ನಕಲಿ ಟ್ವೀಟ್‌ನಿಂದ ರೈಲ್ವೆಗೆ ಕಿರಿಕಿರಿ, ಕಸ್ಟಡಿ ಸಾವು: ಹೈಕೋರ್ಟ್ ಬಿಗು ನಿಯಮ

Update: 2017-04-04 06:46 GMT

ರೈಲ್ವೆ ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಭಾರತೀಯ ರೈಲ್ವೆಯು ಸಾಮಾಜಿಕ ಜಾಲತಾಣ ‘ಟ್ವಿಟರ್’ನ್ನು ತನ್ನ ಅಸ್ತ್ರವನ್ನಾಗಿಸಿದೆ. ಆದರೆ ರೈಲ್ವೆಯ ಯಾವ ಟ್ವಿಟರ್ ಮೂಲಕ ರೈಲ್ವೆ ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದೆಯೋ ಅದೇ ಟ್ವಿಟರ್ ನಿರ್ವಹಣೆ ಮಾಡುವುದು ಈಗ ಮಧ್ಯ ಮತ್ತು ಪಶ್ಚಿಮ ರೈಲ್ವೆಗೆ ಕಿರಿಕಿರಿ ಹುಟ್ಟಿಸುತ್ತಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ ಪ್ರತಿದಿನ ನಕಲಿ ಟ್ವೀಟ್‌ನ ಸಮಸ್ಯೆಗಳನ್ನು ಎದುರಿಸ ಬೇಕಾಗಿದೆ. ಪ್ರತೀದಿನ ರೈಲ್ವೆ ಅಧಿಕಾರಿಗಳ ಮೇಲಿನ ಆರೋಪಗಳ ಸರಮಾಲೆಗಳಿಂದಲೇ ಟ್ವೀಟ್‌ನ ಆರಂಭವಾಗುತ್ತದೆ! ಒಂದು ವೇಳೆ ಈ ಆರೋಪಗಳನ್ನು ಪರಿಶೀಲಿಸಲು ರೈಲ್ವೆಯು ಟ್ವೀಟ್ ಆಗಿರುವ ಪೋಸ್ಟ್‌ನ್ನು ಹಿಂಬಾಲಿಸಿದರೆ ಆಗ ಇಂತಹ ಯಾವುದೇ ಪ್ರಕರಣಗಳು ಇಲ್ಲ ಎನ್ನುವುದು ತಿಳಿಯುತ್ತದೆ’. ರೈಲ್ವೆ ಅಧಿಕಾರಿಗಳ ಪ್ರಕಾರ ಈ ರೀತಿಯ ನಕಲಿ ಟ್ವೀಟ್ ಗಳು ನಿಲ್ಲುವ ಸೂಚನೆ ಕಾಣುತ್ತಿಲ್ಲವಂತೆ. ಮೊನ್ನೆ ‘‘ಪಶ್ಚಿಮ ರೈಲ್ವೆಯ ನೂತನ ರಾಮ್ ಮಂದಿರ್ ಸ್ಟೇಷನ್‌ನಲ್ಲಿ ‘ರೈಲ್‌ರೋಖೋ’ ಆಂದೋಲನಕ್ಕಾಗಿ ನೂರು ಜನ ಬರುತ್ತಿದ್ದಾರೆ’’ ಎಂದು ಟ್ವೀಟ್ ಮಾಡಲಾಗಿತ್ತು. ಆಗ ರೈಲ್ವೆ ಆಡಳಿತ ತೀವ್ರ ಜಾಗೃತವಾಯಿತು. ರಾಮ್ ಮಂದಿರ್ ಸ್ಟೇಷನ್ ಪರಿಸರದಲ್ಲಿ ಬಿಗು ಸುರಕ್ಷೆ ಏರ್ಪಡಿಸಲಾಯಿತು. ಆದರೆ ನಂತರ ತಿಳಿದದ್ದು ಆ ಸುದ್ದಿ ನಕಲಿಯೆಂದು. ಪಶ್ಚಿಮ ರೈಲ್ವೆಯ ಪ್ರಕಾರ ಪ್ರತೀದಿನ ಹತ್ತು ಟ್ವೀಟ್‌ಗಳಲ್ಲಿ ಕನಿಷ್ಠ 5 ಟ್ವೀಟ್ ನಕಲಿ ಇರುತ್ತದೆಯಂತೆ. ‘‘ಮಧ್ಯ ರೈಲ್ವೆಯಲ್ಲಿ ಸರಾಸರಿ 20 ಟ್ವೀಟ್ ಬಂದರೂ ಅಧಿಕಾಂಶ ನಕಲಿ ಆಗಿರುತ್ತದೆ’’ ಎನ್ನುತ್ತಾರೆ ರೈಲ್ವೆ ಮಂಡಳಿ ಸುರಕ್ಷಾ ಆಯುಕ್ತ ಅನುಪ್ ಶುಕ್ಲಾ.
* * *

