ಬೆಂಕಿಯಲ್ಲಿ ಅರಳಿದ ಹೂವು!

Update: 2017-04-01 18:35 GMT

ಅಂದು ರವಿವಾರ. ಇದಿನಬ್ಬರು ಜವಳಿ ಅಂಗಡಿಯನ್ನು ಸಂಜೆ ಆರು ಗಂಟೆಗೇ ಮುಚ್ಚಿದರು. ಸಾಧಾರಣವಾಗಿ ಶುಕ್ರವಾರ ಅವರ ಅಂಗಡಿಗೆ ರಜೆ. ಉಳಿದಂತೆ ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತು ಗಂಟೆಯವರೆಗೂ ತೆರೆದಿರುತ್ತದೆ. ಅಂದು ಅಂಗಡಿ ಮುಚ್ಚಿದವರು ಮನೆಯ ದಾರಿ ಹಿಡಿಯದೆ ನೇರವಾಗಿ ಪುತ್ತೂರಿನ ನಗರವನ್ನು ಒತ್ತಿಕೊಂಡಿರುವ ಒಳದಾರಿಯನ್ನು ಆರಿಸಿಕೊಂಡರು. ಆ ದಾರಿ ಬಾಲವನದ ಕಡೆಗೆ ಸಾಗುತ್ತಿತ್ತು. ದಾರಿಯಲ್ಲಿ ಹಲವರು ಎದುರಾದರು. ‘‘ಇದಿನಬ್ಬರೇ ಅಸ್ಸಲಾಂ ಅಲೈಕುಂ’’ ಎಂದು ಯಾರೋ ಸಲಾಂ ಹೇಳುತ್ತಿದ್ದರು. ‘‘ಸಾಯ್ಬರೇ ನಮಸ್ಕಾರ’’ ಎಂದು ಇನ್ನಾರೋ ಹೇಳುತ್ತಿದ್ದರು.

‘‘ಇದಿನಬ್ಬರೇ ದೂರ?’’ ಮತ್ಯಾರೋ ಪರಿಚಿತರು ಕೇಳುತ್ತಿದ್ದರು. ಯಾವ ಗಮನವೂ ಇಲ್ಲದಂತೆ ಅವರು ಒಂದೇ ಸಮನೆ ಹೆಜ್ಜೆ ಹಾಕುತ್ತಿದ್ದರು. ಅವರ ಮನಸ್ಸು ತಮ್ಮ ವಿದ್ಯಾರ್ಥಿ ಕಾಲದ ಕಡೆಗೆ ತುಯ್ಯ ತೊಡಗಿತ್ತು. ಹೆಗ್ಡೆ ಮತ್ತು ತಾನು ಈ ಬಾಲವನದಲ್ಲಿ ಆಡದ ಆಟವಿಲ್ಲ, ನೋಡದ ನೋಟವಿಲ್ಲ. ಅದೆಷ್ಟು ಶಾಲೆಗಳ ಹುಡುಗರಿಗೆ ನಾವು ಪರಿಚಿತರಾಗಿ ಬಿಟ್ಟಿದ್ದೆವು. ಆದರೆ ಕಾರಂತರು ಪುತ್ತೂರಿನಿಂದ ದೂರವಾದ ಬಳಿಕ ಬಾಲವನ ನಿರ್ಜನವಾಯಿತು. ನಿಧಾನಕ್ಕೆ ಕಾಡು ಬಳ್ಳಿಗಳು ಸುತ್ತುವರಿದು ಮನುಷ್ಯರು ಒಳಗೇ ಕಾಲಿಡದಂತಹ ಸನ್ನಿವೇಶ ಸೃಷ್ಟಿಯಾಯಿತು. ಆದರೂ ಇದಿನಬ್ಬ ಮತ್ತು ಹೆಗ್ಡೆ ಬಾಲವನದಿಂದ ದೂರವಾಗಲಿಲ್ಲ. ಇದಿನಬ್ಬರು ಜವಳಿ ಅಂಗಡಿ ಸೇರಿದ ಬಳಿಕವೂ ಬಾಲವನದ ಕಡೆಗೆ ಬರುತ್ತಿದ್ದರು. ಅಲ್ಲೊಂದು ಮೂಲೆಯಲ್ಲಿ ಪುಟ್ಟದೊಂದು ಕಲ್ಲಿನ ಬೆಂಚಿನಲ್ಲಿ ಹೆಗ್ಡೆ ಇದಿನಬ್ಬರಿಗಾಗಿ ಕಾಯುತ್ತಿದ್ದರು.

