ಓ.. ಮೆಣಸೇ
ಪಂಜರಾಜ್ಯಗಳ ಚುನಾವಣೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ
- ಡಿ.ಕೆ.ಶಿವಕುಮಾರ್, ಸಚಿವ
ನಿಮಗೂ ಕಾಂಗ್ರೆಸ್‌ಗೂ ಇನ್ನೂ ಸಂಬಂಧ ಉಳಿದುಕೊಂಡಿರುವುದೇ ದೊಡ್ಡ ಅಚ್ಚರಿ ಬಿಡಿ.
---------------------
ಸಿದ್ದರಾಮಯ್ಯ ಸರಕಾರದ ಅಧರ್ಮವೇ ನಮ್ಮ ಚುನಾವಣಾ ಅಸ್ತ್ರ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ನಿಮ್ಮ ಪಕ್ಷದ ಅಧರ್ಮವನ್ನು ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡುವ ಉದ್ದೇಶವೇ?
---------------------
ಮೋದಿಗೆ ಹುಟ್ಟದಿದ್ದರೂ ನಾವೆಲ್ಲ ಮೋದಿಯಂತೆ ವರ್ತಿಸುತ್ತಿದ್ದೇವೆ
-ಬೊಳುವಾರು ಮಹಮದ್ ಕುಂಞಿ, ಸಾಹಿತಿ
ಯಾವ ಮೋದಿ, ಕಣ್ಣು ಕೊಟ್ಟ ಮೋದಿಯೋ, ಕಣ್ಣು ತೆಗೆದ ಮೋದಿಯೋ?
---------------------
ನೀವು ಎಂತಹವರು ಎಂಬುದನ್ನು ನಿಮ್ಮ ಶರೀರವೇ ಹೇಳುತ್ತದೆ
- ಬಾಬಾ ರಾಮ್‌ದೇವ್, ಯೋಗಗುರು
ಪತಂಜಲಿ ಬಳಸುತ್ತಿರುವವರ ಶರೀರವನ್ನು ನೋಡಿದಾಗ ನೀವು ಎಂಥವರು ಎನ್ನುವುದು ಗೊತ್ತಾಗುತ್ತದೆ.
---------------------
ಅಧಿಕಾರ ಕೊಟ್ಟರೆ ಸಚಿವ ಆಂಜನೇಯ ಬ್ರಾಹ್ಮಣರಿಗೂ ಮೀಸಲಾತಿ ಕೊಡ್ತಾರೆ
- ಎಚ್.ವಿಶ್ವನಾಥ್, ಮಾಜಿ ಸಂಸದ
ಅಧಿಕಾರ ಕೊಟ್ಟರೆ ಬಿಜೆಪಿಗೆ ಮೀಸಲಾಗುವ ಕಾಂಗ್ರೆಸ್ಸಿಗರ ಧ್ವನಿ ಜೋರಾಗುತ್ತವೆ.
ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ಪ್ರಜ್ವಲಿಸುತ್ತಿದೆ
-ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
ಬಹುಶಃ ಕೋಮು ಬೆಂಕಿಯ ಝಳಕ್ಕಿರಬೇಕು.
---------------------
ಪ್ರಸ್ತುತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಬಲ ರಾಜಕೀಯ ನಾಯಕ
-ಪಿ. ಚಿದಂಬರಂ, ಕಾಂಗ್ರೆಸ್ ನಾಯಕ
ದುರ್ಬಲ ನಾಯಕರ ಸಂಖ್ಯೆ ಹೆಚ್ಚಾದಾಗ ಮೋದಿಯಂಥವರು ಪ್ರಬಲರಾಗುವುದು ಸಹಜ.
---------------------
ಬ್ರಾಹ್ಮಣರು ಮದ್ಯಪಾನ ಹಾಗೂ ಮಾಂಸಾಹಾರ ಸೇವಿಸುವುದನ್ನು ವಿರೋಧಿಸುತ್ತೇನೆ
- ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಸೋಮರಸ ಮತ್ತು ಯಜ್ಞ ನೈವೇದ್ಯಗಳನ್ನು ಸೇವಿಸಿದರೆ ಒಪ್ಪಿಗೆಯೇ?
---------------------
ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ರಾಜ್ಯದಲ್ಲಿ ಕಟ್ಟಿ ಹಾಕುವ ಸಾಮರ್ಥ್ಯ ಇರುವುದು ಜೆಡಿಎಸ್‌ಗೆ ಮಾತ್ರ
- ಎಚ್.ಡಿ..ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕುದುರೆಯೆಂದು ಕತ್ತೆಯನ್ನು ಕಟ್ಟಿ ಹಾಕಿದ ನಾಯಕರಲ್ಲವೇ ತಾವು.
