ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು, ಎ.5: ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆ ಸಲಹಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಐವರ ವಿರುದ್ಧ ದಾಖಲಾಗಿದ್ಧ ಎಫ್‌ಐಆರ್‌ನ್ನು ಹೈಕೋರ್ಟ್ ರದ್ದುಗೊಳಿಸಲು ನಿರಾಕರಿಸಿದೆ.
ಈ ಸಂಬಂಧ ಪ್ರಕರಣ ರದ್ದುಕೋರಿ ಸುಬ್ರಹ್ಮಣ್ಯ ಭಟ್ ಸೇರಿ ಐವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್‌ಶ್ಯಾಮ್ ಅವರು, ಅಭಿವ್ಯಕ್ತಿ ಸ್ವಾತಂತ್ರದ ಹಿನ್ನೆಲೆಯಲ್ಲಿ ಅರ್ಜಿದಾರರು ಸ್ವಚ್ಛ ಬ್ರಾಹ್ಮಣರ ವೇದಿಕೆಯ ಪೇಜ್(ಫೇಸ್‌ಬುಕ್)ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ವಿ.ಎಸ್.ಉಗ್ರಪ್ಪ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಈ ತನಿಖೆಗೆ ತಡೆ ನೀಡಬೇಕು ಹಾಗೂ ಪ್ರಕರಣವನ್ನು ರದ್ದುಪಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಗಳಾದ ಸುಬ್ರಹ್ಮಣ್ ಭಟ್, ಪಿ.ಎಸ್.ಬಾಲಕೃಷ್ಣ, ಗಣೇಶ್, ನಿರಂಜನ್ ಪುರಾಣಿಕ್, ಬಿ.ಶ್ರೀನಿವಾಸ್‌ರಾವ್‌ರನ್ನು ಬಂಧಿಸದಂತೆ ಆದೇಶ ಹೊರಡಿಸಿ, ಎಫ್‌ಐಆರ್ ರದ್ದುಗೊಳಿಸದೆ, ತನಿಖೆ ಮುಂದುವರಿಸಲು ಪೀಠವು ಆದೇಶಿಸಿದೆ.
ಪ್ರಕರಣವೇನು?:
ರಾಮಚಂದ್ರಾಪುರ ಮಠದ ಶ್ರೀಗಳ ವಿಚಾರದಲ್ಲಿ ಮಹಿಳೆ ಪರವಾದ ನನ್ನ ನಿಲುವಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೂ ಫೇಸ್‌ಬುಕ್‌ನಲ್ಲಿ ಸ್ವಚ್ಛ ಬ್ರಾಹ್ಮಣರ ಗ್ರೂಪ್‌ನಲ್ಲಿ ಸುಬ್ರಹ್ಮಣ್ ಭಟ್ ಸೇರಿ ಐವರು ಜೀವ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಿ.ಎಸ್.ಉಗ್ರಪ್ಪ ಅವರು ದೂರು ದಾಖಲಿಸಿದ್ದರು.