ಇಂದಿನಿಂದ 22 ಲಕ್ಷಕ್ಕೂ ಅಧಿಕ ಲಾರಿಗಳು ರಸ್ತೆಗಿಳಿಯುವುದಿಲ್ಲ
ಬೆಂಗಳೂರು, ಮಾ.30: ವಿಮೆ ಮೊತ್ತ ಹೆಚ್ಚಳ ವಿರೋಧಿಸಿ ಹಾಗೂ ಟೋಲ್‌ಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದು, ದಕ್ಷಿಣ ಭಾರತದಲ್ಲಿ 22 ಲಕ್ಷಕ್ಕೂ ಅಧಿಕ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿದು ಬಂದಿದೆ. ಗುರುವಾರ ಮಧ್ಯರಾತ್ರಿಯಿಂದಲೇ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಯುತ್ತಿದ್ದು, ಕರ್ನಾಟಕದಲ್ಲಿರುವ ಏಳು ಲಕ್ಷ ಲಾರಿಗಳು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಒಳಗೊಂಡಂತೆ ದಕ್ಷಿಣ ಭಾರತದಲ್ಲಿರುವ 22 ಲಕ್ಷಕ್ಕೂ ಅಧಿಕ ಲಾರಿಗಳು ಸಂಚಾರ ಮಾಡದೆ ನಿಲ್ಲಲಿವೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ದಕ್ಷಿಣ ವಲಯ ಮೋಟಾರ್ ಟ್ರಾನ್ಸ್‌ಪೋರ್ಟರ್ಸ್ ಹಿತರಕ್ಷಣಾ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ, ಸರಕಾರವು, ಖಾಸಗಿ ವಿಮೆ ಕಂಪೆನಿಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟ ನಂತರ ದೇಶದಲ್ಲಿ 33 ಕಂಪೆನಿಗಳು ಸ್ಥಾಪನೆಯಾಗಿವೆ.
ಕಂಪೆನಿಗಳು ವಿಮೆ ಮೊತ್ತವನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸುತ್ತಿವೆ. ಮಾರ್ಚ್ 31ರ ನಂತರ ವಿಮೆ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸಲು ಐಆರ್‌ಡಿಎ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಹೆದ್ದಾರಿ ಅಭಿವೃದ್ಧಿಗಾಗಿ ಮಾಡಿದ್ದ ಖರ್ಚು ವಸೂಲಾಗಿದ್ದರೂ ಬಹಳಷ್ಟು ಟೋಲ್‌ಗಳಲ್ಲಿ ಹಣ ಸಂಗ್ರಹ ಮುಂದುವರಿಸಲಾಗಿದೆ. ವಾಹನಗಳು ಟೋಲ್ ಶುಲ್ಕ ಪಾವತಿಸಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಹೀಗಾಗಿ, ಪ್ರತಿ ವರ್ಷ ಮುಂಚಿತವಾಗಿ ಆ ಅವಧಿಯ ಒಟ್ಟು ಟೋಲ್ ಶುಲ್ಕ ಪಾವತಿಸಲು ವಾಹನ ಮಾಲಕರು ಸಿದ್ಧವಿದ್ದಾರೆ. ಇದರಿಂದ ಪ್ರಯಾಣದ ಸಮಯ, ಇಂಧನ, ಹಣ, ಶ್ರಮ ಉಳಿಯಲಿದೆ. ಹೀಗಾಗಿ ದೇಶದ ಎಲ್ಲ ಟೋಲ್‌ಗಳನ್ನು ತೆರವು ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕದ ಜೊತೆ ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿ, ತಮಿಳುನಾಡು ರಾಜ್ಯಗಳ ವ್ಯಾಪ್ತಿಯಲ್ಲಿ ವಾಹನ ಮಾಲಕರು ಮುಷ್ಕರ ನಡೆಸಲಿದ್ದಾರೆ ಎಂದ ಅವರು, 10-15 ವರ್ಷ ದಾಟಿದ ವಾಹನಗಳನ್ನು ನಾಶ ಮಾಡಲು ಕೇಂದ್ರ ಸರಕಾರ ಸೂಚಿಸಿದೆ. ಇದರಿಂದಾಗಿ ಬಡ ಮಾಲಕರಿಗೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂದರು.
ನಾಲ್ಕು ದಿನಗಳ ನಂತರ ಪೆಟ್ರೋಲ್ ಬಂದ್?
ಲಾರಿ ಮುಷ್ಕರದಿಂದ ಸಾವಿರಾರು ಕೋಟಿ ರೂಪಾಯಿ ಸರಕಾರಕ್ಕೆ ನಷ್ಟವಾಗಲಿದೆ. ಅಲ್ಲದೆ, ಈ ಬಗ್ಗೆ ಸಭೆ ನಡೆಸಲಾಗಿದ್ದರೂ, ಯಾವುದೇ ಬೇಡಿಕೆ ಈಡೇರಿಸಲು ಸರಕಾರ ಆಸಕ್ತಿ ತೋರುತ್ತಿಲ್ಲ. ಸರಕಾರ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿಲ್ಲ ಎಂದರೆ ನಾಲ್ಕು ದಿನಗಳ ನಂತರ ಪೆಟ್ರೋಲ್ ಸೇರಿ ಇನ್ನಿತರೆ ತೈಲವನ್ನು ಬಂದ್ ಮಾಡಲಾಗುವುದು.
-ಜಿ.ಆರ್.ಷಣ್ಮುಗಪ್ಪ,