ಐಆರ್‌ಡಿಎ ಸಭೆ ಸಫಲ: ಲಾರಿ ಮುಷ್ಕರ ಅಂತ್ಯ

Update: 2017-04-08 14:23 GMT

ಬೆಂಗಳೂರು, ಎ.8: ಕೇಂದ್ರ ಸರಕಾರವು ಲಾರಿಗಳ ವಿಮಾ ಕಂತಿನ ದರ ಹೆಚ್ಚಳ ಮಾಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಅಂತ್ಯಗೊಂಡಿದೆ.

ಶನಿವಾರ ಹೈದರಾಬಾದ್‌ನಲ್ಲಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ(ಐಆರ್‌ಡಿಎ)ದೊಂದಿಗೆ ಲಾರಿ ಮಾಲಕರ ಸಂಘದ ಪದಾಧಿಕಾರಿಗಳು ನಡೆಸಿದ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರವನ್ನು ಅಂತ್ಯಗೊಳಿಸಲಾಗಿದೆ.

ವಿಮಾ ಕಂತಿನ ದರವನ್ನು ಶೇ.23ರಷ್ಟು ಇಳಿಸಲು ಐಆರ್‌ಡಿಎ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಅಂತ್ಯಗೊಳಿಸಲಾಗಿದೆ ಎಂದು ರಾಜ್ಯ ಲಾರಿಮಾಲಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ನಾರಾಯಣಪ್ಪ ತಿಳಿಸಿದ್ದಾರೆ.

ವಿಮಾ ಮೊತ್ತ ಹೆಚ್ಚಳ ವಿರೋಧಿಸಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಲಾರಿ ಮಾಲಕರ ಮುಷ್ಕರಕ್ಕೆ ಐಆರ್‌ಡಿಎ ಕೊನೆಗೂ ಮಣಿದಿದ್ದು, ವಿಮೆ ಮೊತ್ತದಲ್ಲಿ ಶೇ.23ರಷ್ಟನ್ನು ಇಳಿಸಲು ಸಮ್ಮತಿಸಿದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಎಪ್ರಿಲ್ 7ರಂದು ಹೆದರಾಬಾದ್‌ನಲ್ಲಿ ಅಖಿಲ ಭಾರತ ಮೋಟಾರ್ ಕಾಂಗ್ರೆಸ್ ಮಟ್ಟದಲ್ಲಿ ಚರ್ಚೆ ನಡೆದರೂ ಐಆರ್‌ಡಿಎ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಆದರೂ, ಪಟ್ಟು ಬಿಡದೆ ದಕ್ಷಿಣವಲಯ ಸರಕು ಸಾಗಣೆದಾರರ ಶ್ರೇಯೋಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ನೇತೃತ್ವದಲ್ಲಿ ಇಂದು ನಡೆದ ಮತ್ತೊಂದು ಸುತ್ತಿನ ಮಾತುಕತೆ ಯಶಸ್ವಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News