ಇದಿನಬ್ಬರು ಬರುವುದು ತುಸು ತಡವಾದರೂ ಹೆಗ್ಡೆ ಸಿಟ್ಟಿನಿಂದ ಬುಸುಗುಟ್ಟುತ್ತಿದ್ದರು ‘‘ಬಟ್ಟೆ ಅಂಗಡಿಗೆ ಒಂದಿಷ್ಟು ಸೀರೆಯ ಹೆಂಗಸರು ಬಂದರೆ ಸಾಕು...ನಿನಗೆ ಇಲ್ಲಿಯ ನೆನಪೇ ಇರುವುದಿಲ್ಲ’’

‘‘ಅಲ್ಲ ಮಾರಾಯ....ಇರುವ ಗಿರಾಕಿಗಳನ್ನು ಹೊರಗೆ ಹೋಗಿ ಎಂದು ಹೇಳಿ ಬಾಗಿಲು ಹಾಕಲಿಕ್ಕೆ ಆಗುತ್ತದಾ?’’ ಎಂದು ಇದಿನಬ್ಬರು ಗೆಳೆಯನನ್ನು ಸಮಾಧಾನಿಸುತ್ತಿದ್ದರು. ಸುಮಾರು ಒಂದು ಗಂಟೆಯ ಕಾಲ ಆ ಕಲ್ಲು ಬೆಂಚಿನಲ್ಲಿ ಇಬ್ಬರು ಕೂತು ತಮ್ಮ ಬಾಲ್ಯವನ್ನು ನೆನೆಯುತ್ತಿದ್ದರು. ಶಿವರಾಮಕಾರಂತರ ಬಗ್ಗೆ ಎಷ್ಟು ಮಾತನಾಡಿದರೂ ಹೆಗ್ಡೆಯವರಿಗೆ ಮುಗಿಯುವುದೆಂದು ಇಲ್ಲ. ಕಾರಂತರ ಹೊಸ ಪುಸ್ತಕಗಳನ್ನು ಓದಿ ಅದರ ಕತೆಯನ್ನು ಇದಿನಬ್ಬರ ಜೊತೆಗೆ ಹಂಚಿಕೊಳ್ಳುತ್ತಿದ್ದರು.

ಇದಿನಬ್ಬರಿಗೆ ಮುಕುಂದರಾಯರನ್ನು ನೆನೆಯುವು ದೆಂದರೆ ಇಷ್ಟ. ಆಗಾಗ ಮುಕುಂದ ರಾಯರು ತನ್ನನ್ನು ಎತ್ತಿ ಬೆಂಚಿನ ಮೇಲೆ ನಿಲ್ಲಿಸಿದ್ದನ್ನು ಪ್ರಸ್ತಾಪಿಸುತ್ತಿದ್ದರು. ಒಮ್ಮಿಮ್ಮೆ ಹೆಗ್ಡೆ ಸಿಟ್ಟು ನಟಿಸಿ ‘‘ಅದನ್ನೇ ಎಷ್ಟು ಬಾರಿ ಹೇಳುವುದು ಮಾರಾಯ? ಮೇಷ್ಟ್ರು ಬರೆದ ಪದ್ಯ ಓದಿದ್ದಲ್ಲವಾ ನೀನು? ಸ್ವಂತ ಬರೆದದ್ದೇನೂ ಅಲ್ಲವಲ್ಲ?’’

‘‘ನಿನಗೆ ಈಗಲೂ ಹೊಟ್ಟೆಕಿಚ್ಚು ಹೋಗಲಿಲ್ಲ. ಅದೇನೇ ಹೇಳು, ಕಾರಂತರಿಗೆ ನಿನ್ನ ಮೇಲೆ ಇರುವ ಪ್ರೀತಿಗಿಂತ ನನ್ನ ಮೇಲೆಯೇ ಜಾಸ್ತಿಯಿತ್ತು...’’ ಇದಿನಬ್ಬರು ನಕ್ಕು ಹೇಳುತ್ತಿದ್ದರು.

