ವಸೂಲಾಗದ ಸುರಕ್ಷಾ ಶುಲ್ಕ, ನಿಲ್ಲದ ವೈದ್ಯರ ಮೇಲಿನ ಹಲ್ಲೆ

Update: 2017-03-27 19:01 GMT

ಇಂದು ಮುಂಬೈಯ ಬಹುಪಾಲು ಪೊಲೀಸರನ್ನು ವಿಐಪಿಗಳ ಸುರಕ್ಷೆಗೆ ಇರಿಸಲಾಗುತ್ತಿದೆ. ಆದರೆ ಈ ವಿಐಪಿಗಳಲ್ಲಿ ಅನೇಕರು ತಮ್ಮ ಸುರಕ್ಷೆಯ ವಿಷಯವಾಗಿ ಸರಕಾರಕ್ಕೆ ಕಟ್ಟಬೇಕಾದ ಶುಲ್ಕವನ್ನು ಸರಿಯಾಗಿ ಯಾಕೆ ಸಲ್ಲಿಸುತ್ತಿಲ್ಲ? ಈ ಬಗ್ಗೆ ಸರಕಾರ ಯಾವ ಕ್ರಮ ಕೈಗೊಂಡಿದೆ? ಎನ್ನುವ ಕುರಿತಾಗಿ ರಾಜ್ಯ ಸರಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ‘‘ಸರಕಾರ ಈ ವಿಷಯದಲ್ಲಿ ಯಾಕೆ ನಿರ್ಲಕ್ಷ್ಯತನ ತೋರಿಸುತ್ತಿದೆ? ಉತ್ತರಿಸಬೇಕು’’ ಎಂದೂ ಕೋರ್ಟ್ ಸೂಚಿಸಿದೆ. ಹಾಗೂ ‘‘ಏನು ಕ್ರಮ ಕೈಗೊಂಡಿರಿ, ಯಾವ ಪ್ರಗತಿ ಆಗಿದೆ?’’ ಎನ್ನುವ ಕುರಿತಂತೆ ರಿಪೋರ್ಟ್ ಕೇಳಿದೆ. ಚೀಫ್ ಜಸ್ಟೀಸ್ ಮಂಜುಳಾ ಚೆಲ್ಲೂರ ಮತ್ತು ಜಿ.ಕೆ. ಕುಲಕರ್ಣಿ ಅವರ ಪೀಠವು ಮುಂಬೈ ನಿವಾಸಿ ಸನ್ನಿ ಪುನಮಿಯಾ ವತಿಯಿಂದ ಸಲ್ಲಿಸಿದ ಜನಹಿತ ಅರ್ಜಿಯ ಮೇಲೆ ವಿಚಾರಣೆ ನಡೆಸಿದಾಗ ಹೈಕೋರ್ಟ್ ಹೀಗೆ ಪ್ರಶ್ನಿಸಿತು.

ಇತ್ತ ಸರಕಾರಿ ವಕೀಲ ಅಭಿನಂದನ್ ವಗ್ಯಾನಿ ಅವರು ಕೋರ್ಟ್‌ಗೆ ಒಂದು ಕಡತ ಸಲ್ಲಿಸಿದ್ದಾರೆ. ಅದರಲ್ಲಿ ಪೊಲೀಸ್ ಸುರಕ್ಷೆ ಪಡೆದಿರುವವರ ಹೆಸರು, ಅವರು ಇಲಾಖೆಗೆ ಎಷ್ಟು ಶುಲ್ಕ ಸಂದಾಯ ಮಾಡಿದ್ದಾರೆ, ಎಷ್ಟು ಮೊತ್ತ ಬಾಕಿ ಇದೆ ಇತ್ಯಾದಿ ಮಾಹಿತಿ ನೀಡಿದ್ದಾರೆ. ಸರಕಾರಿ ವಕೀಲರ ಪ್ರಕಾರ ವರ್ಷ 2010ರಿಂದ ಈ ತನಕ 15 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ಮತ್ತು ಆರು ಕೋಟಿ ರೂಪಾಯಿ ವಸೂಲಿ ಮಾಡಲು ಬಾಕಿ ಇದೆ.

