ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಇಂದು ಪ್ರತಿಭಟನೆ
ಬೆಂಗಳೂರು, ಎ.19: ಕಲಬುರ್ಗಿ ಕೇಂದ್ರೀಯ ವಿವಿಯಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕಠಿಣ ಶಿಕ್ಷೆ ಹಾಗೂ ರಾಜ್ಯದ ವಿವಿಧ ವಿವಿಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ ಶೈಕ್ಷಣಿಕ ಪೂರಕ ವಾತಾವರಣ ನಿರ್ಮಿಸಲು ಒತ್ತಾಯಿಸಿ ಎಸ್‌ಎಫ್‌ಐ ವತಿಯಿಂದ ಎ.20ರಂದು ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗಳ ಸಾವು ಮಾಸುವ ಮುನ್ನವೇ ರಾಜ್ಯದಲ್ಲೂ ದಲಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಬೇಸತ್ತು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಎಸ್‌ಎಫ್‌ಐ ಮುಖಂಡ ಗುರುರಾಜ್ ದೇಸಾಯಿ ವಿಷಾದಿಸಿದ್ದಾರೆ.
ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಆನಂದ ಶಕ್ತಿರಾಜ್ ಎಂಬ ವಿದ್ಯಾರ್ಥಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ. ಇದರ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಿತ್ತು. ಈ ಪ್ರಕರಣ ಅಂತ್ಯ ಕಾಣುವ ಮುನ್ನವೇ ದಲಿತ ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಆತ್ಮಹತ್ಯೆ ಶರಣಾಗಿರುವುದು ಆತಂಕವನ್ನು ಮೂಡಿಸಿದೆ ಎಂದು ಅವರು ತಿಳಿಸಿದರು.
ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿಗೆ ಮಾರ್ಗದರ್ಶಕರಾಗಿದ್ದ ಸಿದ್ದಪ್ಪ ವೈವಾ ಅಂಕಗಳನ್ನು ನೀಡಲು 4 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಇಷ್ಟು ಮೊತ್ತದ ಹಣವನ್ನು ಕೊಡಲಾಗದೆ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ಈ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.