ಪ್ರಮಾಣಪತ್ರವಿಲ್ಲದೆ ನೀರು ಪೂರೈಸಿದರೆ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್

Update: 2017-03-31 14:25 GMT

ಬೆಂಗಳೂರು,ಮಾ.31: ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಪೂರೈಸಲಾಗುವ ಕುಡಿಯುವ ನೀರಿಗೆ ಕಡ್ಡಾಯವಾಗಿ ವೈದ್ಯರಿಂದ ಪ್ರಮಾಣ ಪತ್ರ ಪಡೆದಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲೀನಿ ರಜನೀಶ್ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈದ್ಯರಿಂದ ಪ್ರಮಾಣ ಪತ್ರ ಪಡೆಯದೆ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸುವಂತಿಲ್ಲ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ನೀರು ಪೂರೈಸುತ್ತಿರುವುದು ಕಂಡು ಬಂದರೆ ಆರೋಗ್ಯ ಇಲಾಖೆಯ ಸಹಾಯವಾಣಿ 104ಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದರು.

ಪ್ರಮಾಣ ಪತ್ರವಿಲ್ಲದೆ ನೀರು ಪೂರೈಸುತ್ತಿರುವ ಸ್ಥಳೀಯ ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುವುದು. ಅಲ್ಲದೆ, ದೂರು ಬಂದ ಪ್ರದೇಶಗಳಿಗೆ ವೈದ್ಯರೇ ಸ್ವತಃ ಭೇಟಿ ನೀಡಿ ನೀರಿನ ಪರೀಕ್ಷೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ. ಆದುದರಿಂದ, ನಿರಂತರವಾಗಿ ನೀರಿನ ಪರೀಕ್ಷೆ ಕಾರ್ಯ ನಡೆಯುತ್ತಿದೆ. ವಾರಕ್ಕೊಮ್ಮೆ ನೀರಿನ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ನೀರಿಗೆ ಸಂಬಂಧಿಸಿದಂತೆ ಯಾವುದೆ ದೂರು ಇಲಾಖೆಗೆ ಬಂದಿಲ್ಲ ಎಂದು ಶಾಲಿನಿ ರಜನೀಶ್ ತಿಳಿಸಿದರು.

ಬೇಸಿಗೆ ಕಾಲದಲ್ಲಿ ಹರಡುವಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಅಗತ್ಯವಾದ ಔಷಧಿಗಳ ದಾಸ್ತಾನು ಸರಕಾರದ ಬಳಿ ಲಭ್ಯವಿದೆ. ಕರಾವಳಿ ಪ್ರದೇಶ ಹೊರತುಪಡಿಸಿ ರಾಜ್ಯದ ಒಳನಾಡಿನ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತಿವೆ. ಈ ಸಂಬಂಧ ವರದಿಯನ್ನು ಸಿದ್ಧಪಡಿಸಿ ನೀಡುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಲ್ಲು ಕ್ವಾರಿಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಭರ್ತಿ ಮಾಡಲು ಅವಕಾಶ ಮಾಡಿಕೊಡುವುದು, ಸ್ವಚ್ಛತೆ, ನೈರ್ಮಲ್ಯತೆ ಕಾಪಾಡುವಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಕ್ತ ನಿಧಿ ಸ್ಥಾಪಿಸಲು ಹೊಸದಿಲ್ಲಿಯ ಪರಿಣಿತರಿಂದ ಸಲಹೆ ಪಡೆಯಲಾಗುವುದು ಎಂದು ಶಾಲಿನಿ ರಜನೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News