ಈ ಕಡತದ ಅಧ್ಯಯನ ಮಾಡಿದ ನ್ಯಾಯಾಧೀಶರು ಪ್ರತಿಕ್ರಿಯಿಸುತ್ತಾ ‘‘ಜನಪ್ರಿಯ ವ್ಯಕ್ತಿಗಳ, ನಾಯಕರ, ಬಿಲ್ಡರ್‌ಗಳ ಹೆಸರುಗಳೂ ಇದರಲ್ಲಿವೆ. ಇವರಿಗೆಲ್ಲ ಸುರಕ್ಷಾ ಶುಲ್ಕ ನೀಡಲು ಯಾಕೆ ಸಾಧ್ಯವಾಗಿಲ್ಲ? ಸರಕಾರ ಈ ಜನರಿಂದ ಸುರಕ್ಷಾ ಶುಲ್ಕ ವಸೂಲಿ ಮಾಡಲು ಯಾವ ಹೆಜ್ಜೆ ಇರಿಸಿದೆ? ಎಂದು ಸ್ಪಷ್ಟ ರೂಪದಿಂದ ಸರಕಾರ ತಿಳಿಸಬೇಕಿದೆ’’ ಎಂದರು. ‘‘ವಿಐಪಿಗಳಿಗೆ ಪೊಲೀಸ್ ಸುರಕ್ಷೆ ನೀಡುವ ಮೊದಲು ಸರಕಾರವು ಎಲ್ಲಾ ರೀತಿಯ ಅಧ್ಯಯನ ಮಾಡಬೇಕಿತ್ತು. ಆದರೆ ಮಾಡಿದಂತೆ ಕಾಣುವುದಿಲ್ಲ. ಈ ಕಡತ ಗಮನಿಸಿದರೆ ಸರಕಾರವು ನೇತಾರರ ಸಂಬಂಧಿಕರಿಗೆ, ನೆರೆಹೊರೆಯವರಿಗೂ ಸುರಕ್ಷೆ ಒದಗಿಸಿದಂತೆ ಕಂಡು ಬರುತ್ತದೆ. ಇದು ಅಗತ್ಯವಿತ್ತೇ? ಇದರ ಬಗ್ಗೆ ಕಾಲಕಾಲಕ್ಕೆ ಸಮೀಕ್ಷೆ ನಡೆಸಲಾಗಿದೆಯೇ? ಸರಕಾರಿ ಹಣವನ್ನು ಈ ರೀತಿ ದುರುಪಯೋಗಪಡಿಸಬಾರದು. ಕೆಲವು ಗಣ್ಯರು, ಸಿನೆಮಾ ರಂಗದವರು ಬೇರೆಯವರ ಎದುರು ತಮ್ಮ ಪ್ರತಿಷ್ಠೆ ಹೆಚ್ಚಿಸಲು ಪೊಲೀಸ್ ಸುರಕ್ಷೆ ಇರಿಸಿಕೊಳ್ಳುವುದಿದೆ. ಈ ಬಗ್ಗೆ ಸಮೀಕ್ಷೆ ಮಾಡಬೇಕು’’ ಎಂದೂ ಕೋರ್ಟ್ ಹೇಳಿದೆ.
* * *

ಪ್ರತೀ ತಿಂಗಳು ಕನಿಷ್ಠ ನಾಲ್ವರು ವೈದ್ಯರ ಮೇಲೆ ಹಲ್ಲೆ!

ಶುಶ್ರೂಷೆಯಲ್ಲಿ ನಿರ್ಲಕ್ಷ್ಯ ಮಾಡಿದ ಕಾರಣವನ್ನು ಮುಂದಿಟ್ಟು ವೈದ್ಯರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆಗಳು ಮುಂಬೈಯಲ್ಲಿ ನಿಲ್ಲುವ ಸೂಚನೆ ಕಾಣುತ್ತಿಲ್ಲ! ‘ಮಹಾರಾಷ್ಟ್ರ ಎಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್‌’ ನ (ಮಾರ್ಡ್) ಅನುಸಾರ ಪ್ರತೀ ತಿಂಗಳು ನಾಲ್ವರು ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ನಡೆಸುತ್ತಾರಂತೆ. ಈ ಬಗ್ಗೆ ವೈದ್ಯರಿಗೆ ಸುರಕ್ಷೆ ಮತ್ತು ಈ ವಿಷಯವಾಗಿ ಕಟುವಾದ ಕಾನೂನು ಜಾರಿಗೆ ಬರುವಂತೆ ದೀರ್ಘ ಸಮಯದಿಂದ ಮಾರ್ಡ್ ಒತ್ತಾಯಿಸುತ್ತಲೇ ಇದೆ. ಹೀಗಿದ್ದೂ ಕಾನೂನಿನಲ್ಲಿ ಸುಧಾರಣೆಯಾದರೂ ಸುರಕ್ಷೆ ಈ ತನಕ ದೊರೆತಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರತ ವೈದ್ಯರು ಈಗಲೂ ಭಯದಿಂದ ಕೆಲಸಮಾಡಬೇಕಾಗಿದೆ.

