳು. ನಾಳೆ ಇವನೇ ‘‘ಬಹುಪತ್ನಿತ್ವ ಸರಿ’’ ಎಂದು ವಾದ ಮಾಡುತ್ತಾನೆ. ಆಗ ಇವರು ತನ್ನ ಶಾಲನ್ನು ತೆಗೆದು ಈತನ ಹೆಗಲಿಗೆ ಹಾಕುತ್ತಾರೆಯೇ? ಸಿಟ್ಟು, ದುಃಖ, ನೋವು ಎಲ್ಲ ಒಟ್ಟೊಟ್ಟಿಗೆ ಆಗಿತ್ತು ಜಾನಕಿಗೆ. ಅವಳಿಗೆ ಅಪ್ಪಾಜಿಯ ನೆನಪು ಒತ್ತರಿಸಿ ಬಂತು. ಹಾಗೆಯೇ ತಾಯಿಯ ಮಡಿಲಲ್ಲಿ ತಲೆಯಿಟ್ಟು ಅಳಬೇಕು ಅನ್ನಿಸಿತ್ತು. ಈ ಎಲ್ಲ ಬೆಳವಣಿಗೆಗಳು ನಡೆದು ನಾಲ್ಕೈದು ದಿನ ಆಗಿರಬೇಕು. ಒಂದು ದಿನ ಸಂಜೆ ಮುಸ್ತಫಾ ಕಾಲೇಜು ಬಿಟ್ಟು ಮನೆಯ ಕಡೆ ತೆರಳುತ್ತಿದ್ದ. ಕಾಲೇಜಿನ ಗೇಟಿನ ಬಳಿ ಅವನನ್ನೇ ಕಾಯುತ್ತಿರುವವರಂತೆ ಮೂವರು ಹಿರಿಯ ವಿದ್ಯಾರ್ಥಿಗಳು ನಿಂತಿದ್ದರು.

‘‘ನೀನೆಯೋ ಮುಸ್ತಫಾ...’’ ನೀಳ, ಸಣಕಲು ದೇಹದ ವಿದ್ಯಾರ್ಥಿಯೊಬ್ಬ ಕೇಳಿದ.
ಪಂಡಿತರ ಪೆನ್ನಿನ ಪ್ರಭಾವದಿಂದ ಮುಸ್ತಫಾ ಆತ್ಮ ವಿಶ್ವಾಸದಿಂದ ‘‘ಹೌದು...’’ ಎಂದ.
‘‘ಬಾರಿ ಹಾರಾಡ್ತೀಯಂತೆ...ತರಗತಿಯಲ್ಲಿ. ಹೌದಾ?’’ ದಡೂತಿ ಕುಳ್ಳಗಿನ ವ್ಯಕ್ತಿ ಕೇಳಿದ.

 ಮುಸ್ತಫಾ ನಿಂತಲ್ಲೇ ಕಂಪಿಸಿದ. ಪ್ರಶ್ನೆ ಕೇಳಿದವರ ರೀತಿ ಸರಿಯಿಲ್ಲ ಎನ್ನುವುದು ಅವನಿಗೆ ಗೊತ್ತಾಗಿ ಬಿಟ್ಟಿತ್ತು.
‘‘ಏನು ಮುಖ ನೋಡ್ತೀಯಾ? ನಮ್ಮ ಮುಖ ದಲ್ಲಿ ಕೋತಿ ಕುಣಿಯುತ್ತಿದೆಯಾ?’’ ಇನ್ನೋರ್ವ ಚಿಗುರು ಮೀಸೆ, ಕುರುಚಲು ಗಡ್ಡಧಾರಿ ವ್ಯಕ್ತಿ ಕೇಳಿದ.
ಮುಸ್ತಫಾ ವೌನವಾಗಿ ತಲೆ ಕೆಳಗೆ ಮಾಡಿದ.

(ಗುರುವಾರದ ಸಂಚಿಕೆಗೆ)

Writer - ಬಿ.ಎಂ.ಬಶೀರ್

contributor

Editor - ಬಿ.ಎಂ.ಬಶೀರ್

contributor

Similar News