ರಣರಂಗವಾದ ಕಾಲೇಜು!
ಅಷ್ಟರಲ್ಲಿ ‘‘ಎಂತ...ಎಂತ...ಎಂತ...’’ ಎನ್ನುತ್ತಾ ಸುಧಾಕರ, ನರೇಶ ಓಡಿ ಬಂದರು.
‘‘ನಾವು ಮುಸ್ತಫಾನಲ್ಲಿ ಮಾತನಾಡಲಿಕ್ಕೆ ಬಂದದ್ದು...ನಿಮ್ಮೆಟ್ಟಿಗಲ್ಲ...’’ ಸತೀಶನ ಜೊತೆಗಿದ್ದಾತ ಹೇಳಿದ.
‘‘ಎಂತ ಮಾತನಾಡುವುದು...ನೀವು ಯಾರು, ಮೇಷ್ಟ್ರ? ನಮ್ಮ ಕ್ಲಾಸಿನೊಳಗೆ ಹೇಗೆ ಕಾಲಿಟ್ಟಿರಿ?’’ ಸುಧಾಕರ ಜೋರಲ್ಲಿ ಕೇಳಿದ.
‘‘ಯಾಕೆ ಕಾಲಿಡಬಾರದು? ಇದೇನು ಕಾಂಗ್ರೆಸ್ ಕಚೇರಿಯಲ್ಲವಲ್ಲ’’ ಸತೀಶ್ ಹೇಳಿದ.
ಇದು ನರೇಶ್‌ನನ್ನು ಕೆರಳಿಸಿತು. ಅವನ ತಂದೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
‘‘ಹಾಗೆಯೇ ಇದು ಚೆಡ್ಡಿಗಳ ಶಾಖೆ ಕೂಡ ಅಲ್ಲ...ತಿಳ್ಕೊಳ್ಳಿ’’ ನರೇಶ್ ಎಚ್ಚರಿಸಿದ. ‘‘ಅಧಿಕಪ್ರಸಂಗ ಮಾತನಾಡಿದರೆ ಜಾಗ್ರತೆ...’’ ಸತೀಶ ಎಚ್ಚರಿಸಿದ.
‘‘ಕ್ಲಾಸಿನೊಳಗೆ ರಾಜಕೀಯ ಮಾಡಿದರೆ ನಾವೂ ಸುಮ್ಮನಿರುವುದಿಲ್ಲ...’’ ನರೇಶ್ ಗಟ್ಟಿ ಧ್ವನಿಯಲ್ಲಿ ಹೇಳಿದ.
ಅಷ್ಟರಲ್ಲಿ ವಿದ್ಯಾರ್ಥಿಗಳು ಒಬ್ಬೊಬ್ಬರೇ ಸೇರ ತೊಡಗಿದರು. ಸುಧಾಕರನ ಕೊರಳ ಪಟ್ಟಿಗೆ ಸತೀಶ ಕೈ ಹಾಕಿದ. ಹೊಯ್‌ಕೈಗಳು ನಡೆದೇ ಹೋದವು. ಪರಸ್ಪರ ಒಬ್ಬರ ಮೇಲೆ ಒಬ್ಬರು ಬಿದ್ದು ಉರುಳಾಡತೊಡಗಿದರು. ಯಾರೋ ಸೀನಿಯರ್ ಒಬ್ಬ ಮುಸ್ತಫಾನ ಮುಸುಡಿಗೆ ಗುದ್ದಿದ. ನರೇಶ ದೋಂಟಿ ಸತೀಶನ ಬಟ್ಟೆಯನ್ನು ಪರ್ರನೆ ಹರಿದ. ಇಡೀ ಕಾಲೇಜೇ ಬೆಚ್ಚಿ ಬೀಳುವಂತೆ ಹೊಡೆದಾಟ ಮುಂದುವರಿಯಿತು. ತರಗತಿಯ ಹುಡುಗಿಯರೆಲ್ಲ ಆತಂಕದಿಂದ ಚೀರಾಡತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಪ್ರಾಂಶುಪಾಲರ ಪ್ರವೇಶವಾಯಿತು. ಅವರ ಜೊತೆ ಜೊತೆಗೇ ಅಧ್ಯಾಪಕರೂ ಇದ್ದರು. ‘‘ಸ್ಟಾಪ್ ಇಟ್...’’ ಪ್ರಾಂಶುಪಾಲ ಕಾಮತರು ಜೋರಾಗಿ ಅರಚಿದರು. ಒಮ್ಮೆಲೆ ವಿದ್ಯಾರ್ಥಿಗಳೆಲ್ಲ ಸ್ತಬ್ಧರಾದರು.