ಮಾರ್ಡ್ ಅನುಸಾರ ವರ್ಷ 2016ರಲ್ಲಿ ರಾಜ್ಯದಲ್ಲಿ 48 ವೈದ್ಯರ ಮೇಲೆ ರೋಗಿಗಳ ಸಂಬಂಧಿಕರು ಹಲ್ಲೆ ನಡೆಸಿದ್ದರು. 2017ರಲ್ಲಿ ಈ ತನಕ ವೈದ್ಯರ ಮೇಲಿನ ಹಲ್ಲೆಯ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ‘ಇಂಡಿಯನ್ ಮೆಡಿಕಲ್ ಎಸೋಸಿಯೇಶನ್’ ಯುವ ವಿಭಾಗದ ಅಧ್ಯಕ್ಷ ಸಾಗರ್ ಮುಂದ್ರಾ ಅವರು ತಿಳಿಸಿದಂತೆ ಮಾರ್ಡ್ ಜೊತೆಗೂಡಿ ಮುಂಬೈ ಸಹಿತ ರಾಜ್ಯದ ವಿವಿಧೆಡೆ ವೈದ್ಯರು ಹಲ್ಲೆಯ ವಿರುದ್ಧ ಮೋರ್ಚಾ ಕೈಗೊಂಡಿದ್ದರು.

ಹೈಕೋರ್ಟ್ ಛೀಮಾರಿ

ಈ ನಡುವೆ ಮಹಾರಾಷ್ಟ್ರ ಸರಕಾರಿ ಆಸ್ಪತ್ರೆಗಳಲ್ಲಿ ಐದು ದಿನ ಆಂದೋಲನ ನಡೆಸಿದ ರೆಸಿಡೆಂಟ್ ಡಾಕ್ಟರ್‌ಗಳ ವಿರುದ್ಧ ಹೈಕೋರ್ಟ್ ತೀವ್ರ ಸಿಟ್ಟುಗೊಂಡಿದ್ದು ಮುಖ್ಯ ನ್ಯಾಯಾಧೀಶರಾದ ಮಂಜುಳಾ ಚೆಲ್ಲೂರ್ ಮತ್ತು ಜೆ.ಎಸ್. ಕುಲಕರ್ಣಿ ಅವರು ‘‘ಯಾವ ವೈದ್ಯರಿಗೆ ಕೆಲಸ ಮಾಡಲು ಇಷ್ಟವಿಲ್ಲವೋ ರಾಜೀನಾಮೆ ನೀಡಿ. ನೀವು ಮುಷ್ಕರ ಹೂಡಲು ಕಂಪೆನಿ ನೌಕರರಲ್ಲ ಎನ್ನುವುದು ತಿಳಿದಿರಲಿ’’ ಎಂದು ಎಚ್ಚರಿಸಿದರು. ಐದು ದಿನಗಳ ಆಂದೋಲನದ ನಂತರ ಬಿಗು ಸುರಕ್ಷೆಯಲ್ಲಿ ವೈದ್ಯರು ಕೆಲಸಕ್ಕೆ ಹಾಜರಾದರು. ಕೋರ್ಟ್‌ನ ಮತ್ತು ಮುಖ್ಯಮಂತ್ರಿಯ ಎಚ್ಚರಿಕೆಗೆ ವೈದ್ಯರು ಆಂದೋಲನ ನಿಲ್ಲಿಸಿದ್ದರು. ವೈದ್ಯರ ಮುಷ್ಕರದ ವಿರುದ್ಧ ಜನಹಿತ ಅರ್ಜಿಯೊಂದನ್ನು ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು. ಮಾರ್ಡ್ ಕಳೆದ ವರ್ಷ ಹೈಕೋರ್ಟ್‌ಗೆ ತಾನು ಇನ್ನು ಮುಷ್ಕರ ಹೂಡುವುದಿಲ್ಲ ಎಂದು ಭರವಸೆ ನೀಡಿದ್ದನ್ನು ಅರ್ಜಿದಾರರು ಉಲ್ಲೇಖಿಸಿದರು. ಇತ್ತ ಮಾರ್ಡ್ ತಾನು ಯಾವ ವೈದ್ಯರಿಗೂ ಮುಷ್ಕರ ಹೂಡುವುದಕ್ಕೆ ಹೇಳಿಲ್ಲ. ವೈದ್ಯರೇ ಖಾಸಗಿ ರೂಪದಲ್ಲಿ ರಜೆ ಪಡೆದಿದ್ದಾರೆ ಎಂದು ಜಾರಿಕೊಂಡಿತು. ಈ ನಡುವೆ ಮುಂಬೈಯಲ್ಲಿ ವೈದ್ಯರ ಮುಷ್ಕರದಿಂದ ರೋಗಿಗಳು ಪರದಾಟ ನಡೆಸುವಂತಾಯಿತು.

