ಸಿಸಿಟಿವಿಯಡಿ ನೀರಿನ ಟ್ಯಾಂಕರ್‌ಗಳು, ಮುಂಬೈ ವಿವಿಯ ಕಳಪೆ ಸಾಧನೆ

Update: 2017-04-10 18:54 GMT

ಎಂ.ಎಂ.ಸಿ.ಗೆ 700ಕ್ಕೂ ಅಧಿಕ ರೋಗಿಗಳಿಂದ ದೂರುಗಳು

ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ (ಎಂ.ಎಂಸಿ.)ಗೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿವೆ. ಆದರೆ ಇನ್ನೂ ಎಂ.ಎಂ.ಸಿ. ಪ್ಯಾನಲ್‌ನ ರಚನೆಯಾಗಿಲ್ಲ. ಇದಕ್ಕೆ ಕಾರಣ ಸರಕಾರದ ವತಿಯಿಂದ ನೇಮಕವಾಗಬೇಕಾಗಿರುವ ಐದು ಸದಸ್ಯರ ಹೆಸರುಗಳು ಇನ್ನೂ ಬಾರದಿರುವುದು. ಹೀಗಾಗಿ ರೋಗಿಗಳಿಂದ ಬರುವ ದೂರುಗಳ ಸಂಖ್ಯೆ ಬೆಳೆಯುತ್ತಾ ಇದೆ. ಎಂ.ಎಂ.ಸಿ. ಯ ಬಳಿ 700ಕ್ಕೂ ಅಧಿಕ ರೋಗಿಗಳ ದೂರು ದಾಖಲಾಗಿದ್ದರೂ ಇನ್ನೂ ಎಂ.ಎಂ.ಸಿ. ಯಾವ ವಿಚಾರಣೆ ಗೂ ಮುಂದಾಗಿಲ್ಲ. ಇಂಡಿಯನ್ ಮೆಡಿಕಲ್ ಎಸೋಸಿಯೇಶನ್‌ನ (ಐ.ಎಂ.ಎ.) ಮಾಜಿ ಅಧ್ಯಕ್ಷ ಮತ್ತು ಎಂ.ಎಂ.ಸಿ. ಚುನಾವಣೆಯಲ್ಲಿ ವಿಜಯಿಯಾಗಿರುವ ಡಾ. ಜಯೇಶ್ ತಿಳಿಸಿದಂತೆ ‘‘ಎಂ.ಎಂ.ಸಿ. ಪ್ಯಾನಲ್‌ನಲ್ಲಿ 18 ಸದಸ್ಯರಿದ್ದಾರೆ. ಎಲ್ಲಾ ಸದಸ್ಯರ ನಿಯುಕ್ತಿಯಾಗದೆ ಪ್ಯಾನಲ್ ಕೆಲಸ ಮಾಡುವಂತಿಲ್ಲ. ಇದರ 9 ಸದಸ್ಯರಿಗಾಗಿ ಚುನಾವಣೆ ನಡೆದರೆ, 5 ಸದಸ್ಯರನ್ನು ಸರಕಾರ ನೇಮಿಸುತ್ತದೆ. ಉಳಿದ 4 ಸದಸ್ಯರು ಡಿ.ಎಂ.ಆರ್., ಡಿ.ಎಚ್. ಎಸ್.... ಇತ್ಯಾದಿಗಳಿಂದ ಬರುತ್ತಾರೆ.

ಪ್ರತೀ ತಿಂಗಳು ಎಂ.ಎಂ.ಸಿ.ಗೆ 100-150 ದೂರುಗಳು ಬರುತ್ತವೆ. ಚುನಾವಣೆ ನಡೆಯುವ ಕಾರಣ ಕಳೆದ ಆಗಸ್ಟ್‌ನಲ್ಲಿ ಎಂ.ಎಂ.ಸಿ. ಪ್ಯಾನೆಲ್ ವಿಸರ್ಜಿಸಲಾಗಿತ್ತು. 18 ಸದಸ್ಯರ ಪ್ಯಾನಲ್‌ನ ಸ್ಥಳದಲ್ಲಿ ಈಗ ಕೇವಲ ಇಬ್ಬರಷ್ಟೇ ಎಂ.ಎಂ.ಸಿ.ಯ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ದೂರುಗಳ ಸಂಖ್ಯೆ ಹೆಚ್ಚುತ್ತಿದೆ’’ ಎನ್ನುತ್ತಾರೆ.