‘‘ಸತೀಶ, ನರೇಶ, ಸುಧಾಕರ ಮುಸ್ತಫಾ....ಎಲ್ಲರೂ ಆಫೀಸ್ ರೂಮಿಗೆ ಬನ್ನಿ.....’’ ಆದೇಶ ನೀಡಿದರು.
ಎಲ್ಲರೂ ಪ್ರಾಂಶುಪಾಲರ ಕೊಠಡಿಯನ್ನು ಸೇರಿದರು.
ಪ್ರಾಂಶುಪಾಲರು ಉಗ್ರರಾಗಿದ್ದರು. ‘‘ನಿಮ್ಮೆಲ್ಲರನ್ನು ಸಸ್ಪೆಂಡ್ ಮಾಡ್ತೇನೆ....’’ ಘೋಷಿಸಿದರು.
‘‘ಸಾರ್...ನಾನೇನೂ ಮಾಡಿಲ್ಲ...’’ ಮುಸ್ತಫಾ ಅಳು ಧ್ವನಿಯಲ್ಲಿ ಹೇಳಿದ.
‘‘ನೀನೇನು ಮಾಡದೇ ನಿನ್ನ ಮುಖದಲ್ಲಿ ರಕ್ತ ಬಂದಿರುವುದಾ? ಶರ್ಟ್ ಹರಿದಿರುವುದಾ...?’’ ಪ್ರಾಂಶುಪಾಲರು ಜೋರಲ್ಲಿ ಕೇಳಿದರು.
‘‘ಸಾರ್...ನಮ್ಮ ಕ್ಲಾಸಿನೊಳಗೆ ಬಂದು ಪಾಲಿಟಿಕ್ಸ್ ಮಾಡ್ತಾರೆ ಸಾರ್. ಮುಸ್ತಫಾನಿಗೆ ಇವರು ಬೆದರಿಕೆ ಒಡ್ಡಿದರು ಸಾರ್...’’ ಸುಧಾಕರ ಹೇಳಿದ.
‘‘ಅದನ್ನೆಲ್ಲ ಹೇಳಲು ನೀನು ಯಾರು? ನಾನಿಲ್ಲಿ ಪ್ರಿನ್ಸಿಪಾಲ್ ಇರುವುದು ಯಾಕೆ?’’ ಸುಧಾಕರ ತಲೆತಗ್ಗಿಸಿದ.
‘‘ಸತೀಶ...ನೀನು ಅವರ ಕ್ಲಾಸಿಗೆ ಹೋದದ್ದು ಯಾಕೆ?’’ ಪ್ರಾಂಶುಪಾಲರು ಕೇಳಿದರು.
‘‘ಮುಸ್ತಫಾನನ್ನು ಅಭಿನಂದಿಸಲು ಹೋಗಿದ್ದೆವು ಸಾರ್...ಅಷ್ಟರಲ್ಲಿ ...’’
‘‘ಇಲ್ಲ ಸಾರ್...ಅಯೋಧ್ಯೆ ರಾಮಮಂದಿರದ ಹೆಸರಲ್ಲಿ ಮುಸ್ತಫಾನನ್ನು ಬೆದರಿಸುತ್ತಿದ್ರು ಸಾರ್...’’ ನರೇಶ್ ಹೇಳಿದ.