---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ವಿರುದ್ಧ ದಲಿತರನ್ನು ಎತ್ತಿ ಕಟ್ಟ್ಟುತ್ತಿದ್ದಾರೆ.
- ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
ದಲಿತರ ವಿರುದ್ಧ ನೀವಿರುವಾಗ ಬೇರೆಯವರು ಎತ್ತಿಕಟ್ಟುವ ಅಗತ್ಯವಿದೆಯೆ?
---------------------
ತಮಿಳು ಭಾಷೆ ಮಾತನಾಡುವವರು ನಂಬಿಕೆಗೆ ಅರ್ಹರು
- ರಮಾನಾಥ್ ರೈ, ಸಚಿವ
ಅದಕ್ಕೆಂದೇ ಕನ್ನಡ ಮಾತನಾಡುವವರ ಜೊತೆಗೆ ಸಂಬಂಧ ಕಡಿಮೆ ಮಾಡಿರಬೇಕು.
---------------------
ಪ್ರಧಾನಿ ಮೋದಿ ಅತ್ಯಂತ ಪರಿಣಾಮಕಾರಿಯಾಗಿ ಭಾಷಣ ಮಾಡುವ ಕಲೆ ಹೊಂದಿದ್ದಾರೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಕೊಲೆ ಮಾಡುವುದು ಅದಕ್ಕಿಂತಲೂ ಚೆನ್ನಾಗಿ ಎನ್ನುವುದು ಮಾಧ್ಯಮಗಳ ಆರೋಪ.
---------------------
ಧನಬಲ ಪ್ರಯೋಗಿಸಿ ಪ್ರಜಾಸತ್ತೆಯನ್ನು ದುರ್ಬಲಗೊಳಿಸಲಾಗುತ್ತಿದೆ
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ಜನಬಲ ಕಳೆದುಕೊಂಡವರ ಹತಾಶೆಯ ಮಾತು.
---------------------
ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ
-ಡಾ. ಜಿ. ಪರಮೇಶ್ವರ, ಸಚಿವ
ಇನ್ನಷ್ಟು ನಾಯಕರನ್ನು ಬಿಜೆಪಿಗೆ ರವಾನಿಸುವ ಭರವಸೆಯೇ?
---------------------
ಕಾಂಗ್ರೆಸ್‌ಗೆ ಈಗ ಮೇಜರ್ ಸರ್ಜರಿಯ ಅಗತ್ಯವಿದೆ
- ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ಅದನ್ನು ನಿಮ್ಮಿಂದಲೇ ಆರಂಭಿಸಬೇಕಾಗಿದೆ.
---------------------
ಸಾವಿರ ಮೋದಿ ಬಂದರೂ ಕಾಂಗ್ರೆಸ್ ಮುಕ್ತ ಭಾರತ ಸಾಧ್ಯವಿಲ್ಲ
- ವಿ.ಎಸ್. ಉಗ್ರಪ್ಪ, ವಿ.ಪ.ಸದಸ್ಯ
ಅದನ್ನು ಕಾಂಗ್ರೆಸ್‌ನಾಯಕರೇ ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ.
---------------------
ಸಾಲ ಮಾಡಿ ತುಪ್ಪ ತಿನ್ನುವುದು ಸರೀನಾ
- ಕೆ.ಎಸ್. ಈಶ್ವರಪ್ಪ, ವಿ.ಪ.ವಿ.ಪಕ್ಷ ನಾಯಕ
ಸಾಲ ಮಾಡಿ ರಾಯಣ್ಣ ಬ್ರಿಗೇಡ್ ಕಟ್ಟುವುದಕ್ಕಿಂತ ವಾಸಿ.
---------------------
2019ರ ಲೋಕಸಭೆ ಚುನಾವಣೆವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ
- ನರೇಂದ್ರ ಮೋದಿ, ಪ್ರಧಾನಿ
ಆನಂತರವಾದರೂ ವಿಶ್ರಾಂತಿ ಪಡೆಯುವ ಭರವಸೆ ಕೊಡಿ.
---------------------
ನಾನು ಭಾರತದ ಮಗ
-ದಲೈಲಾಮ, ಬೌದ್ಧ ಗುರು
ಟಿಬೆಟ್ ಪಾಲಿನ ಮಲ ಮಗನೇ?
---------------------
ಪ್ರಧಾನಿ ನರೇಂದ್ರ ಮೋದಿಯನ್ನು ಯಾರಾದರೂ ಸೋಲಿಸಬಹುದು ಎಂದಿದ್ದರೆ ಅದು ರಾಹುಲ್ ಗಾಂಧಿಯ ಸರಳತೆ ಮಾತ್ರ
-ರಾಜ್ ಬಬ್ಬರ್, ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿಯನ್ನು ಬಲಿಕೊಡಲು ಸಿದ್ಧತೆಯೇ?