ಕಸ್ಟಡಿ ಸಾವು ಪ್ರಕರಣ: ಹೈಕೋರ್ಟ್ ಕಠಿಣ ನಿಲುವು

ಮುಂಬೈ ಸಹಿತ ಮಹಾರಾಷ್ಟ್ರದಾದ್ಯಂತ ಕಸ್ಟಡಿ ಸಾವು ಪ್ರಕರಣಗಳಲ್ಲಿ ಮುಂಬೈ ಹೈಕೋರ್ಟ್ ಬಿಗು ನಿಯಮಕ್ಕೆ ಮುಂದಾಗಿದೆ. ಮಹಾರಾಷ್ಟ್ರದಲ್ಲಿನ ಕೈದಿಗಳ ಅಸಹಜ ಸಾವಿನ ನಂತರ ಪೋಸ್ಟ್‌ಮಾರ್ಟಂ ನಿಟ್ಟಿನಲ್ಲಿ ಮಹಾರಾಷ್ಟ್ರದ ಎಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಡಾಕ್ಟರ್‌ರನ್ನು ನಿಯುಕ್ತಿ ಮಾಡಲು ಸರಕಾರ ಮುಂದಾಗಿದೆ ಎಂದು ಕೋರ್ಟ್‌ಗೆ ರಾಜ್ಯ ಸರಕಾರ ಮಾಹಿತಿ ನೀಡಿದೆ. ಹಾಗೂ ಪೋಸ್ಟ್‌ಮಾರ್ಟಂ ರಿಪೋರ್ಟ್ ನೇರವಾಗಿ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ನಿರಂತರ ಕಸ್ಟಡಿ ಸಾವು ಪ್ರಕರಣ ವರದಿಯಾಗುತ್ತಿದ್ದು ಈ ಬಗ್ಗೆ ಕೋರ್ಟ್ ಕಠಿಣ ನಿಲುವು ತಳೆದಿದೆ. ಮುಂಬೈಯ ವಡಾಲಾ ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಸಾವಿನ ನಂತರ ಈ ಪ್ರಕರಣವು ತೀವ್ರ ಚರ್ಚೆ ಹುಟ್ಟುಹಾಕಿದೆ. ಹಾಗೂ ಈ ಬಗ್ಗೆ ಕೋರ್ಟ್‌ನಲ್ಲಿ ಜನಹಿತ ಅರ್ಜಿ ದಾಖಲಿಸಲಾಗಿದೆ. ಈ ಜನಹಿತ ಅರ್ಜಿಯಲ್ಲಿ ‘‘ಕಸ್ಟಡಿಯಲ್ಲಿ ನಡೆಯುವ ಕೈದಿಯ ಸಾವಿನ ನಂತರ ಯಾವ ಪೋಸ್ಟ್‌ಮಾರ್ಟ್‌ಂ ರಿಪೋರ್ಟ್ ಬರುತ್ತದೋ ಅದರಲ್ಲಿ ಲೋಪಗಳು ಕಾಣಿಸಿಕೊಳ್ಳುತ್ತಿವೆ, ಅದರಲ್ಲಿ ಕೈಯಾಡಿಸಲಾಗುತ್ತಿದೆ. ಹೀಗಾಗಿ ಈ ಕೇಸ್‌ನಲ್ಲಿ ಪ್ರಭಾವ ಬೀರುತ್ತದೆ’’ ಎನ್ನುವ ಸಂಶಯವನ್ನು ವ್ಯಕ್ತಪಡಿಸಲಾಗಿತ್ತು. ಈ ಮಾತನ್ನು ಮುಂದಿಟ್ಟು ನ್ಯಾಯಾಧೀಶ ವಿ.ಎಂ. ಕನಾಡೆ ಮತ್ತು ನ್ಯಾ. ಪಿ.ಆರ್. ಬೋರಾ ಅವರ ಪೀಠವು ಸರಕಾರಕ್ಕೆ ಈ ಬಗ್ಗೆ ಉತ್ತರಿಸುವಂತೆ ಸೂಚಿಸಿದೆ. ಆನಂತರ ಸರಕಾರಿ ವಕೀಲರು ಕೋರ್ಟ್‌ಗೆ ಈ ಮಾಹಿತಿ ನೀಡುತ್ತಾ ‘‘ಕಸ್ಟಡಿ ಸಾವಿನ ಪೋಸ್ಟ್‌ಮಾರ್ಟಂಗಾಗಿ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಡಾಕ್ಟರ್‌ಗಳನ್ನು ನಿಯುಕ್ತಿಗೊಳಿಸಲಾಗುವುದು. ಹಾಗೂ ಇವರೆಲ್ಲ ಕಸ್ಟಡಿಯಲ್ಲಾಗುವ ಕೈದಿಯ ಸಾವಿನ ಪೋಸ್ಟ್‌ಮಾರ್ಟಂ ನಡೆಸುತ್ತಾರೆ ಮತ್ತು ಇದರ ರಿಪೋರ್ಟನ್ನು ಮ್ಯಾಜಿಸ್ಟ್ರೇಟ್‌ರಿಗೇ ನೇರವಾಗಿ ಕಳುಹಿಸಿಕೊಡುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಇಂತಹ ಡಾಕ್ಟರ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ’’ ಎಂದಿದ್ದಾರೆ.

