ಬೆಂಗಳೂರಿನಲ್ಲೊಂದು ಸಾವಿರ ಕೋಟಿ ಹಗರಣ ಬಯಲಿಗೆ
► ಐಎಂಎ ಸಂಸ್ಥೆಯ ಸಿಇಓ ಎಂ.ಎಂ.ಖಾನ್ ಬಳಿ ರಾಜಕಾರಣಿಗಳ ಬೇನಾಮಿ ಹಣ?
► ದೊಡ್ಡ ಲಾಭ ನೀಡುವ ಆಮಿಷ ಒಡ್ಡಿ ಜನರಿಂದ ಹಣ ಸಂಗ್ರಹಿಸುವ ಸಂಸ್ಥೆ
► ಕಚೇರಿ ಮೇಲೆ ಆದಾಯ ತೆರಿಗೆ ದಾಳಿ
► ಕ್ಷುಲ್ಲಕ ಎಡವಟ್ಟು ಮಾಡಿ ಸಿಕ್ಕಿಬಿದ್ದ ಖಾನ್
ಬೆಂಗಳೂರು, ಎ . 4 : ಗ್ರಾಹಕರಿಗೆ ಅಧಿಕ ಲಾಭದ ಆಮಿಷ ಒಡ್ಡಿ ಜನರಿಂದ ದೊಡ್ಡ ಮೊತ್ತದ ಹಣವನ್ನು ಅಕ್ರಮವಾಗಿ ಸಂಗ್ರಹಿದ ಬಹುಕೋಟಿ ಹಗರಣ ಬೆಳಕಿಗೆ ಬಂದಿದೆ. ಇದರಲ್ಲಿ ಹಲವು ರಾಜಕಾರಣಿಗಳ ಬೇನಾಮಿ ಹಣ ಕೂಡಾ ಸೇರಿದೆ ಎಂಬ ಶಂಕೆ ವ್ಯಕ್ತವಾಗಿದೆ.
ನವೆಂಬರ್ 8ರ ನೋಟು ರದ್ದತಿ ನಿರ್ಧಾರದ ಬಳಿಕ 45 ಕೋಟಿ ರೂಪಾಯಿಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದ ಎಂ.ಎಂ.ಖಾನ್ ಎಂಬ ವ್ಯಕ್ತಿ ಇದೀಗ ತೆರಿಗೆ ಇಲಾಖೆಯ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು "ಬೆಂಗಳೂರು ಮಿರರ್" ವರದಿ ಮಾಡಿದೆ.
ಐ ಮಾನಿಟರಿ ಅಡ್ವೈಸರಿ ಗ್ರೂಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ಖಾನ್ ನ ಕಚೇರಿ ಮೇಲೆ ಮತ್ತು ಶಿವಾಜಿನಗರದ ಐಎಂಎ ಜ್ಯುವೆಲ್ಸ್ ಆಸ್ತಿಪಾಸ್ತಿಗಳ ಮೇಲೆ ಇತ್ತೀಚೆಗೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಸುಮಾರು 1000 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
2014-15ರಲ್ಲಿ ಖಾಸಗಿ ಹೂಡಿಕೆ ಯೋಜನೆ ಆರಂಭಿಸಿದ ಖಾನ್, ಗ್ರಾಹಕರಿಗೆ ವಾರ್ಷಿಕ ಶೇಕಡ 40ರಿಂದ 60ರಷ್ಟು ಪ್ರತಿಫಲ ನೀಡುವ ಆಮಿಷ ಒಡ್ಡಿದ್ದ. ಬಹುತೇಕ ಪರಿಚಿತ ರಾಜಕಾರಣಿಗಳಿಂದ ಒಂದು ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿದ್ದ ಎನ್ನಲಾಗಿದೆ. ಈ ಹಣವನ್ನು ಬಳಸಿಕೊಂಡು ಚಿನ್ನಾಭರಣಗಳ ಮಳಿಗೆ ಆರಂಭಿಸಿ ಸುಮಾರು 1200 ಕೆ.ಜಿ.ಚಿನ್ನವನ್ನು ದಾಸ್ತಾನು ಇಟ್ಟಿದ್ದ. ಇದರ ಜತೆಗೆ ಇಸ್ಲಾಮಿಕ್ ವೈಯಕ್ತಿಕ ಹೂಡಿಕೆ ಹೆಸರಿನಲ್ಲಿ ಯೋಜನೆಯೊಂದನ್ನೂ ಈತ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಯಾರ್ಯಾರು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ದಾಖಲೆಯನ್ನೂ ಇಲಾಖೆ ವಶಕ್ಕೆ ಪಡೆದಿದೆ.