‘‘ಅದು ನನಗೂ ಗೊತ್ತುಂಟು. ಬ್ಯಾರಿಗಳಲ್ಲಿ ನೀನೊಬ್ಬನೇ ಇದ್ದದ್ದು ಎಂದು ವಿಶೇಷ ಅಕ್ಕರೆ ತೋರಿಸುತ್ತಿದ್ದರು ಅಷ್ಟೇ. ನಾನು ಅವರ ಜಾತಿಯೇ ಅಲ್ಲವಾ? ಅದಕ್ಕೆ ನನ್ನ ಬಗ್ಗೆ ತತ್ಸಾರ ಇತ್ತು ...’’ ಹೆಗ್ಡೆಯೂ ನಗುತ್ತಾ ಉತ್ತರಿಸುತ್ತಿದ್ದರು.

‘‘ಆಗ ಈ ಜಾತಿ, ಗೀತಿ, ಧರ್ಮ ಎಲ್ಲ ಎಲ್ಲಿತ್ತು ಅಲ್ಲವಾ? ನಮಗೆಲ್ಲ ಕನ್ನಡವೇ ಜಾತಿ, ಧರ್ಮ. ನಾಟಕ, ಯಕ್ಷಗಾನ ಎಂದರೆ ಎಷ್ಟು ಖುಷಿಯಿರುತ್ತಿತ್ತು. ಈಗ ನೋಡಿದರೆ, ಅದು ಹಿಂದೂಗಳದ್ದು... ಇದು ಮುಸ್ಲಿಮರದ್ದು... ಎಂದು ಪಾಲು ಮಾಡಿ ಬಿಟ್ಟಿದ್ದೇವೆ...’’ ಇದಿನಬ್ಬರು ವಿಷಾದ ವದನವಾಗುತ್ತಿದ್ದರು.