* * *

ನೀರಿನ ಟ್ಯಾಂಕರ್‌ಗಳು ಸಿಸಿಟಿವಿ ಅಡಿಯಲ್ಲಿ
 ಮುಂಬೈ ನಗರ ಮತ್ತು ಉಪನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನೀರಿನ ಮಾಫಿಯಾಗಳು ಸಕ್ರಿಯರಾಗಿವೆ. ಇವರಲ್ಲಿ ಅನೇಕರ ಬಳಿ ನೀರು ಪೂರೈಕೆಯ ಒಂದೇ ಟ್ಯಾಂಕರ್‌ನ ಲೈಸನ್ಸ್ ಇರುವುದಾದರೂ ಅದನ್ನು ಹಿಡಿದುಕೊಂಡು ಅನೇಕ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುತ್ತಾರೆ. ಅಲ್ಲದೆ ಈ ಮಾಫಿಯಾಗಳು ಮಾರುಕಟ್ಟೆಯ ಪರಿಸ್ಥಿತಿ ಗಮನಿಸಿ ತಮ್ಮ ದರವನ್ನು ಬದಲಾಯಿಸುತ್ತಲೇ ಇರುತ್ತಾರೆ. ಇದನ್ನು ಗಮನಿಸಿ ನೀರಿನ ಟ್ಯಾಂಕರ್ ಧೋರಣೆ ನೀತಿ ರಚಿಸಲು ನಿರ್ಣಯಿಸಲಾಗಿದೆ. ಈ ನೀತಿಯಂತೆ ನೀರು ಪೂರೈಸುವ ಪ್ರತೀ ಟ್ಯಾಂಕರ್‌ನ ರಿಜಿಸ್ಟ್ರೇಷನ್ ಮಾಡುವುದು ಅನಿವಾರ್ಯವಾಗಿದೆ. ಮುಂಬೈ ಮನಪಾ ಆಯುಕ್ತ ಅಜಯ್ ಮೆಹ್ತಾ ಅವರು ಈ ನೀತಿಯ ಅನುಸಾರ 50 ಸ್ಥಳಗಳಲ್ಲಿ ಟ್ಯಾಂಕರ್ ಫಿಲ್ಲಿಂಗ್ ಪಾಯಿಂಟ್ ಸ್ಥಾಪಿಸಲಾಗುವುದು ಹಾಗೂ ಮನಪಾ ಆರೋಗ್ಯ ವಿಭಾಗದಿಂದ ನೀರು ಪೂರೈಕೆ ಮಾಡುವವರು ಮಂಜೂರು ಪಡೆದುಕೊಳ್ಳಬೇಕಾಗುವುದು ಎಂದಿದ್ದಾರೆ. ನೀರು ತುಂಬಿಸುವುದಕ್ಕಾಗಿ 18 ಸ್ಥಳಗಳಲ್ಲಿ 50 ಫಿಲ್ಲಿಂಗ್ ಪಾಯಿಂಟ್ ಸ್ಟೇಷನ್ ಸ್ಥಾಪಿಸಲಾಗುವುದು ಹಾಗೂ ಇಲ್ಲೆಲ್ಲ ಸಿಸಿಟಿವಿ ಕ್ಯಾಮರಾ ಇರಿಸಲಾಗುತ್ತದೆಯಂತೆ.

* * *

ಮೂರು ತಿಂಗಳಲ್ಲಿ 203 ಅನಾಥ ಶವಗಳು
ಮುಂಬೈ ಉಪನಗರೀಯ ರೈಲು ಮಾರ್ಗಗಳಲ್ಲಿ ಪ್ರತೀದಿನ ಸರಾಸರಿ 16 ರೈಲು ದುರ್ಘಟನೆಗಳು ನಡೆಯುತ್ತವೆ. ಈ ರೈಲು ದುರ್ಘಟನೆಗಳಲ್ಲಿ ಸಾವನ್ನಪ್ಪುವವರಲ್ಲಿ 2ರಿಂದ 4 ಜನರ ಗುರುತು ಪತ್ತೆಯಾಗುವುದಿಲ್ಲ. ಇಂತಹವರ ಮೃತಶರೀರಗಳನ್ನು ಅನಾಥ ಶ್ರೇಣಿಯಲ್ಲಿ ಇರಿಸುತ್ತಾರೆ.