ಕೋರ್ಟ್ ವೈದ್ಯರಿಗೆ ಸಮರ್ಪಕ ಸುರಕ್ಷೆ ಒದಗಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಕೂಡಾ ಆದೇಶಿಸಿದೆ. ಇನ್ನು ವೈದ್ಯರು ಭಯದಿಂದ ಕೆಲಸ ಮಾಡುವುದು ಬೇಡ ಎಂದು ಕೋರ್ಟ್ ಹೇಳಿದೆ. ಇದೀಗ ರೋಗಿಯ ಜೊತೆ ಕೇವಲ ಇಬ್ಬರು ಸಂಬಂಧಿಕರು ಮಾತ್ರ ಆಸ್ಪತ್ರೆಗೆ ಪ್ರವೇಶಿಸಬೇಕು. ಸರಕಾರ ನೀಡಿದ ಆಶ್ವಾಸನೆಯ ಬಗ್ಗೆ ಪ್ರತೀ 15 ದಿನಗಳಿಗೊಮ್ಮೆ ಕೋರ್ಟ್ ವಿಚಾರಣೆ ನಡೆಸಿ ಪರಿಶೀಲಿಸಲಿದೆ. ರಾಜ್ಯ ಸರಕಾರ ಸಂಚಾಲಿತ ಎಲ್ಲಾ ಆಸ್ಪತ್ರೆಗಳಲ್ಲಿ 1,100 ಸಶಸ್ತ್ರ ಪೊಲೀಸ್ ಪಡೆಯನ್ನು ಸುರಕ್ಷೆಗೆ ಇರಿಸಲಾಗುವುದು ಎಂದು ರಾಜ್ಯ ಮಹಾಧಿವಕ್ತಾರ ರೋಹಿತ್ ದೇವ್ ಕೋರ್ಟ್‌ಗೆ ತಿಳಿಸಿದ್ದಾರೆ.
* * *

ವಿಕ್ಟೋರಿಯಾ ಚಾಲಕರು ರಿಕ್ಷಾ-ಟ್ಯಾಕ್ಸಿ ಓಡಿಸಲಿದ್ದಾರೆ!

ಜೂನ್ 8, 2015ರಂದು ಮುಂಬೈ ಹೈಕೋರ್ಟ್ ವಿಕ್ಟೋರಿಯಾ ಕುದುರೆ ಗಾಡಿ ಓಡಾಟವನ್ನು ಅನಧಿಕೃತ ಎಂದು ಹೇಳಿತ್ತು. ಹಾಗೂ ಒಂದು ವರ್ಷದೊಳಗೆ ಇದನ್ನು ನಿಲ್ಲಿಸಲೂ ಆದೇಶಿಸಿತು. ಜೊತೆಗೆ ಈ ಕುದುರೆ ಗಾಡಿ ಮಾಲಕರ ಪುನರ್ವಸತಿ ಕುರಿತೂ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು. ಹೈಕೋರ್ಟ್ ತೀರ್ಮಾನದ ವಿರುದ್ಧ ವಿಕ್ಟೋರಿಯಾ ಗಾಡಿ ಮಾಲಕರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರೂಪದಿಂದ ದೂರು ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