ಹೀಗೆ ವಾರಕ್ಕೊಂದು ಸಂಜೆ ಹೆಗ್ಡೆ-ಇದಿನಬ್ಬ ವರ್ತಮಾನವನ್ನು ಮರೆತು ಭೂತಕಾಲ ಹೊಕ್ಕು, ಅದರ ಖುಷಿಯಲ್ಲಿ ಮೈಮರೆಯುತ್ತಾ ಇದ್ದರು. ಆದರೆ ಎರಡು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಒಂದು ಗಲಭೆ ಅಳಿದುಳಿದ ನೆನಪುಗಳನ್ನೂ ಅಳಿಸಿ ಹಾಕಿತು. ಯಾವುದೋ ಹುಡುಗಿಯನ್ನು ಇನ್ನಾರೋ ಚುಡಾಯಿಸಿದರೆಂದು ಪುತ್ತೂರಿನಲ್ಲಿ ಬೃಹತ್ ಹಿಂದೂ ರಕ್ಷಣಾ ಸಭೆ ನಡೆಯಿತು. ಅಂದು ಸಂಜೆ ಪುತ್ತೂರಿನ ಬ್ಯಾರಿಗಳ ಅಂಗಡಿಗಳನ್ನು ಹುಡುಕಿ ಹುಡುಕಿ ಕೆಲವರು ಕಲ್ಲು ತೂರಿದರು. ಇದಿನಬ್ಬರ ಬಟ್ಟೆಯ ಅಂಗಡಿಗೂ ಬೆಂಕಿ ಬಿತ್ತು. ಬೆಂಕಿಯಲ್ಲಿ ಅರ್ಧಂಬರ್ಧ ಸುಟ್ಟು ಹೋಗಿರುವ ನೂರಾರು ಸೀರೆಗಳು, ಪಂಚೆಗಳು, ಬಟ್ಟೆ ಗಳನ್ನು ನೋಡಿ ಇದಿನಬ್ಬ ಆಘಾತಗೊಂಡು ಆಸ್ಪತ್ರೆ ಸೇರಿದರು. ಅಲ್ಲಿಂದ ಬಾಲವನ ಭೇಟಿ ಸಂಪೂರ್ಣ ನಿಂತು ಹೋಯಿತು. ಆಗಾಗ ಎಲ್ಲಾದರೂ ಇದಿನಬ್ಬರು-ಹೆಗ್ಡೆ ಮುಖಾಮುಖಿಯಾದರೆ ನಕ್ಕು ‘ಹೇಗಿದ್ದೀಯಾ?’ ‘ಚೆನ್ನಾಗಿದ್ದೇನೆ’ ಎಂಬ ಔಪಚಾರಿಕ ಮಾತುಗಳಲ್ಲೇ ಭೇಟಿ ಮುಗಿದು ಹೋಗುತ್ತಿತ್ತು. ಇದಿನಬ್ಬರ ಅಂಗಡಿಗೆ ಬೆಂಕಿ ಬಿದ್ದಾಗ ಹೆಗ್ಡೆಯವರೂ ಅಲ್ಲಿಗೆ ಧಾವಿಸಿದ್ದರು. ಇದಿನಬ್ಬ ಮುಖ ಮುಚ್ಚಿ ಗಳಗಳನೆ ಅಳುತ್ತಿರುವುದನ್ನು ನೋಡಿ ಅವರೂ ಕಣ್ಣೀರು ಹಾಕುತ್ತಾ ಮನೆಗೆ ಮರಳಿದ್ದರು. ಆ ಬಳಿಕ ಅವರಿಗೆ ಇದಿನಬ್ಬರನ್ನು ಮುಖ ಕೊಟ್ಟು ನೋಡುವ ಧೈರ್ಯ ಬಂದಿರಲಿಲ್ಲ. ಇದಿನಬ್ಬರು ಬಾಲವನಕ್ಕೆ ಭೇಟಿ ನೀಡುವುದು ನಿಲ್ಲಿಸಿರುವುದು ಹೆಗ್ಡೆಯವರಿಗೆ ಇನ್ನಷ್ಟು ನೋವು ಕೊಟ್ಟಿತ್ತು. ‘ತಾನೇ ಇದಿನಬ್ಬನ ಅಂಗಡಿಗೆ ಬೆಂಕಿ ಕೊಟ್ಟೆನೇನೋ’ ಎಂಬ ಪಾಪಪ್ರಜ್ಞೆಯೊಂದಿಗೆ ಇದಿನಬ್ಬರನ್ನು ಎದುರಿಸಬೇಕಾಗಿತ್ತು. ಮುಸ್ತಫಾನ ಪ್ರಕರಣದಿಂದಾಗಿ ಅದೇ ಮೊದಲ ಬಾರಿ ಪರಸ್ಪರ ಮನತೆರೆದು ಮಾತನಾಡುವ ಅವಕಾಶ ಅವರಿಗೆ ಸಿಕ್ಕಿತು. ಒಂದು ರೀತಿಯಲ್ಲಿ ಇಬ್ಬರ ನಡುವೆ ಕವಿದಿದ್ದ ದಟ್ಟ ಮೋಡ ಸಣ್ಣ ಮಟ್ಟಿಗಾದರೂ ಕರಗಿತ್ತು.