2016ರಲ್ಲಿ ಅನಾಥ ಶವಗಳ ಸಂಖ್ಯೆ 1,087 ಇತ್ತು. 2017ರಲ್ಲಿ ಜನವರಿಯಿಂದ ಮಾರ್ಚ್ ತನಕ ಈ ಮೂರು ತಿಂಗಳಲ್ಲಿ 203 ಶವಗಳ ಗುರುತು ಪತ್ತೆಯಾಗಿಲ್ಲ. ಇವುಗಳನ್ನು ಅನಾಥ ಶ್ರೇಣಿಯಲ್ಲಿ ಇರಿಸಲಾಗಿದೆ. ಈ ಅನಾಥ ಶವಗಳನ್ನು ಮನಪಾ ಆಸ್ಪತ್ರೆಗಳ ವಿಭಿನ್ನ ಶವಾಗೃಹಗಳಲ್ಲಿ ಇರಿಸಲಾಗಿದೆ.

ರೈಲ್ವೆ ಅಧಿಕಾರಿಗಳ ಅನುಸಾರ ಈ ದಿನಗಳಲ್ಲಿ ಅನಾಥ ಶವಗಳನ್ನು ಇರಿಸಲು ಸ್ಥಳದ ಕೊರತೆಯಾಗಿದೆ. ಉಪನಗರಗಳ ರೈಲು ಮಾರ್ಗಗಳಲ್ಲಿ ದುರ್ಘಟನೆಗಳ ಸಂಖ್ಯೆ ಏರುತ್ತಲೇ ಇದೆ. ಜೊತೆಗೆ ಅನಾಥ ಶವಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ಶವಾಗೃಹಗಳಲ್ಲಿ ಹಲವು ದಿನಗಳ ಕಾಲ ಶವಗಳನ್ನು ಇರಿಸಲಾಗುವುದು. ಕುಟುಂಬದವರಿಗೆ ತಡವಾದರೂ ಗುರುತಿಸಲು ಅನುಕೂಲವಾಗುವಂತೆ ರೈಲ್ವೆ ಪೊಲೀಸರು ಅನಾಥ ಶವಗಳನ್ನು ಗುರುತಿಸಲು ಡಿಡಿಡಿ.ಟ.ಜಟ.ಜ್ಞಿ ಹೆಸರಿನ ವೆಬ್‌ಸೈಟ್ ಕಲ್ಪಿಸಿದ್ದಾರೆ. ಜಿ.ಆರ್.ಪಿ. ಕಮಿಶನರ್ ನಿಕೇತ್ ಕೌಶಿಕ್ ಹೇಳುವಂತೆ ಪ್ರತೀದಿನ ಪ್ರಯಾಣಿಕರಿಗಾಗಿ ಜನಜಾಗೃತಿ ಅಭಿಯಾನ ನಡೆಸಲಾಗುತ್ತದೆ.