ಕಸ್ಟಡಿ ಸಾವಿನ ಪ್ರಕರಣಗಳಲ್ಲಿ ಒಂದೊಮ್ಮೆ ಮಹಾರಾಷ್ಟ್ರ ಮೊದಲ ಸ್ಥಾನಕ್ಕೆ ತಲುಪಿತ್ತು. ಆನಂತರ ಇದು ಕೋರ್ಟ್ ಮೆಟ್ಟಿಲೇರಿತ್ತು. ಈ ಘಟನೆಯ ನಂತರ ಸರಕಾರದ ನಿದ್ದೆ ಹಾರಿಹೋಗಿದ್ದು ಕೆಲವು ಸಮರ್ಪಕ ಹೆಜ್ಜೆಗಳನ್ನಿರಿಸಲು ಮುಂದಾಗಿದೆ.

* * * 

ಮನಪಾ ಶಾಲೆಗಳಲ್ಲೂ ಹತ್ತನೆ ತರಗತಿ ತನಕ ಓದಿ

ಮಹಾನಗರ ಪಾಲಿಕೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ತಡೆಯಲು ಮತ್ತು ಬಡ ವಿದ್ಯಾರ್ಥಿಗಳಿಗೆ ಉಚ್ಛ ದರ್ಜೆಯ ಶಿಕ್ಷಣ ನೀಡುವುದಕ್ಕಾಗಿ ಮಹಾನಗರ ಪಾಲಿಕೆಯು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಮುಂಬೈ ಪಾಲಕರ ಸಂಕಲ್ಪದಂತೆ ಇದೀಗ 114 ಶಾಲೆಗಳಲ್ಲಿ ಜೂನಿಯರ್ ಕೆ.ಜಿ.ಯಿಂದ ಹತ್ತರ ತನಕ ತರಗತಿಗಳನ್ನು ಆರಂಭಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಬೇರೆ ಶಾಲೆಗೆ ಓಡಾಡುವ ಕಿರಿಕಿರಿ ತಪ್ಪಲಿದೆ.