 ಹೆಗ್ಡೆಯ ಜೊತೆ ಮುಕ್ತವಾಗಿ ಮಾತನಾಡಿದ ಬಳಿಕ ಇದಿನಬ್ಬರಿಗೆ ಅದೇ ಮೊದಲ ಬಾರಿ ‘ಬಾಲವನ’ ಕ್ಕೊಮ್ಮೆ ಭೇಟಿ ಕೊಟ್ಟು ಒಂದರ್ಧ ಗಂಟೆ ಅಲ್ಲಿ ಒಬ್ಬನೇ ಕುಳಿತುಕೊಳ್ಳಬೇಕು ಎಂದೆನಿಸಿತ್ತು. ಆದುದರಿಂದಲೇ ಅಂದು ಸಂಜೆ ಅಂಗಡಿಯನ್ನು ಬೇಗ ಮುಚ್ಚಿ, ಬಾಲವನದ ಕಡೆಗೆ ನಡೆದಿದ್ದರು. ಬಾಲವನದ ಮುಂದೆ ಇನ್ನಷ್ಟು ಕಾಡು ಬೆಳೆದಿದ್ದವು. ಒಳಗೆ ಕಾಲಿಡಲು ಸಾಧ್ಯವೇ ಇಲ್ಲವೇನೋ ಎಂಬಂತೆ. ಅದರೂ ಮೂಲೆಯಲ್ಲಿರುವ ಕಲ್ಲು ಬೆಂಚು ಮಾತ್ರ ಕಾಡು ಬಳ್ಳಿಗಳಿಂದ ಮುಕ್ತವಾಗಿದೆ. ತಾವು ಸೇರದೆ ಒಂದೆರಡು ವರ್ಷ ಕಳೆದಿದೆಯಾದರೂ ಆ ಕಲ್ಲು ಬೆಂಚಿನ ಸುತ್ತ ಪೊದೆಗಳು ಬೆಳೆದೇ ಇಲ್ಲ. ಧೂಳೂ ಇಲ್ಲ. ಅಂದರೆ ಯಾರೋ ಬಂದು ಆಗಾಗ ಇಲ್ಲಿ ಸಮಯ ಕಳೆಯುತ್ತಾರೆ ಎಂದಾಯಿತು. ಇದಿನಬ್ಬರು ಆ ಕಲ್ಲು ಬೆಂಚಿಗೆ ಒರಗಿ, ಕಣ್ಮುಚ್ಚಿದ್ದರು. ಹಾಗೆಯೇ ಗಾಳಿಯ ಸ್ಪರ್ಷವನ್ನು ಅವರು ಆಸ್ವಾದಿಸ ತೊಡಗಿದರು. ಸುಮಾರು ಹತ್ತು ನಿಮಿಷ ಹಾಗೇ ಕಳೆದಿರಬೇಕು.

ಯಾರೋ ಕೆಮ್ಮಿದಂತಾಯಿತು. ಒಮ್ಮೆಲೆ ಕಣ್ತೆರೆದರು. ನೋಡಿದರೆ ಹೆಗ್ಡೆ ನಗುತ್ತಾ ನಿಂತಿದ್ದ.

‘‘ನಾನು ಯಾವಾಗಲೂ ಬಂದು ಕೂರುವ ಬೆಂಚಿ ನಲ್ಲಿ ಯಾರದು ಕೂತಿರುವುದು?’’ ಹೆಗ್ಡೆ ನಗುತ್ತಾ ಕೇಳಿದರು.

‘‘ಅರೇ! ನೀನಾ?....’’ ಎಂದು ಅವರು ಜಾಗ ಮಾಡಿಕೊಟ್ಟರು.

‘‘ಹೌದು ನಾನೆ. ಪ್ರತೀ ರವಿವಾರ ನಾನಂತೂ ಈ ಜಾಗದಲ್ಲಿ ಬಂದು ಅರ್ಧಗಂಟೆ ಕಳೆದು ಹೋಗುತ್ತೇನೆ...’’ ಹೆಗ್ಡೆ ಉತ್ತರಿಸಿದರು.

‘‘ಒಬ್ಬನೇ...?’’ ‘‘ಹೌದು. ಒಬ್ಬನೇ. ಮತ್ತೇನು ಮಾಡುವುದು...ಜೊತೆಗಿದ್ದ ಗೆಳೆಯ ಬರುವುದು ನಿಲ್ಲಿಸಿದ ಮೇಲೆ ಮತ್ಯಾರು ನನಗಿಲ್ಲ್ಲಿ ಈ ಕಾಡಿನಲ್ಲಿ ಜೊತೆ ಕೊಡಲು ಬರುತ್ತಾರೆ?’’

ಇದಿನಬ್ಬರು ವೌನವಾಗಿ ಬಿಟ್ಟರು. ಹೆಗ್ಡೆಯೂ ಆಕಾಶ ನೋಡುತ್ತಾ ಕುಳಿತರು.