‘‘ರಾಮಮಂದಿರ ಅಲ್ಲಿ ಕಟ್ಟೇ ಕಟ್ಟುತ್ತೇವೆ...ಯಾವ ಕಾಂಗ್ರೆಸ್ ಚೇಲಾಗಳು ಅಡ್ಡ ಬಂದರೂ ಸರಿ...’’ ಸತೀಶ ಜೋರಾಗಿ ಹೇಳಿದ.
ಇದು ತನ್ನ ತಂದೆಯನ್ನು ಉದ್ದೇಶಿಸಿ ಹೇಳಿರುವುದು ಎನ್ನುವುದು ನರೇಶ್‌ಗೆ ಗೊತ್ತಾಯಿತು ‘‘ರಾಮಮಂದಿರದ ಹೆಸರಲ್ಲಿ ಹಣ ಕಲೆಕ್ಷನ್ ಮಾಡಿ ನುಂಗಿ ಹಾಕುವ ಗತಿಗೆಟ್ಟು ನಮಗೆ ಬಂದಿಲ್ಲ...’’ ನರೇಶ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ. ಮುಸ್ತಫಾ ಮಾತ್ರ ಇದನ್ನೆಲ್ಲ ಆತಂಕದಿಂದ ನೋಡುತ್ತಿದ್ದ. ಅವನು ನಿಜಕ್ಕೂ ಹೆದರಿ ಕಂಗಾಲಾಗಿದ್ದ. ‘‘ಅಧಿಕಾರಕ್ಕಾಗಿ ಮುಸಲರ ಕಾಲು ನೆಕ್ಕುವ ಗತಿಗೆಟ್ಟು ನಮಗೂ ಬಂದಿಲ್ಲ...’’ ಸತೀಶ ಹೇಳಿದ.
ತನ್ನೆದುರೇ ಇಷ್ಟು ಭೀಕರವಾಗಿ ಜಗಳಾಡುವುದನ್ನು ನೋಡಿ ಪ್ರಾಂಶುಪಾಲರು ಇನ್ನಷ್ಟು ಉಗ್ರರಾದರು.
‘‘ಶಟಪ್...ಮುಚ್ಚಿ ಬಾಯಿ....ನರೇಶ್....ಬಾಯಿ ಮುಚ್ಚದಿದ್ದರೆ ನಿನ್ನನ್ನು ಕಾಲೇಜಿನಿಂದ ಹೊರಗೆ ಹಾಕಬೇಕಾಗುತ್ತೆ...ಸತೀಶ್....ನಾಲಗೆಯ ಮೇಲೆ ಹಿಡಿತವಿರಲಿ....’’ ಅಬ್ಬರಿಸಿದರು. ಎಲ್ಲರೂ ವೌನವಾದರು.
ಅವರ ಸಿಟ್ಟೆಲ್ಲ ಈಗ ಮುಸ್ತಫಾನ ಕಡೆಗೆ ತಿರುಗಿತು. ‘‘ಮುಸ್ತಫಾ...ನೀನು ಎಲ್ಲರ ಹಾಗಲ್ಲ ಎಂದು ತಿಳಿದುಕೊಂಡಿದ್ದೆ....ನಿನ್ನ ಬಗ್ಗೆ ಅಭಿಮಾನವಿತ್ತು...ಇದೀಗ ನೀನೂ ಓದುವುದನ್ನು ಬಿಟ್ಟು ಪಾಲಿಟಿಕ್ಸ್‌ಗೆ ಇಳಿದಿದ್ದೀಯ.....’’ ಎಂದು ಕೇಳಿ ಬಿಟ್ಟರು.
‘‘ಸಾರ್ ನನಗೇನೂ ಗೊತ್ತಿಲ್ಲ ಸಾರ್...ನಾನು ಇದರಲ್ಲಿ ಇಲ್ಲ ಸಾರ್....’’ ಮುಸ್ತಫಾ ಆರ್ತ ಧ್ವನಿಯಲ್ಲಿ ತೋಡಿಕೊಂಡ.
