ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಸಿಒಡಿ ತನಿಖೆಗೆ ಅಗ್ನಿ ಶ್ರೀಧರ್ ಒತ್ತಾಯ

Update: 2017-03-27 14:35 GMT

ಬೆಂಗಳೂರು, ಮಾ. 27: ಇತ್ತೀಚಿಗೆ ಪೊಲೀಸರು ತಮ್ಮ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಆರೋಪಿಸಿರುವುದು ಸುಳ್ಳು. ಈ ಕುರಿತು ಸತ್ಯಾಸತ್ಯತೆಯನ್ನು ತಿಳಿಯಲು ಸರಕಾರ ಸಿಒಡಿ ತನಿಖೆ ನಡೆಸಬೇಕು ಎಂದು ಕರುನಾಡ ಸೇನೆ ಅಧ್ಯಕ್ಷ ಅಗ್ನಿ ಶ್ರೀಧರ್ ಒತ್ತಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಫೆ.7 ರಂದು ಕಡಬಗೆರೆ ಶ್ರೀನಿವಾಸ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುನಾಡ ಸೇನೆಯ ಪದಾಧಿಕಾರಿ ರೋಹಿತ್‌ನನ್ನು ಹುಡುಕುವ ನೆಪದಲ್ಲಿ ತನ್ನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಶೋಧಿಸಿದ್ದರು. ಪೊಲೀಸರ ಕಾರ್ಯಾಚರಣೆಗೆ ಸಂಪೂರ್ಣವಾಗಿ ನಾನು ಸಹಕರಿಸಿದೆ. ತನಿಖೆ ಸಂಬಂಧ ಎಲ್ಲಾ ರೀತಿಯ ಮಾಹಿತಿ ನೀಡಿದ್ದರೂ ದಾಳಿಯ ನೇತೃತ್ವ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಮ್ಮೆಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ದೂರಿದರು.

ಇದೇ ವೇಳೆ ಶೋಧದ ನೆಪದಲ್ಲಿ ದಾಳಿ ನಡೆಸಿದ್ದ ಅವರು, ಎರಡು ಲಾಂಗ್, ನಾಲ್ಕು ಗನ್ ಹಾಗೂ ಎರಡು ಕತ್ತಿಗಳು ನನ್ನ ಬಳಿ ಇದ್ದ ಕಾರಣ ಅಗ್ನಿ ಶ್ರೀಧರ್ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಸಾರ್ವಜನಿಕರಿಗೆ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ಅನವಶ್ಯಕವಾಗಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ನಾನು ಯಾರಿಗಾದರೂ ಬೆದರಿಕೆಯೊಡ್ಡಿದ್ದರೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ ಅವರು, ಕಳೆದ 20 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿದ್ದೇನೆ ಎಂದರು.

 ನನ್ನ ಹತ್ತಿರವಿದ್ದ ಎಲ್ಲ ಆಯುಧಗಳಿಗೆ ಅನುಮತಿ ಪಡೆದಿರುವ ದಾಖಲೆಗಳಿವೆ. ಪೊಲೀಸರ ದಾಳಿ ಮಾಡಿದ ಸಮಯದಲ್ಲಿ ದಾಖಲೆಗಳಿಲ್ಲ ಎಂದು ಸುಳ್ಳು ಆರೋಪ ಮಾಡಿ, ದುರುದ್ದೇಶ ಪೂರ್ವಕವಾಗಿ ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದ ಅವರು, ಅಕ್ರಮ ಶಸ್ತ್ರಾಸ್ತ್ರಗಳು ಎಂದಾದರೆ, ಅದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಹೊರತು ಪಡಿಸಿ, ಅನಗತ್ಯವಾಗಿ ಕೇಸು ದಾಖಲಿಸಿ ಕಿರುಕುಳ ನೀಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ತನ್ನ ಮೇಲೆ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಹಾಗೂ ತನ್ನ ಸಹಚರರಾದ ಬಚ್ಚನ್ ಮೇಲೆ ಕೋಕ ಕಾಯ್ದೆ ಕೇಸ್ ದಾಖಲು ಹಾಗೂ ಲೋಹಿತ್ ಮೇಲೆ 2 ಕೇಸ್ ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ತನ್ನ ಹಾಗೂ ತನ್ನ ಸಹಚರರ ಮೇಲೆ ದಾಖಲಾಗಿರುವ ಕೇಸ್‌ಗಳ ಕುರಿತಂತೆ ಸೂಕ್ತ ತನಿಖೆ ನಡೆಯಬೇಕು ಎಂದ ಅವರು, ನನ್ನ ಮೇಲೆ ಈ ರೀತಿ ಅನಗತ್ಯ ಆರೋಪ ಮಾಡುವುದನ್ನು ನೋಡಿದರೆ, ಇದರ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿರುವುದು ಕಂಡು ಬರುತ್ತಿದೆ. ಹಾಗಾಗಿ ಈ ಕುರಿತು ಒಂದು ವಾರದೊಳಗೆ ಸೂಕ್ತ ತನಿಖೆ ನಡೆಯುವಂತೆ ಈಗಾಗಲೇ ಡಿಜಿಗೆ ಮನವಿ ಸಲ್ಲಿಸಲಾಗಿದ್ದು, ಸಿಎಂ ಮತ್ತು ಗೃಹ ಸಚಿವರಿಗೂ ತನಿಖೆ ಕುರಿತಂತೆ ಮನವಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.

2001ರಲ್ಲೇ ಭೂಗತ ಜಗತ್ತಿನ ನಂಟನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದೇನೆ. ಬಳಿಕ ಅಗ್ನಿಪತ್ರಿಕೆ ಆರಂಭಿಸಿ, ಸಾಮಾಜಿಕ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ. ದಲಿತ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇನೆ. ಮನುಷ್ಯ ಪರಿವರ್ತನೆಯಾಗುವುದು ಅಪರಾಧವೇ? ನನ್ನಲ್ಲಿರುವ ಶಸ್ತ್ರಾಸ್ತ್ರಗಳಿಗೆ ದಾಖಲೆಗಳಿದ್ದು, ಪುರಾವೆಗಳನ್ನು ಕೂಲಂಕಷವಾಗಿ ಪರಿಗಣಿಸದೆ ಅಧಿಕಾರದ ದರ್ಪ ತೋರಿದ್ದಾರೆ. ರಾಜ್ಯದಲ್ಲಿ ನನ್ನಂತೆಯೇ 15ರಿಂದ 20 ಜನರು ಸ್ವರಕ್ಷಣೆಗಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಾರೆ. ಅವರನ್ನು ಯಾಕೆ ತನಿಖೆಗೆ ಒಳಪಡಿಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಪತ್ರಕರ್ತ ಇಂದೂಧರ ಹೊನ್ನಾಪುರ, ಲೇಖಕಿ ಪ್ರತಿಭಾ ನಂದನ್‌ಕುಮಾರ್ ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News