‘‘ನಾನು ಮೊಳಹಳ್ಳಿ ಶಿವರಾಯರ ಮಾತುಗಳನ್ನು ಕೇಳಬೇಕಾಗಿತ್ತು. ನನ್ನ ಎಸೆಸೆಲ್ಸಿ ಮುಗಿದು ಅಪ್ಪನ ಜವಳಿ ಅಂಗಡಿ ಸೇರುವ ಹೊತ್ತಿಗೆ ಮೊಳಹಳ್ಳಿ ಶಿವರಾಯರು ಅಪ್ಪನಿಗೊಂದು ಪತ್ರ ಬರೆದಿದ್ದರು. ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ಮಂಗಳೂರಿನ ಸೊಸೈಟಿಯಲ್ಲಿ ಕೆಲಸ ಮಾಡಲು ಒಬ್ಬ ಜನ ಬೇಕಾಗಿದೆ. ನಿಮ್ಮ ಮಗನನ್ನು ಕಳುಹಿಸಿ. ಶಾಲೆ ಓದುತ್ತಲೇ ಕೆಲಸ ಮಾಡಲಿ’ ಎಂದು ಅದರಲ್ಲಿ ಕೇಳಿ ಕೊಂಡಿದ್ದರು. ಆದರೆ ಅಪ್ಪ ಒಪ್ಪಲಿಲ್ಲ ನೋಡು...’’

‘‘ಈಗ ಅದೆಲ್ಲ ಯಾಕೆ?’’ ಹೆಗ್ಡೆ ಕೇಳಿದರು.

‘‘ಹಾಗಲ್ಲ...ಒಂದು ವೇಳೆ ಮೊಳಹಳ್ಳಿ ಶಿವರಾಯರ ಮಾತು ಕೇಳಿದ್ದಿದ್ದರೆ ನಾನು ಇಂದು ಮುಕುಂದ ರಾಯರು ಹೇಳಿದಂತೆ ಏನಾದರೂ ಸಾಧಿಸುತ್ತಿದ್ದೆನೋ ಏನೋ...ಆದರೆ ಅಪ್ಪ ಅದಕ್ಕೆ ಅವಕಾಶ ಕೊಡಲೇ ಇಲ್ಲ. ತಿಂಗಳಿಗೆ ಸಿಗುವ 16 ರೂಪಾಯಿಯಲ್ಲಿ ನೀನು ಬದುಕುವುದು ಹೇಗೆ? ಇಲ್ಲಿರುವ ಈ ಅಂಗಡಿ ಯನ್ನು ನೋಡಿಕೊಳ್ಳುವುದು ಯಾರು? ನನಗೂ ವಯಸ್ಸಾಯಿತು... ಎಂದು ಅಪ್ಪ ಹಟ ಹಿಡಿದರು’’

‘‘ಅದೆಲ್ಲ ಬಿಡು. ನಾನೀಗ ಓದಿ ಸಾಧಿಸಿದ್ದೇನು. ಕನ್ನಡ ಪಂಡಿತನಾಗಿ ಯಾರ್ಯಾರದೋ ಮಾತಿಗೆ ತಲೆ ಆಡಿಸುತ್ತಾ ಅಸಹಾಯಕನಾಗಿ ಬದುಕಬೇಕಾಗಿದೆ. ಏನು ಓದಿದ್ದೇನೋ ಹಾಗೆ ಬದುಕುವುದಕ್ಕೆ ಆಗುವು ದಿಲ್ಲ ಎನ್ನುವ ಸಂಕಟ ಇದೆಯಲ್ಲ ಅದು ಬಹಳ ನೋವು ಕೊಡುತ್ತದೆ...’’

ಇದಿನಬ್ಬರು ವೌನವಾದರು.

‘‘ಇದ್ದಿನ್...ಒಮ್ಮಮ್ಮೆ...ನಿನ್ನ ಮಗ ಮುಸ್ತಫಾನನ್ನು ನನ್ನ ಕಾಲೇಜಿಗೆ ಸೇರಿಸು ಎಂದು ನಿನಗೆ ಒತ್ತಾಯ ಮಾಡಿರುವುದು ತಪ್ಪಾಯಿತೇನೋ ಎಂದು ಅನ್ನಿಸುತ್ತದೆ...’’