‘‘ಏನು ಗೊತ್ತಿಲ್ಲ? ಮಾಡುವುದನ್ನು ಮಾಡಿ ಗೊತ್ತಿಲ್ಲ ಅಂತೆ ಗೊತ್ತಿಲ್ಲ...’’ ಪ್ರಾಂಶುಪಾಲರು ಮತ್ತೊಮ್ಮೆ ಅಬ್ಬರಿಸಿದರು. ಕೊನೆಗೂ ಮುಸ್ತಫಾನೂ ಸೇರಿ ಐದು ಜನರನ್ನು ಒಂದು ವಾರ ಅಮಾನತು ಮಾಡುವುದಾಗಿ ಪ್ರಾಂಶುಪಾಲರು ಪ್ರಕಟಿಸಿದರು.
ಮುಸ್ತಫಾ ಅಳುತ್ತಿದ್ದ. ಕಣ್ಣೀರು ಒರೆಸಿಕೊಳ್ಳುತ್ತಾ ಕನ್ನಡ ಪಂಡಿತರಲ್ಲಿಗೆ ಹೋದ.
‘‘ಎಂತ ಮುಸ್ತಫಾ ನಿನ್ನ ಗಲಾಟೆ...’’ ಪಂಡಿತರು ಕೇಳಿದರು.
‘‘ಇಲ್ಲ ಸಾರ್...ನಾನೇನೂ ಮಾಡಿಲ್ಲ ಸಾರ್...’’ ಮುಸ್ತಫಾ ಹೇಳಿದ.
‘‘ಎಲ್ಲ ಗೊತ್ತು. ಒಂದು ವಾರ ಮನೆಯಲ್ಲಿರು. ನಾನು ಪ್ರಾಂಶುಪಾಲರಲ್ಲಿ ಕಂಡು ಮಾತನಾಡುತ್ತೇನೆ....ಈಗ ಮನೆಗೆ ಹೋಗು...ಇಲ್ಲಿದ್ದರೆ ಸುಮ್ಮನೆ ಇನ್ನಷ್ಟು ತೊಂದರೆ..’’ ಎಂದು ಸಲಹೆ ನೀಡಿದರು. ಮುಸ್ತಫಾ ಕಣ್ಣೀರು ಹಾಕುತ್ತಲೇ ಕಾಲೇಜಿನಿಂದ ಹೊರ ನಡೆದಿದ್ದ. ‘‘ಹೆಗ್ಡೆಯವರೇ...ಮುಸ್ಲಿಮ್ ಹುಡುಗನಿಗೆ ನೀವು ತೋರಿಸುವ ಪ್ರೀತಿ, ನಮ್ಮ ಹಿಂದೂ ಹುಡುಗರ ಮೇಲೂ ಸ್ವಲ್ಪ ಇರಲಿ....’’ ಸ್ಟಾಫ್ ರೂಂನಲ್ಲಿದ್ದ ಇತಿಹಾಸ ಮೇಷ್ಟ್ರು ಗುಣಕರ್ ರಾವ್ ಸ್ವಲ್ಪ ವ್ಯಂಗ್ಯ ಧ್ವನಿಯಲ್ಲಿ ಹೇಳಿದರು.
‘‘ಮೇಷ್ಟ್ರಾಗಿ ಇಂತಹ ಮಾತನ್ನು ಹೇಳಲು ನಾಚಿಕೆಯಾಗುವುದಿಲ್ವೇನ್ರೀ...?’’ ಪಂಡಿತರು ಜೋರಾಗಿ ಕೇಳಿದರು.
‘‘ವಿದ್ಯಾರ್ಥಿಗಳು ಎಂದ ಮೇಲೆ ಸಮಾನ ಪ್ರೀತಿ ಇರಬೇಕು. ಮುಸ್ಲಿಮ್ ವಿದ್ಯಾರ್ಥಿಯ ಪರವಾಗಿ ಒಳಗೊಳಗೆ ಲಾಬಿ ಮಾಡುವುದು...ಹಿಂದೂ ವಿದ್ಯಾರ್ಥಿಗಳ ವಿರುದ್ಧ ಪಿತೂರಿ ಮಾಡುವುದು ನಿಮ್ಮಂತಹ ಪಂಡಿತರಿಗೆ ಶೋಭಿಸುವುದಿಲ್ಲ...’’ ರಾವ್ ಕೂಡ ಜೋರು ದನಿಯಲ್ಲಿ ಹೇಳಿದರು.