* * *

ಮಹಿಳಾ ಕೈದಿಗಳಿಗಾಗಿ ವಿಶೇಷ ಕಾರ್ಯಕ್ರಮ
 ಯಾರೂ ಹುಟ್ಟಿನಿಂದ ಅಪರಾಧಿಯಾಗಿರುವುದಿಲ್ಲ. ಸಾಮಾಜಿಕ, ಆರ್ಥಿಕ ಅಥವಾ ಕೌಟುಂಬಿಕ ಕಾರಣಗಳಿಂದ ಸರಳಿನ ಹಿಂದೆ ಕೂರುವ ಪರಿಸ್ಥಿತಿ ಕೆಲವರಿಗೆ ಬಂದಿರಬಹುದು. ಈ ಕೈದಿಗಳ ಮನಪರಿರ್ವತನೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಇದೀಗ ಜೈಲ್‌ನೊಳಗೂ ಮನರಂಜನೆ ಕಾರ್ಯಕ್ರಮಗಳಿಗೆ ಆದ್ಯತೆ ಸಿಗುತ್ತಿದೆ. ಹೀಗಾಗಿ ಇದೀಗ ಮಹಿಳಾ ಕೈದಿಗಳು ರ್ಯಾಂಪ್‌ನಲ್ಲಿ ಪಾಲ್ಗೊಂಡು ಸುದ್ದಿ ಮಾಡಿದ್ದಾರೆ. ಜೈಲ್ ಸಿಬ್ಬಂದಿ ನಾಟಕಗಳಲ್ಲಿ ಅಭಿನಯಿಸಿದ್ದು ಹಲವೆಡೆ ಕೇಳಿದ್ದೇವೆ. ಇದೀಗ ಪುಣೆಯ ಯೆರವಾಡ ಜೈಲ್‌ನಲ್ಲಿ ಮಹಿಳಾ ಕೈದಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿರುವುದು ಗಮನ ಸೆಳೆದಿದೆ. ಈ ಮಹಿಳಾ ಕೈದಿಗಳೀಗ ಗಾಯನ, ನೃತ್ಯ, ಫ್ಯಾಶನ್ ಶೋ, ಕಿರು ನಾಟಕ, ಸಂಗೀತ.... ಮುಂತಾದ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಅಧಿಕಾರಿಗಳೂ ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವೆಸ್ಟರ್ನ್ ರೀಜನ್‌ನ (ಜೈಲ್) ಡಿ.ಐ.ಜಿ. ಸ್ವಾತಿ ಸಾಠೆ ಅವರು ತಿಳಿಸಿದಂತೆ ಕಳೆದ ನಾಲ್ಕು ವರ್ಷಗಳಿಂದ ಮಹಿಳಾ ದಿವಸದ ಪ್ರಯುಕ್ತ ಮಾರ್ಚ್‌ನಲ್ಲಿ ಯೆರವಾಡ ಜೈಲ್‌ನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಮಹಿಳೆಯರನ್ನು ಕಳೆದ ಒಂದೂವರೆ ತಿಂಗಳಿನಿಂದ 6-7 ಎನ್‌ಜಿಒಗಳ ಸಹಾಯದಿಂದ ತಯಾರಿಗೊಳಿಸಲಾಗಿತ್ತು. ನಂತರ 25 ಮಹಿಳಾ ಕೈದಿಗಳು ಕಾರ್ಯಕ್ರಮ ನೀಡಲು ಸಿದ್ಧರಾದರು.

‘‘ಸಂಗೀತ - ನೃತ್ಯ ಮತ್ತು ಕಲೆಯ ಮೂಲಕ ಈ ಕೈದಿಗಳ ಪ್ರತಿಭೆ ಎಲ್ಲರಿಗೂ ಪರಿಚಯವಾಗಿದೆ. ಇದರಿಂದ ಈ ಕೈದಿಗಳ ಒಳಗಿನ ಅಶಾಂತಿ ಕೂಡಾ ಕಡಿಮೆಯಾಗುತ್ತದೆ. ಈ ಕೈದಿಗಳು ಮಾನಸಿಕವಾಗಿ ನಕಾರಾತ್ಮಕ ವಾತಾವರಣದಿಂದ ಸಕಾರಾತ್ಮಕ ವಾತಾವರಣಕ್ಕೆ ಬರುತ್ತಾರೆ. ಇದು ಕಾರ್ಯಕ್ರಮ ಆಯೋಜಿಸಿರುವ ಉದ್ದೇಶವಾಗಿದೆ’’ ಎಂದಿದ್ದಾರೆ ಜೈಲ್ ಆಡಳಿತದ ಎ.ಡಿ.ಜಿ. ಡಾ. ಭೂಷಣ್ ಕುಮಾರ್ ಉಪಾಧ್ಯಾಯ.
***

ಮುಂಬೈ ಯುನಿವರ್ಸಿಟಿಗೆ ನೂರರ ಪಟ್ಟಿಯಲ್ಲೂ ಸ್ಥಾನ ಇಲ್ಲ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಂತ್ರಿ ಪ್ರಕಾಶ್ ಜಾವಡೇಕರ್ ಅವರು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯನ್ನು ವಿಭಿನ್ನ ಮಾನದಂಡಗಳ ಆಧಾರದಲ್ಲಿ ತಯಾರಿಸಿದ್ದನ್ನು ಬಿಡುಗಡೆ ಮಾಡಿದ್ದಾರೆ.