‘‘ಯಾಕೆ...? ನಿನ್ನ ನೆರಳಲ್ಲಿ ಅವನು ಬೆಳೆದರೆ ಖಂಡಿತ ನನ್ನ ಆಸೆಯನ್ನು ಈಡೇರಿಸುತ್ತಾನೆ. ನೀನು ಒತ್ತಾಯ ಮಾಡದಿದ್ದರೂ ಅವನನ್ನು ನೀನಿರುವ ಕಾಲೇಜಿಗೇ ಸೇರಿಸುತ್ತಿದ್ದೆ...’’

‘‘ಹಾಗಲ್ಲ...ನಿನ್ನ ಮಗ ತುಂಬಾ ಸೂಕ್ಷ್ಮ. ಮುಗ್ಧ. ನನಗೊಬ್ಬ ಮಗ ಇದ್ದಿದ್ದರೆ ಅವನ ಹಾಗೆ ಇರಬೇಕು ಎಂದು ಆಸೆಯಾಗುತ್ತದೆ. ದೇವರು ನನಗೆ ಮಕ್ಕಳನ್ನು ಕೊಡಲಿಲ್ಲ. ಎಲ್ಲಿ ಅವನ ಮನಸ್ಸು ಒಡೆದು ಹೋಗು ತ್ತದೋ ಎಂಬ ಭಯ ನನ್ನನ್ನು ಈಗೀಗ ಕಾಡುತ್ತಿದೆ...’’

‘‘ನೋಡು ಹೆಗ್ಡೆ...ಎಲ್ಲರೊಂದಿಗೆ ಬೆರೆಯುತ್ತಾ, ಇನ್ನೊಬ್ಬರ ಧರ್ಮವನ್ನು ಅರ್ಥಮಾಡಿಕೊಳ್ಳುತ್ತಾ ತನ್ನ ಧರ್ಮದ ಜೊತೆಗೆ ಬದುಕಬೇಕು ಎಂದು ಅವನನ್ನು ನಾನು ವಿವೇಕ ಶ್ರೀ ಕಾಲೇಜಿಗೆ ಹಾಕಿದ್ದೇನೆ...’’

‘‘ನೋಡು ಇದ್ದಿನ್...ಈಗೀಗ ಧರ್ಮದ ಹೆಸರಿನಲ್ಲಿ ಮಾತನಾಡುವವರು, ಜಗಳಾಡುವವರು ಹೆಚ್ಚಿದ್ದಾರೆ. ನಾವೆಂದೂ ಇಷ್ಟು ಜೋರಾಗಿ ಧರ್ಮದ ಕುರಿತು ಮಾತನಾಡಿರಲಿಲ್ಲ. ಆದರೆ ನಮಗೆ ಗೊತ್ತಿರುವ ಒಂದು ಅಣುವಿನಷ್ಟು ಧರ್ಮವೂ ಇವರಿಗೆ ಗೊತ್ತಿಲ್ಲ. ವಿದ್ಯಾರ್ಥಿಗಳು ಸಿಗರೇಟು ಎಳೆಯುತ್ತಾ, ಶ್ರೀರಾಮನಿಗಾಗಿ ಪ್ರಾಣ ಬಿಡುವ, ಪ್ರಾಣ ತೆಗೆಯುವ ಮಾತನಾಡುವಷ್ಟು ಬೆಳೆದಿದ್ದಾರೆ....ಹಿಂದಿನ ವಾತಾವರಣ ಈಗ ಇಲ್ಲ...’’

‘‘ನಿನ್ನ ಕಾಲೇಜಿನಲ್ಲಿರುವ ಒಳ್ಳೆಯದನ್ನು ಕಲಿಯಲಿ. ಅವನು ರಾಮಾಯಣದಲ್ಲಿ ಬಹುಮಾನ ಪಡೆದದ್ದು ಕೇಳಿ ನನಗೆ ಹೆಮ್ಮೆಯಾಯಿತು. ಮುಕುಂದರಾಯರು ನನ್ನನ್ನು ಬೆಂಚಿನ ಮೇಲೆ ಎತ್ತಿ ನಿಲ್ಲಿಸಿದ್ದಕ್ಕಿಂತಲೂ ಹೆಚ್ಚು ಖುಷಿಯಾಯಿತು...’’