‘‘ಮುಸ್ತಫಾ ಎಂತಹ ಹುಡುಗ ಎನ್ನುವುದು ನನಗೆ ಗೊತ್ತು...’’ ಪಂಡಿತರು ಹೇಳಿದರು.
‘‘ಹೌದೌದು. ಎಲ್ಲ ತಪ್ಪೂ ಹಿಂದೂಗಳದ್ದೇ...ಇವರಿಗೆ ಬಾಯಲ್ಲಿ ಬೆರಳು ಹಾಕಿದರೂ ಕಚ್ಚುವುದಕ್ಕೆ ಬರುವುದಿಲ್ಲ...ಅಂತಿಮವಾಗಿ ನಮ್ಮ ಹಿಂದೂ ವಿದ್ಯಾರ್ಥಿಗಳೇ ಬಲಿಯಾಗಬೇಕು..’’ ರಾವ್ ಹೇಳಿದರು.
ಅಷ್ಟರಲ್ಲಿ ಪಾಠ ಮುಗಿಸಿ ಬಂದ ಸರಸ್ವತಿ ಮೇಡಂ ಮಧ್ಯ ಪ್ರವೇಶಿಸಿದರು ‘‘ಇದೆಂತದು...ವಿದ್ಯಾರ್ಥಿಗಳ ಹಾಗೆ ನೀವೂ ಕಚ್ಚಾಡಿಕೊಂಡರೆ ಹೇಗೆ? ಗುಣಕರ್ ಸುಮ್ಮನಿರಿ...ಪಂಡಿತರೆ ನಿಮ್ಮನ್ನು ಪ್ರಿನ್ಸಿಪಾಲ್ ಕರೆಯುತ್ತಿದ್ದಾರೆ...ಹೋಗಿ...’’ ಎಂದು ದೊಡ್ಡದಾಗಿ ಸ್ಫೋಟಿಸಬಹುದಾದ ಗಲಾಟೆಯನ್ನು ಅಲ್ಲಿಗೆ ತಣ್ಣಗಾಗಿಸಿದರು. ಪಂಡಿತರು ರಾವ್‌ನನ್ನೇ ದಿಟ್ಟಿಸಿ, ಅಲ್ಲಿಂದ ಪ್ರಿನ್ಸಿಪಾಲರ ಕಚೇರಿ ಕಡೆಗೆ ನಡೆದರು.
ಅಂದು ಕಾಲೇಜನ್ನು ಅನಿವಾರ್ಯ ಕಾರಣಗಳಿಂದ ತುಸು ಬೇಗ ಮುಚ್ಚಲಾಯಿತು. ಈ ಗಲಾಟೆಗಳೆಲ್ಲ ನಡೆಯುವ ಸಂದರ್ಭದಲ್ಲಿ ಜಾನಕಿ ತರಗತಿಯಲ್ಲಿ ಇದ್ದಿರಲಿಲ್ಲ.
ಇತ್ತ ಹಾಸ್ಟೆಲ್‌ನಲ್ಲಿ ಜಾನಕಿಯನ್ನು ಕಂಡದ್ದೇ ಮೀನಾಕ್ಷಿ ಅತ್ಯಾತುರದಿಂದ ಹೇಳಿದಳು ‘‘ವಿಷಯ ಗೊತ್ತಾಯಿತಲ್ಲ?’’
ಜಾನಕಿಗೆ ಅದೇನೋ ಗಲಾಟೆಯ ಸುದ್ದಿ ಸಿಕ್ಕಿತ್ತು. ಆದರೆ ಸಂಪೂರ್ಣ ವಿವರ ಸಿಕ್ಕಿರಲಿಲ್ಲ. ‘‘ಇಲ್ಲ, ಎಂತ?’’