ಜನಸಮೂಹದ ಹೂಡಿಕೆ ಮಾದರಿಯಲ್ಲಿ ಚಿನ್ನಾಭರಣ ವಹಿವಾಟು ಆರಂಭಿಸಿದ್ದ ಖಾನ್, ತನ್ನ ಲಾಭಾಂಶದಿಂದ ಅಷ್ಟೊಂದು ದೊಡ್ಡ ಪ್ರತಿಫಲವನ್ನು ಹೂಡಿಕೆದಾರರಿಗೆ ನೀಡಲು ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳ ಅನಿಸಿಕೆ. ಖಾನ್ ಯೋಜನೆಯಲ್ಲಿ ಹೂಡಿಕೆದಾರರಿಗೆ ಖಾನ್ ಗಳಿಸಿದ ಆದಾಯದಿಂದ ಲಾಭ ನೀಡುವ ಬದಲು ಆತನಿಗೆ ಬರುವ ಹೊಸ ಬಂಡವಾಳದಿಂದಲೇ ಮೊದಲಿನ ಹೂಡಿಕೆದಾರರಿಗೆ ಲಾಭ ನೀಡುತ್ತಿದ್ದ ಎಂದು ವಿಚಾರಣೆಯಿಂದ ಇಲಾಖೆಗೆ ತಿಳಿದು ಬಂದಿದೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಈ ಯೋಜನೆ ಆರ್‌ಬಿಐ ನಿಯಮಾವಳಿಯನ್ನೂ ಉಲ್ಲಂಘಿಸಿದೆ.
"ಇದು ದೊಡ್ಡ ಹಗರಣವಾಗಿದ್ದು, ಹೂಡಿಕೆದಾರರು ಖಂಡಿತವಾಗಿಯೂ ಈ ಹೂಡಿಕೆ ಹಾಗೂ ಪ್ರತಿಫಲವನ್ನು ಆದಾಯ ತೆರಿಗೆ ಇಲಾಖೆಗೆ ತೋರಿಸಿರುವ ಸಾಧ್ಯತೆ ಇಲ್ಲ. ತಕ್ಷಣವೇ ಹೂಡಿಕೆದಾರರ ಹೂಡಿಕೆಗಳ ಬಗ್ಗೆ ಕೂಡಾ ತನಿಖೆ ನಡೆಸಲಾಗುತ್ತದೆ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
"ಪತ್ತೆಯಾಗಿರುವ 1000 ಕೋಟಿ ರೂಪಾಯಿಗಳನ್ನು ಎಲ್ಲೂ ಘೋಷಿಸದ ಹಿನ್ನೆಲೆಯಲ್ಲಿ ಇದನ್ನು ಅಕ್ರಮ ಸಂಪತ್ತು ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುವುದು ಎಂದು ಮೂಲಗಳು ಹೇಳಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಖಾನ್ 45 ಕೋಟಿ ರೂಪಾಯಿ ಘೋಷಿಸಿಕೊಂಡಿದ್ದ.
ನಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ಆದೇಶ ನೀಡಿಲ್ಲ : ಐಎಂಎ
ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯ ವೇಳೆ ನಮ್ಮ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಕಂಡು ಬಂದಿದ್ದು, ನಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ಯಾವುದೇ ಆದೇಶ ನೀಡಿಲ್ಲ.
ನಮ್ಮ ಸಂಸ್ಥೆ ಯಾವುದೇ ರಾಜಕಾರಣಿಯ ಹಣವನ್ನು ಬೇನಾಮಿಯಾಗಿ ಹೂಡಿಕೆ ಮಾಡಿಕೊಂಡಿಲ್ಲ ಎಂದು ಐಎಂಎ ಸಂಸ್ಥೆಯ ಮುಹಮ್ಮದ್ ಮನ್ಸೂರ್ ಖಾನ್ ಬೆಂಗಳೂರು ಮಿರರ್ ಗೆ ಸ್ಪಷ್ಠೀಕರಣ ನೀಡಿದ್ದಾರೆ. ನಾವು ಚಿನ್ನದ ದಾಸ್ತಾನನ್ನು ಸೂಕ್ತ ಕಾನೂನು ಪ್ರಕ್ರಿಯೆಗಳ ಮೂಲಕವೇ ಇಟ್ಟುಕೊಂಡಿದ್ದು, ಕಳೆದ 11 ವರ್ಷಗಳಿಂದ ನೀತಿ ನಿಯಮಗಳ ಪ್ರಕಾರ ಉದ್ಯಮ ನಡೆಸಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.
ವಾರ್ತಾ ಭಾರತಿ ಪ್ರಕಟಿಸಿತ್ತು ವಿಶೇಷ ವರದಿ
ಫೆಬ್ರವರಿ 6, 2017 ರಂದು ವಾರ್ತಾ ಭಾರತಿ " ಹಲಾಲ್ ಲಾಭದ ಹೆಸರಲ್ಲಿ ದುಡ್ಡು ಬಾಚುತ್ತಿವೆ ಹಲಾಲು ಕೋರ ಕಂಪೆನಿಗಳು " ಎಂದು ಸವಿವರವಾದ ಮುಖಪುಟ ವರದಿ ಪ್ರಕಟಿಸಿತ್ತು. ಅದರಲ್ಲಿ ಹಲಾಲ್ ಲಾಭದ ಹೆಸರಲ್ಲಿ ಹೇಗೆ ಕೆಲವು ಕಂಪೆನಿಗಳು ಜನರಿಂದ ಹಣ ಬಾಚುತ್ತಿವೆ , ಹೇಗೆ ಕಾನೂನು ಉಲ್ಲಂಘಿಸುತ್ತಿವೆ ಎಂದು ವಿವರಿಸಲಾಗಿತ್ತು ಮತ್ತು ಇದರಲ್ಲಿ ಹೂಡಿಕೆದಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿತ್ತು.
ಫೆ.6 ರ ವರದಿಯನ್ನು ಓದಲು ಈ ಲಿಂಕನ್ನು ಕ್ಲಿಕ್ ಮಾಡಿ : http://www.varthabharati.in/article/60453