ವಿಕ್ಟೋರಿಯಾ ಕುದುರೆ ಗಾಡಿಗಳನ್ನು ಬಂದ್ ಮಾಡಿ ಹಲವು ತಿಂಗಳು ಕಳೆಯಿತು. ಆದರೆ ಸರಕಾರ ಇದರ ಮಾಲಕರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಿಲ್ಲ. ಯಾವ ಹೆಜ್ಜೆಯನ್ನೂ ಇರಿಸಲು ಸರಕಾರ ಮುಂದಾಗಿಲ್ಲ. ಇದನ್ನು ಮುಂದಿಟ್ಟ್ಟು ಮುಂಬೈ ಹೈಕೋರ್ಟ್ ಸರಕಾರವನ್ನು ತರಾಟೆಗೆ ಎಳೆದಿದೆ. ಜೊತೆಗೆ ವಿಕ್ಟೋರಿಯಾ ಕುದುರೆ ಮಾಲಕರಿಗೆ ರಿಕ್ಷಾ ಮತ್ತು ಟ್ಯಾಕ್ಸಿ ನೀಡುವ ಬಗ್ಗೆ ವಿಚಾರ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿದೆ.
ಹೈಕೋರ್ಟ್ ತನ್ನ ಆದೇಶದಲ್ಲಿ ವಿಕ್ಟೋರಿಯಾ ಕುದುರೆ ಗಾಡಿ ಮಾಲಕರಿಗೆ ಶೀಘ್ರ ಪುನರ್ವಸತಿ ಕೈಗೊಳ್ಳುವ ಆವಶ್ಯಕತೆಯನ್ನು ಸರಕಾರಕ್ಕೆ ಸೂಚಿಸಿದೆ. ಹಾಗೂ ಸರಕಾರದ ಉದಾಸೀನತೆಗೆ ಪೀಠವು ತನ್ನ ಬೇಸರವನ್ನು ತಿಳಿಸಿದೆ.
* * *

ಸ್ಮಾರ್ಟ್ ಮುಂಬೈಯಲ್ಲಿ......

ಮುಂಬೈ ಮಹಾನಗರದ ಸುಮಾರು 80 ಲಕ್ಷ ಜನರನ್ನು ಸ್ಮಾರ್ಟ್ ಮಾಡುವುದಕ್ಕೋ ಎಂಬಂತೆ ಮುಂಬೈ ಮಹಾನಗರದ ವಿವಿಧ ಉಪನಗರ ರೈಲ್ವೆ ಸ್ಟೇಷನ್‌ಗಳಲ್ಲಿ ಒಟ್ಟು 1,081 ಎಟಿವಿಎಂ ಮೆಷಿನ್ ಇರಿಸಲಾಗಿದೆ. ರೈಲ್ವೆ ಟಿಕೆಟ್ ಕೌಂಟರ್‌ಗಳಲ್ಲಿ ಪ್ರಯಾಣಿಕರ ಉದ್ದುದ್ದ ಸಾಲು ಕಡಿಮೆ ಮಾಡುವುದು ಎಟಿವಿಎಂ ಮೆಷಿನ್ ಇರಿಸಲಾಗಿರುವ ಉದ್ದೇಶ. ಸ್ಮಾರ್ಟ್ ಕಾರ್ಡ್‌ನ್ನು ಎಟಿವಿಎಂ ಮೆಷಿನ್‌ನ ಕಾರ್ಡ್ ರೀಡರ್‌ನಲ್ಲಿ ಇರಿಸಿದರೆ ಕೆಲವೇ ಕ್ಷಣದಲ್ಲಿ ಟಿಕೆಟ್ ದೊರೆಯುತ್ತದೆ. ಟಿಕೆಟ್ ಕಿಟಕಿಯಲ್ಲಿ ನೂಕು ನುಗ್ಗಲು ಕಡಿಮೆ ಮಾಡಲು ಮುಂಬೈಯ ವಿವಿಧ ರೈಲ್ವೆ ಸ್ಟೇಷನ್‌ಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ನೂರಾರು ಎಟಿವಿಎಂ ಮೆಷಿನ್ ಇರಿಸಲಾಗಿತ್ತು. ಆದರೆ ಈಗ ಈ ಎಟಿವಿಎಂ ಮೆಷಿನ್‌ಗಳನ್ನು ನಿರ್ವಹಣೆ ಮಾಡಲು ರೈಲ್ವೆ ಬಳಿ ಸಮಯವಿಲ್ಲದೆ ಚಿಂತೆಗೀಡಾಗಿದೆ. ಸರಕಾರ ಮಾತು ಮಾತಿಗೆ ಡಿಜಿಟಲೈಜೇಶನ್ ಮತ್ತು ಆಧುನಿಕ ಸೌಲಭ್ಯಗಳ ಕುರಿತು ಮಾತನಾಡುತ್ತಾ ಬರುತ್ತಿದೆ. ಆದರೆ ಮುಂಬೈ ಮಹಾನಗರದ ಮಧ್ಯರೈಲ್ವೆ ಮತ್ತು ಪಶ್ವಿಮ ರೈಲ್ವೆಗಳಲ್ಲಿ ಸುಮಾರು 300 ರಷ್ಟು ಎಟಿವಿಎಂ ಮೆಷಿನ್‌ಗಳು ಕೆಟ್ಟು ಹೋಗಿವೆ. ಸ್ಮಾರ್ಟ್‌ಕಾರ್ಡ್ ಇದ್ದರೂ ಟಿಕೆಟ್ ಕೌಂಟರ್‌ನಲ್ಲಿ ಸಾಲಲ್ಲಿ ನಿಲ್ಲುವ ಸ್ಥಿತಿ ಬಂದಿದೆ.