‘‘ಅದೇ ಮುಸ್ತಫಾ...ಅವನು ಸೀನಿಯರ್‌ಗಳ ಜೊತೆಗೆ ಗಲಾಟೆ ಮಾಡಿದನಂತೆ...’’
‘‘ಯಾಕಂತೆ...?’’
‘‘ಸರಿಯಾಗಿ ಗೊತ್ತಿಲ್ಲ. ಆದರೆ ರಾಮನ ಬಗ್ಗೆ ಅದೆಂತದೋ ಕಮೆಂಟ್ ಮಾಡಿದನಂತೆ...ಎಬಿವಿಪಿಯವರು ಇದನ್ನು ಕೇಳಲಿಕ್ಕೆ ಹೋದರಂತೆ...ಅವನು ಅವರೊಟ್ಟಿಗೂ ರಾಂಗ್ ಮಾತನಾಡಿದನಂತೆ...’’
‘‘ಹೌದಾ? ನಂಬಲಿಕ್ಕೆ ಆಗುವುದಿಲ್ಲ ಮಾರಾಯ್ತಿ...’’
‘‘ಹಿಸ್ಟರಿ ಮೇಷ್ಟ್ರು ಗುಣಕರ್ ಸರ್ ಹೇಳಿದ್ದು....ನೀನೇ ಹೇಳು...ರಾಮನ ಬಗ್ಗೆ ಕಮೆಂಟ್ ಮಾಡಿದರೆ ನಾವು ಯಾಕೆ ಸುಮ್ಮನಿರಬೇಕು? ಅಲ್ಲಾನ ಬಗ್ಗೆ ಕಮೆಂಟ್ ಮಾಡಿದರೆ ಅವನ ಕಡೆಯವರು ಸುಮ್ಮನಿರ್ತಾರ? ಕಮ್ಯುನಲ್ ಕ್ಲೇಶ್ ಆಗ್ತಾ ಇರ್ಲಿಲ್ವಾ?...ಆರು ಜನರನ್ನು ಸಸ್ಪೆಂಡ್ ಮಾಡಿದ್ದಾರಂತೆ...ಒಂದು ವಾರ...’’
‘‘ಅದ್ಯಾಕೆ ಆರು ಜನರನ್ನು...’’ ಜಾನಕಿ ಅರ್ಥವಾಗದೆ ಕೇಳಿದರು.
‘‘ಗೊತ್ತುಂಟಲ್ಲ...ಕನ್ನಡ ಪಂಡಿತರು ಮುಸ್ತಫಾನ ಪರವಾಗಿ ಲಾಬಿ ಮಾಡಿದರು. ಅಮಾನತು ಮಾಡುವುದಾದರೆ ಎರಡೂ ಕಡೆಯವರನ್ನೂ ಮಾಡಬೇಕು ಎಂದು ಪಂಡಿತರು ಹಟ ಹಿಡಿದರಂತೆ...ಅದಕ್ಕಾಗಿ ಎಬಿವಿಪಿಯವರನ್ನೂ ಸಸ್ಪೆಂಡ್ ಮಾಡಬೇಕಾಯಿತಂತೆ...’’ ಮೀನಾಕ್ಷಿ ಎಲ್ಲ ವಿವರಗಳನ್ನೂ ಕಲೆ ಹಾಕಿಕೊಂಡು ಬಂದಿದ್ದಳು.
‘‘ಗುಣಕರ್ ಸಾರ್‌ಗೂ ಕನ್ನಡ ಪಂಡಿತರಿಗೂ ಗಲಾಟೆಯಾಯಿತಂತೆ...’’ ಮೀನಾಕ್ಷಿ ಹೇಳಿದಳು.
