ಕಪ್ಪುಹಣದ ನಾಯಕರ ಕೈಯಲ್ಲಿ ಇವತ್ತಿನ ರಾಜಕಾರಣ: ಬಂಜಗೆರೆ ಜಯಪ್ರಕಾಶ್
ಬೆಂಗಳೂರು, ಎ.10: ರಾಜಕಾರಣದಲ್ಲಿ ಮೊದಲು ಸಮುದಾಯದ ನಾಯಕರಿದ್ದರು. ಆದರೆ ಈಗ ಅವರ ಜಾಗವನ್ನು ಕಪ್ಪುಹಣದ ನಾಯಕರು ವಶೀಕರಣ ಮಾಡಿಕೊಂಡಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ 125ನೆ ಜನ್ಮಾದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ "ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವ" ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಮೂವತ್ತು-ನಲವತ್ತು ವರ್ಷಗಳ ಹಿಂದೆ ರಾಜಕಾರಣದಲ್ಲಿ ವ್ಯಕ್ತಿತ್ವವುಳ್ಳ ನಾಯಕರಿದ್ದರು. ಆಗ ಪ್ರಜಾಪ್ರಭುತ್ವಕ್ಕೂ ಬೆಲೆಯಿತ್ತು. ಆದರೆ ಈಗ ಅವರ ಜಾಗವನ್ನು ಕಪ್ಪುಹಣದ ನಾಯಕರು ಆವರಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಂಟಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ, ಅಶೋಕ್‌ಖೇಣಿ, ಅನಿಲ್ ಹಾಗೂ ಸಂತೋಷ್ ಲಾಡ್, ಜಾರಕಿಹೊಳಿ ಕುಟುಂಬ, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ಇವರ ಹಿನ್ನೆಲೆ ಏನು? ಇವರ ಬಳಿ ಇರುವ ಅಕ್ರಮ ಸಂಪತ್ತನ್ನು ಹೊರ ಹಾಕಿದರೆ ಬಂಡವಾಳ ಬಯಲಾಗುತ್ತದೆ ಎಂದರು.
ಪಕ್ಷದ ಹೈಕಮಾಂಡ್‌ಗೆ ಕಿಕ್‌ಬ್ಯಾಕ್ ನೀಡುವ ಹಾಗೂ ಹಣ ದೋಚುವ ಉದ್ದೇಶದಿಂದ ದೊಡ್ಡ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇಂತಹ ಉದ್ದೇಶ ಇಲ್ಲದಿದ್ದರೆ ಮೆಟ್ರೊ ರೈಲು ಯೋಜನೆ ಜಾರಿಗೆ ಬರುತ್ತಿರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಬರಲಿ, ಬಿಡಲಿ ಅದನ್ನು ಜಾರಿಗೊಳಿಸುವುದರಿಂದ ಕೋಟ್ಯಂತರ ರೂಪಾಯಿ ಮಾತ್ರ ರಾಜಕಾರಣಿಗಳ ಜೇಬು ಸೇರುತ್ತದೆ ಎಂದು ಅವರು ದೂರಿದರು.
ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಕೈಗೊಳ್ಳಬೇಕಿದ್ದ ಮುಖ್ಯ ನಿರ್ಣಯಗಳನ್ನು ಗಣಿಧಣಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಕೈಗೊಳ್ಳುತ್ತಿದ್ದರು. ಗಣಿಗಾರಿಕೆಯಲ್ಲಿ ಸಂಪಾದಿಸಿದ ಸಾವಿರಾರು ಕಪ್ಪುಹಣವನ್ನು ಚುನಾವಣೆಯಲ್ಲಿ ಸುರಿದು 300 ಸಂಸದರನ್ನು ಗೆಲ್ಲಿಸಿ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಮಾಡುವುದು ಜನಾರ್ದನ ರೆಡ್ಡಿ ಅವರ ಯೋಜನೆಯಾಗಿತ್ತು. ಆದರೆ, ಅದು ತಲೆಕೆಳಗಾಯಿತು.
-ಬಂಜಗೆರೆ ಜಯಪ್ರಕಾಶ್