ಮಧ್ಯ ರೈಲ್ವೆಯಲ್ಲಿ 650 ಎಟಿವಿಎಂ ಮೆಷಿನ್ ಇರಿಸಿದ್ದು, ಅವುಗಳಲ್ಲಿ 190 ಹಾಳಾಗಿವೆ. ಪಶ್ಚಿಮ ರೈಲ್ವೆಯಲ್ಲಿ 457 ಎಟಿವಿಎಂ ಮೆಷಿನ್‌ಗಳನ್ನು ಇರಿಸಿದ್ದು, ಅವುಗಳಲ್ಲಿ 115 ಹಾಳಾಗಿವೆ. ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿಯವರು ಶೀಘ್ರವೇ ಎಲ್ಲ ಮೆಷಿನ್ ರಿಪೇರಿ ಮಾಡಲಾಗುವುದು ಎನ್ನುತ್ತಿದ್ದಾರೆ. ಮುಂಬೈಯ ರೈಲ್ವೆ ಸ್ಟೇಷನ್‌ಗಳಲ್ಲಿ ಅಳವಡಿಸಿದ ಹೆಚ್ಚಿನ ಎಟಿವಿಎಂ ಮೆಷಿನ್‌ಗಳು ಫೋರ್ಬ್ಸ್ ಕಂಪೆನಿಯದ್ದಾಗಿವೆ. ಈ ಕಂಪೆನಿಯೇ ಹಾಳಾದ ಮೆಷಿನ್‌ಗಳನ್ನು ರಿಪೇರಿ ಮಾಡುವುದು. ಇನ್ನೊಂದೆಡೆ ಮೆಷಿನ್ ಒಳಗಿನ ಕಾಗದವೂ ಉತ್ತಮ ಗುಣ ಮಟ್ಟದ್ದಾಗಿಲ್ಲ. ಹಾಗಾಗಿ ಟಿಕೇಟು ಪ್ರಿಂಟು ಕೂಡಾ ಸರಿ ಕಾಣುತ್ತಿಲ್ಲ ಎಂಬ ಟೀಕೆ ಬೇರೆ ಇದೆ.

* * *

ಮುಂಬೈಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ
ಮುಂಬೈ ಸಹಿತ ರಾಜ್ಯದಲ್ಲಿ ವಾಹನಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ರಾಜ್ಯದಲ್ಲಿ ವಾಹನಗಳ ಒಟ್ಟು ಸಂಖ್ಯೆ ಈ ತನಕ 2,78,69,000 ತನಕ ತಲುಪಿದೆ. ಇದರಲ್ಲಿ ಮುಂಬೈಯ 29 ಲಕ್ಷ ವಾಹನಗಳೂ ಒಳಗೊಂಡಿವೆ.
ವಾಹನಗಳ ತೀವ್ರಗತಿಯ ಹೆಚ್ಚಳದಿಂದ ಸಾರಿಗೆ ಇಲಾಖೆಯು ಈಗ ಎಚ್ಚರ ಗೊಂಡಿದೆ. ವಾಹನಗಳ ಪಾರ್ಕಿಂಗ್‌ಗಾಗಿ ಸ್ಥಳ ಇಲ್ಲ. ರಸ್ತೆ ಅಪಘಾತ ಗಳ ಸಂಖ್ಯೆ ಏರಿದೆ. ಸಾರಿಗೆ ಆಯುಕ್ತಾಲಯದ ಪ್ರಕಾರ ಕಳೆದ ವರ್ಷದಲ್ಲಿ 10 ಶೇಕಡಾ ದರದಂತೆ ವಾಹನಗಳ ವೃದ್ಧಿಯಾಗಿದೆಯಂತೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News