ಇದರಲ್ಲಿ ಮುಂಬೈ ಯುನಿವರ್ಸಿಟಿ ತೀವ್ರ ಹಿನ್ನಡೆ ಕಾಣಿಸಿದೆ. ಮುಂಬೈ ವಿ.ವಿ. ಟಾಪ್ ಟೆನ್ ಪಟ್ಟಿಯಲ್ಲಿ ಹೋಗಲಿ, ನೂರರ ರ್ಯಾಂಕಿಂಗ್ ಪಟ್ಟಿಯಲ್ಲೂ ತನ್ನ ಹೆಸರು ದಾಖಲಿಸಲು ವಿಫಲವಾಗಿದೆ.

ಆದರೆ ಸಾವಿತ್ರಿಬಾಯಿ ಫುಲೆ ಪುಣೆ ಯುನಿವರ್ಸಿಟಿಯು ಟಾಪ್ 10ನಲ್ಲಿ ಸ್ಥಾನ ಪಡೆದಿದ್ದು ಗೌರವ ಉಳಿಸಿಕೊಂಡಿದೆ. ಇದೀಗ ಮುಂಬೈ ವಿವಿಯ ಗುಣಮಟ್ಟವನ್ನು ವೃದ್ಧಿಸಲು ಕುಲಪತಿ ಡಾ. ಸಂಜಯ್ ದೇಶ್‌ಮುಖ್ ಅವರ ಪ್ರಯತ್ನಗಳು ಫಲ ನೀಡಿಲ್ಲ ಎಂದು ಹೇಳಲಾಗುತ್ತಿದೆ. ರ್ಯಾಂಕಿಂಗ್‌ನ ಘೋಷಣೆಯ ನಂತರ ಯುನಿವರ್ಸಿಟಿಯ ಕೆಲಸ ಕಾರ್ಯಗಳ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ತೀವ್ರ ಸ್ವರೂಪದ ಪ್ರತಿಕ್ರಿಯೆಗಳನ್ನು ನೀಡಿವೆ.

ಮುಂಬೈ ವಿ.ವಿ. ವಿದ್ಯಾರ್ಥಿ ಸಂಘಟನೆಗಳು ಹೇಳುವಂತೆ ಎನ್.ಐ.ಆರ್.ಎಫ್.ನ ರ್ಯಾಂಕಿಂಗ್ ನೋಡಿದ ನಂತರ ಕುಲಪತಿಗಳ ಕೆಲಸ ಕಾರ್ಯಗಳ ಬಗ್ಗೆ ಪ್ರಶ್ನೆ ಚಿಹ್ನೆ ಹಾಕುವಂತಾಗಿದೆ. ಅವರು ಇನ್ನು ಆಡಂಬರವನ್ನು ಬಿಟ್ಟು ಯುನಿವರ್ಸಿಟಿ ಮತ್ತು ವಿದ್ಯಾರ್ಥಿಗಳ ಹಿತಕ್ಕಾಗಿ ಕೆಲಸ ಮಾಡಬೇಕಾಗಿದೆ. ಸ್ಟುಡೆಂಟ್ಸ್ ಲಾ ಕೌನ್ಸಿಲ್ ಅಧ್ಯಕ್ಷರು ಹೇಳುವಂತೆ ‘‘ಈ ರ್ಯಾಂಕಿಂಗ್ ಯುನಿವರ್ಸಿಟಿಗೆ ನಾಚಿಕೆ ಪಡುವಂತಾಗಿದೆ.