2007-2008ರಿಂದ ಮನಪಾ ಕೆಲವು ಶಾಲೆಗಳಲ್ಲಿ ಮೂರು ವರ್ಷಗಳಿಂದ ಐದು ವರ್ಷದ ವಯಸ್ಸಿನ ಮಕ್ಕಳಿಗಾಗಿ 504 ಬಾಲವಾಡಿಗಳನ್ನು ಆರಂಭಿಸಿದೆ. ಈ ಬಾಲವಾಡಿಗಳಲ್ಲಿ, ಜೂನಿಯರ್ ಕೆ.ಜಿ.ಯಲ್ಲಿ 13,277 ವಿದ್ಯಾರ್ಥಿಗಳಿದ್ದರೆ, ಸೀನಿಯರ್ ಕೆ.ಜಿ.ಯಲ್ಲಿ 7,100 ವಿದ್ಯಾರ್ಥಿಗಳಿದ್ದಾರೆ. ಈ ಬಾಲವಾಡಿಗಳಲ್ಲಿ ಶಿಕ್ಷಣ ಪಡೆದವರು. ನೇರವಾಗಿ ಮನಪಾ ಶಾಲೆಗಳಲ್ಲಿ ಮೊದಲನೆ ತರಗತಿಗೆ ಪ್ರವೇಶ ಮಾಡುತ್ತಾರೆ. ಆದರೆ ಕೆಲವು ಮನಪಾ ಶಾಲೆಗಳಲ್ಲಿ ಏಳನೆ ತರಗತಿ ತನಕ ಮಾತ್ರ ಇವೆ. ಇಲ್ಲಿನ ಮಕ್ಕಳಿಗೆ ಎಂಟನೆ ತರಗತಿಗೆ ಬೇರೆ ಶಾಲೆಗಳಿಗೆ ಸೇರಬೇಕು. ಇದು ಕೆಲವೊಮ್ಮೆ ಮಕ್ಕಳ ಓಡಾಟ ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ಮುಂದಿಟ್ಟು ಮುಂಬೈಯ 114 ಶಾಲೆಗಳಲ್ಲಿ ಜೂನಿಯರ್ ಕೆ.ಜಿಯಿಂದ ಹತ್ತನೆ ತರಗತಿ ತನಕ ಕ್ಲಾಸ್‌ಗಳನ್ನು ಶುರುಮಾಡಲು ಮಹಾನಗರ ಪಾಲಿಕೆ ನಿರ್ಣಯಿಸಿದೆ.
* * *

ಗ್ರಾಮೀಣ ಶಾಲೆಗಳ ದುಸ್ಥಿತಿ!

2009ರಲ್ಲಿ ಸರ್ವ ಶಿಕ್ಷಣ ಅಧಿಕಾರ ಕಾನೂನು ಜಾರಿಗೆ ಬಂದ ನಂತರವೂ ಮಹಾರಾಷ್ಟ್ರದಲ್ಲಿ 98,213 ಪ್ರಾಥಮಿಕ ಶಾಲೆಗಳಲ್ಲಿ 3,044 ಶಾಲೆಗಳಲ್ಲಿ ಇವತ್ತಿಗೂ ಏಕ ಶಿಕ್ಷಕ ವ್ಯವಸ್ಥೆಯಿದೆ.

ರಾಜ್ಯದಲ್ಲಿ 2,455 ಶಾಲೆಗಳಿಗೆ ಹೋಗಲು ಮಕ್ಕಳಿಗೆ ಸರಿಯಾದ ರಸ್ತೆಗಳಿಲ್ಲ, 12,572 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಡಲು ಸರಿಯಾದ ಮೈದಾನ ಲಭ್ಯವಿಲ್ಲ. 18,365 ಶಾಲೆಗಳಲ್ಲಿ ಸುರಕ್ಷಾ ಗೋಡೆಗಳಿಲ್ಲ (ಪಶುಗಳು ಒಳಬಾರದಂತೆ) ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯದ ಮಾತನ್ನಾಡುವ ಸರಕಾರಕ್ಕೆ ರಾಜ್ಯದಲ್ಲಿ 589 ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಇನ್ನೂ ಸ್ವಚ್ಚತಾ ಗೃಹಗಳ ಸೌಲಭ್ಯಗಳಿಲ್ಲವೆನ್ನುವುದು ತಿಳಿದಿಲ್ಲ. ಹಾಗೆಯೇ 13,848 ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಈ ಮಾಹಿತಿಯನ್ನು ‘ಸಮರ್ಥನ್’ ಅಧ್ಯಯನ ಕೇಂದ್ರ ನೀಡಿದೆ.
* * *

ಬಾಟಲ್ ಕ್ರಷಿಂಗ್ ಮೆಷಿನ್ ಕಳ್ಳತನ!