‘‘ಅಲ್ಲ ಮಾರಾಯ...ಎಲ್ಲದಕ್ಕೂ ನಿನ್ನನ್ನು ಬೆಂಚಿನ ಮೇಲೆ ಎತ್ತಿ ನಿಲ್ಲಿಸಿದ್ದನ್ನೇ ಎಳೆದು ತರುತ್ತೀಯಲ್ಲ...? ಯಾರದೋ ಕವಿತೆ ಓದಿದ್ದಕ್ಕೆ ನಿನ್ನನ್ನು ಬೆಂಚಿನ ಮೇಲೆ ಎತ್ತಿ ನಿಲ್ಲಿಸಿದ್ದು. ಇದು ಹಾಗಲ್ಲ...ನಿನ್ನ ಮಗ ಇಡೀ ರಾಜ್ಯದಲ್ಲೇ ಮೊದಲ ಬಹುಮಾನ ಪಡೆದಿದ್ದಾನೆ....ನಿನ್ನ ಪೊಟ್ಟು ಸಾಧನೆಯನ್ನು ನಿನ್ನ ಮಗನ ಸಾಧನೆಯ ಜೊತೆಗೆ ಹೋಲಿಸಬೇಡ...’’ ಎಂದು ಹೆಗ್ಡೆ ಸಿಟ್ಟು ಬಂದವರಂತೆ ನಟಿಸಿ ಹೇಳಿದರು.

ಇದಿನಬ್ಬರು ಜೋರಾಗಿ ನಕ್ಕರು. ಅವರ ನಗುವಿಗೆ ಹೆಗ್ಡೆ ಜೊತೆಯಾದರು. ‘‘ನಿನಗೆ ಈಗಲೂ ಹೊಟ್ಟೆಕಿಚ್ಚು ಹೋಗಿಲ್ಲ ನೋಡು...’’ ಎಂದರು ಇದ್ದಿನ್.

‘‘ನಿನ್ನ ಮಗನನ್ನು ರಾಜ್ಯದಲ್ಲೇ ದೊಡ್ಡ ಕವಿ ಮಾಡಿ ಅವನಿಗೆ ದೊಡ್ಡ ಪ್ರಶಸ್ತಿ ಬರುವ ಹಾಗೆ ಮಾಡಿ ನಾನು ಸೇಡು ತೀರಿಸಿಕೊಳ್ಳುತ್ತೇನೆ ನೋಡು’’ ಹೆಗ್ಡೆ ನಗುತ್ತಾ ಉತ್ತರಿಸಿದರು.

‘‘ಇರಲಿ...ತಂದೆಗೆ ತಕ್ಕ ಮಗ ಎಂದು ಹೇಳುತ್ತಾರೆ...’’

‘‘ಎಂತದು ತಂದೆಗೆ ತಕ್ಕ ಮಗ...ಇಂತಹ ಪೊಟ್ಟು ತಂದೆಗೆ ಎಂತಹ ದೊಡ್ಡ ಮಗ... ಎಂದು ಜನರು ಹೇಳುವ ಹಾಗೆ ಮಾಡುತ್ತೇನೆ...ಗುರುವಿಗೆ ತಕ್ಕ ಶಿಷ್ಯ ಎಂದು ಜನ ಆಡಿಕೊಳ್ಳುವ ಹಾಗೆ ಮಾಡಲಿಲ್ಲ ನನ್ನ ಹೆಸರು ಹೆಗ್ಡೆ ಅಲ್ಲ’’

‘‘ಗುರುವಲ್ಲ, ಅವನು ನಿನ್ನ ಮಗಾಂತನೇ ಇಟ್ಟುಕೋ...ಒಟ್ಟಿನಲ್ಲಿ ಅವನು ಉದ್ಧಾರ ಆಗಲಿ...’’

ಬಾಲವನದ ಆ ಕಾಡಿನಲ್ಲಿ ಅವರಿಬ್ಬರ ನಗುವಿನ ಅಲೆಗಳು ಮಳೆಯಂತೆ ಸುರಿಯ ತೊಡಗಿದವು.

(ಗುರುವಾರ ಸಂಚಿಕೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News