ಕೊಕೇನ್ ಮಾರಾಟ: ವಿದೇಶಿ ಪ್ರಜೆ ಸೆರೆ
Update: 2017-04-13 14:03 GMT
ಬೆಂಗಳೂರು,ಎ.13: ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನೈಜೀರಿಯ ದೇಶದ ಪ್ರಜೆಯೊಬ್ಬನನ್ನು ಬಂಧಿಸಿ 1ಲಕ್ಷ 25 ಸಾವಿರ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೈಜೀರಿಯಾದ ಲಾಗೋಸ್‌ನ ಮೈಕಲ್ ಆಕೋಫಾರ್(30) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿಯು ಹೆಣ್ಣೂರು ಬಂಡೆ ಬಸ್ ನಿಲ್ದಾಣದ ಬಳಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ,1ಲಕ್ಷ 25 ಸಾವಿರ ಮೌಲ್ಯದ 4 ಗ್ರಾಂ ಕೊಕೇನ್, 10 ಎಲ್‌ಎಸ್‌ಡಿ ಪೇಪರುಗಳು, ನಾಲ್ಕು ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.