ಮುಂಬೈ ಪ್ರಯಾಣಿಕರಿಗಾಗಿ ಪಶ್ಚಿಮ ರೈಲ್ವೆ ಮತ್ತು ಮಧ್ಯ ರೈಲ್ವೆ ಕೆಲವು ಸ್ಟೇಷನ್‌ಗಳಲ್ಲಿ ಬಾಟಲ್ ಕ್ರಷಿಂಗ್ ಮೆಷಿನ್ ಇರಿಸಿದೆ. ಆದರೆ ಇತ್ತೀಚೆಗೆ ಈ ಮೆಷಿನ್‌ಗಳು ಒಂದೊಂದಾಗಿ ಹಾಳಾಗುತ್ತಿದೆ. ಕಾರಣ ಬಾಟಲ್ ಕ್ರಷಿಂಗ್ ಮೆಷಿನ್‌ಗಳನ್ನು ಒಡೆದು ಅದರೊಳಗಿನ ಸ್ಪೀಕರ್ ಮತ್ತು ಕ್ಯಾಮರಾ ತೆಗೆಯುವುದಾಗಿದೆ. ಇಂತಹ ಒಂದೆರಡು ಘಟನೆಗಳು ಈಗಾಗಲೇ ವರದಿಯಾಗಿವೆ. ಇದೀಗ ಬಾಟಲ್ ಕ್ರಷಿಂಗ್ ಮೆಷಿನ್ ಸ್ಟೇಷನ್‌ಗಳಲ್ಲಿ ಇರಿಸಿರುವ ಸಂಸ್ಥೆ ‘ವಾಕಾರ್ಡ್ ಫೌಂಡೇಶನ್’ ಮೆಷಿನ್ ಸುರಕ್ಷೆಗಾಗಿ ರಾತ್ರಿಯ ಸಮಯ ಪೊಲೀಸರನ್ನು ಇಡುವಂತೆ ಆಡಳಿತವನ್ನು ವಿನಂತಿಸಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ ಬಾಟಲ್ ಕ್ರಶಿಂಗ್ ಮೆಶಿನ್ ಮತ್ತು ಎಟಿವಿಎಂ ಟಿಕೆಟ್ ಪಡೆಯುವ ಮೆಶಿನ್ ರಿಪೇರಿ ಈಗ ರೈಲ್ವೆಗೆ ತಲೆನೋವಾಗಿದೆ.
* * *

ದಾಭೋಲ್ಕರ್ - ಪನ್ಸಾರೆ ಹತ್ಯಾಕಾಂಡ

ಸಿಬಿಐ ಮತ್ತು ಸಿಐಡಿ ಜಂಟಿ ತನಿಖೆಗೆ ಕೋರ್ಟ್ ಆದೇಶ

ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಎಡಪಂಥೀಯ ನಾಯಕ ಗೋವಿಂದ ಪನ್ಸಾರೆ ಅವರ ಹತ್ಯಾ ಪ್ರಕರಣದಲ್ಲಿ ಪರಾರಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಬಿಐ ಮತ್ತು ಮಹಾರಾಷ್ಟ್ರ ಸಿಐಡಿ ಜಂಟಿ ಯಾಗಿ ಗಂಭೀರ ಪ್ರಯತ್ನ ನಡೆಸುವಂತೆ ಬಾಂಬೆ ಹೈಕೋರ್ಟ್ ಹೇಳಿದೆ.