ಮಾಜಿ ಸೆನೆಟ್ ಸದಸ್ಯ ಸಂಜಯ್ ಹೇಳುವಂತೆ ‘‘ಅಮೆರಿಕ ಸಹಿತ ಕೆಲವು ದೇಶಗಳಲ್ಲಿ ವಿವಿಯ ಕೇಂದ್ರ ತೆರೆಯುವ ಮಾತನ್ನು ಕುಲಪತಿ ಹೇಳುತ್ತಾರೆ. ಆದರೆ ಅವರು ಮೊದಲು ಶಿಕ್ಷಣದ ಗುಣಮಟ್ಟದ ಮೇಲೆ ಗಮನ ನೀಡಬೇಕಾಗಿದೆ. ಕುಲಪತಿ ಯಾವ ಮುಖದಲ್ಲಿ ಅಮೆರಿಕದಲ್ಲಿ ವಿವಿಯ ಕೇಂದ್ರ ತೆರೆಯುವ ಕನಸು ಕಾಣುತ್ತಿದ್ದಾರೆ?’’ ಎಂದು ಕೇಳಿದ್ದಾರೆ.
* * *

ಶಿವಸೇನೆಯ ಶಾಸಕರೊಳಗೇ ಅಸಮಾಧಾನ!
ಶಿವಸೇನೆಯ ಶಾಸಕರ ನಡುವೆಯೇ ಈ ದಿನಗಳಲ್ಲಿ ಭಿನ್ನಮತಗಳು ಕಾಣಿಸಿಕೊಳ್ಳುತ್ತಿದ್ದು ಉದ್ಧವ್ ಠಾಕ್ರೆ ಇದನ್ನು ಬಗೆಹರಿಸಲು ಶಾಸಕರ ಬೈಠಕ್ ಕರೆಯಬೇಕಾಗಿ ಬಂತು. ಶಿವಸೇನೆಯ ಕೋಟಾದಡಿ ಮಂತ್ರಿಗಳಾಗಿರುವ ನಾಯಕರು ತಮ್ಮದೇ ಪಕ್ಷದ ಶಾಸಕರ ಕೆಲಸಗಳನ್ನು ಮಾಡುತ್ತಿಲ್ಲವಂತೆ. ಶಿವಸೇನೆಯದ್ದೇ ಶಾಸಕರ ಕೆಲಸಗಳನ್ನು ಮಾಡದ ಈ ಮಂತ್ರಿಗಳು ಜನರ ಕೆಲಸ ಏನು ಮಾಡುತ್ತಾರೆ? ಎಂದು ಶಿವಸೇನೆಯ ಈ ಶಾಸಕರು ತಮ್ಮ ಮಂತ್ರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಅರ್ಥಾತ್ ವಿಧಾನ ಪರಿಷತ್ ಮತ್ತು ವಿಧಾನ ಸಭೆಯ ಶಿವಸೇನಾ ಶಾಸಕರ ನಡುವೆ ಅಂತರ್‌ಕಲಹ ಹೆಚ್ಚಾಗಿದೆ. ಶಾಸಕರು ತಮ್ಮ ತಮ್ಮ ದೂರುಗಳನ್ನು ಉದ್ಧವ್ ಠಾಕ್ರೆಗೆ ನೀಡಿದ ನಂತರ ಅವರು ಎಪ್ರಿಲ್ 6ರಂದು ಭೈಠಕ್ ಕರೆದು ದೂರುಗಳನ್ನು ಆಲಿಸಿ ಮುಂದಿನ ಕ್ರಮಗಳನ್ನು ಕೈಗೊಂಡರು. ಇದೀಗ ಶಿವಸೇನೆಯು ತನ್ನ ಕೋಟಾದಡಿ ದೊರೆತಿರುವ ಮಂತ್ರಿಗಳಲ್ಲಿ ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ.
ಚುನಾವಣೆಯಲ್ಲಿ ಸೋತವರು ಅಥವಾ ಚುನಾವಣೆಯಲ್ಲಿ ನಿಲ್ಲದಂತಹ ವಿಧಾನ್ ಪರಿಷತ್‌ನ ಸದಸ್ಯರನ್ನು ಮಂತ್ರಿಯನ್ನಾಗಿಸಿ ತಮಗೆ ಅನ್ಯಾಯ ಮಾಡಲಾಗಿದೆ ಎಂದು ಹೆಚ್ಚಿನ ಶಿವಸೇನ ಶಾಸಕರ ಆರೋಪಗಳಾಗಿವೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ಸಂವಿಧಾನ -75