‘‘ಹೌದಾ.....’’ ಜಾನಕಿಗೆ ಅಚ್ಚರಿ. ಮೇಷ್ಟ್ರುಗಳು ಪರಸ್ಪರ ಗಲಾಟೆ ಮಾಡುತ್ತಾರೆ ಎನ್ನುವುದು ಅವಳಿಗೆ ಹೊಸತು. ‘‘ಪಂಡಿತ್ ಸಾರ್ ಎಲ್ಲ ತಪ್ಪೂ ಹಿಂದೂ ವಿದ್ಯಾರ್ಥಿಗಳದ್ದು ಎಂದರಂತೆ...ಗುಣಕರ್ ಸಾರ್ ಅದನ್ನು ಖಂಡಿಸಿದರಂತೆ. ಗುಣಕರ್ ಸಾರ್ ಒತ್ತಾಯ ಮಾಡಿದ್ದರಿಂದ ಮುಸ್ತಫಾ ಸಸ್ಪೆಂಡ್ ಆದದ್ದಂತೆ....’’
‘‘ಪಂಡಿತರು ಮುಸ್ತಫಾನ ಪರವಾಗಿ ಯಾಕೆ ನಿಂತದ್ದು...?’’ ಜಾನಕಿ ಅರ್ಥವಾಗದೆ ಕೇಳಿದಳು.
‘‘ಮುಸ್ತಫಾ ಅವರ ಚೇಲಾ ಅಲ್ವಾ? ನಿನಗೆ ಗೊತ್ತಾ? ರಾಮಾಯಣದ ಪರೀಕ್ಷೆ ಆಯಿತಲ್ಲ...ಅದರ ಪ್ರಶ್ನೆ ಪತ್ರಿಕೆ ತಯಾರಿಸಿದ್ದೇ ಈ ಕನ್ನಡ ಪಂಡಿತರಂತೆ....ಮುಸ್ತಫಾನಿಗೆ ಮೊದಲೇ ಯಾವೆಲ್ಲ ಪ್ರಶ್ನೆ ಬರುತ್ತದೆ ಎಂದು ಹೇಳಿಕೊಟ್ಟಿದ್ದರಂತೆ....ಅದರಿಂದ ಅವನು ರಾಜ್ಯಮಟ್ಟದಲ್ಲಿ ಬಹುಮಾನ ಪಡೆಯುವುದು ಸಾಧ್ಯವಾದದ್ದು...’’ ಮೀನಾಕ್ಷಿ ಒಂದು ದೊಡ್ಡ ಬಾಂಬನ್ನೇ ಸ್ಫೋಟಿಸಿದ್ದಳು. ಜಾನಕಿ ಆವಕ್ಕಾದಳು. ‘‘ಇದು ನಿಜವೇ?’’ ಕೇಳಿದಳು.
‘‘ನಿಜ ಆಗಿರಲೂ ಬಹುದು. ಎಲ್ಲರೂ ಹಾಗೆಯೇ ಹೇಳುತ್ತಾ ಇದ್ದಾರೆ. ಗುಣಕರ್ ಸರ್‌ಗೆ ಇದರ ಬಗ್ಗೆ ಗೊತ್ತು....’’
ಜಾನಕಿ ವೌನವಾಗಿದ್ದಳು. ಮೀನಾಕ್ಷಿ ಮುಂದುವರಿಸಿದಳು ‘‘...ನೋಡು...ಇಲ್ಲದೇ ಇದ್ದರೆ ಆ ದನ ತಿನ್ನುವವ ರಾಮಾಯಣ ಪರೀಕ್ಷೆ ಬರೆಯುವುದು ಎಂತದು? ರಾಜ್ಯದಲ್ಲೇ ಸೆಕೆಂಡ್ ಪ್ರೈಝ್ ಪಡೆಯುವುದು ಎಂದರೆ ಎಂತದು? ಇಷ್ಟೆಲ್ಲ ಸಂಸ್ಕಾರ, ಹಿನ್ನೆಲೆ ಇರುವ ನಿನಗೆ ಒಂಬತ್ತನೇ ಸ್ಥಾನ ಸಿಕ್ಕಿರುವಾಗ....’’
(ರವಿವಾರದ ಸಂಚಿಕೆಗೆ)