ಸಿಬಿಐ ದಾಭೋಲ್ಕರ್ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿದೆ. ಪನ್ಸಾರೆ ಅವರ ಹತ್ಯಾ ಪ್ರಕರಣದ ತನಿಖೆಯನ್ನು ಸಿಐಡಿಯ ವಿಶೇಷ ತನಿಖಾ ತಂಡ ಮಾಡುತ್ತಿದೆ. ಎರಡೂ ತನಿಖಾ ಏಜನ್ಸಿಗಳು ಇತ್ತೀಚೆಗೆ ಜಸ್ಟೀಸ್ ಎನ್.ಸಿ. ಧರ್ಮಾಧಿಕಾರಿ ಅವರ ಪೀಠಕ್ಕೆ ತನಿಖೆಯ ಈಗಿನ ಸ್ಥಿತಿಯ ವರದಿ ಒಪ್ಪಿಸಿತು. ಪೀಠವು ದಾಭೋಲ್ಕರ್ ಮತ್ತು ಪನ್ಸಾರೆ ಅವರ ಕುಟುಂಬದವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದೆ. ಇದರಲ್ಲಿ ನ್ಯಾಯಾಲಯದ ಉಸ್ತುವಾರಿಯಲ್ಲೇ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು.

ತನಿಖಾ ಏಜನ್ಸಿಗಳ ವರದಿ ನೋಡಿದ ನಂತರ ಪೀಠವು ಆರೋಪಿಗಳ ಬಂಧನದ ವಿಷಯದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಪ್ರಶಂಸಿಸಿದರೂ ಎರಡೂ ಏಜನ್ಸಿಗಳು ಸಮನ್ವಯದ ಮೂಲಕ ಮುಂದುವರಿಯಬೇಕು. ಯಾಕೆಂದರೆ ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಸಮಾನ ಮನಸ್ಕರಾಗಿ ಕಾಣುತ್ತಾರೆ. ಹೀಗಾಗಿ ಮುಂದಿನ ತನಿಖೆ ಜೊತೆಯಾಗಿ ನಡೆಸಬೇಕು. ಈ ಪ್ರಕರಣದ ಗಂಭೀರತೆಯನ್ನು ಕಂಡಾಗ ಎರಡೂ ತನಿಖಾ ಏಜನ್ಸಿಗಳು ಈ ವಿಷಯವಾಗಿ ಗಂಭೀರ ಪ್ರಯತ್ನ ಕೈಗೊಳ್ಳಬೇಕು ಎಂದಿದೆ ಕೋರ್ಟ್. ಪ್ರಕರಣದ ಮುಂದಿನ ವಿಚಾರಣೆ ಎಪ್ರಿಲ್ 20ರಂದು ನಡೆಯಲಿದೆ. ದಾಭೋಲ್ಕರ್ ಅವರ ಹತ್ಯೆ 20-8-2013ರಂದು ಪುಣೆಯಲ್ಲಿ ನಡೆದಿತ್ತು. ಪನ್ಸಾರೆ ಅವರಿಗೆ ಕೊಲ್ಲಾಪುರದಲ್ಲಿ 16-2-2015ರಂದು ಗುಂಡು ಹಾರಿಸಲಾಗಿದ್ದು ನಾಲ್ಕು ದಿನಗಳ ನಂತರ ಫೆಬ್ರವರಿ 20ರಂದು ಸಾವನ್ನಪ್ಪಿದ್ದರು.
* * *

ವೃಕ್ಷಗಳಿಗೆ ವೆಬ್‌ಸೈಟ್

ಪರಿಸರದ ಏರುಪೇರುಗಳನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಸರಕಾರವು ಇದೀಗ ಮರಗಳಿಗಾಗಿ ವೆಬ್‌ಸೈಟ್ ತೆರೆಯಲು ನಿರ್ಧರಿಸಿದೆ. ನಿರಂತರವಾಗಿ ವೃಕ್ಷಗಳನ್ನು ಕಡಿಯುವುದರ ಸಂಬಂಧವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇದೀಗ ವೃಕ್ಷಗಳ ನಿಗಾ ಇರಿಸಲು ಮುಂಬೈ ಮಹಾನಗರ ಕ್ಷೇತ್ರದ ಪ್ರಮುಖ ನಗರ ನಿಗಮಗಳಿಗೆ ವೆಬ್‌ಸೈಟ್ ತೆರೆಯಲು ಆದೇಶಿಸಿದ್ದಾರೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ಸಂವಿಧಾನ -75