ಮುಸ್ಲಿಂ ವೈಯಕ್ತಿಕ ಕಾನೂನು ಜಾಗೃತಿ ಅಭಿಯಾನ: ಯೂಸುಫ್ ಕುಂಞಿ
ಬೆಂಗಳೂರು, ಎ.19: ಮುಸ್ಲಿಂ ವೈಯಕ್ತಿಕ ಕಾನೂನು ಕುರಿತು ಇತರರಲ್ಲಿ ಇರುವ ಅಪನಂಬಿಕೆಗಳನ್ನು ದೂರ ಮಾಡಲು ಹಾಗೂ ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎ.23ರಿಂದ ಮೇ 7ರವರೆಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಕುಂಞಿ ತಿಳಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿನ ಬಿಫ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಜಾಗೃತಿ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದರು.
ಮುಸ್ಲಿಂ ವೈಯಕ್ತಿಕ ಕಾನೂನು ಏನು, ಅದರ ಬಗ್ಗೆ ಇತರರಲ್ಲಿ ಇರುವಂತಹ ಅಪನಂಬಿಕೆಗಳನ್ನು ದೂರ ಮಾಡುವುದು ಹಾಗೂ ಮುಸ್ಲಿಮರಲ್ಲಿ ವೈಯಕ್ತಿಕ ಕಾನೂನಿನ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕ ಸಂಪರ್ಕ ಸಭೆಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ಮೊಹಲ್ಲಾಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.
ಈ ಅಭಿಯಾನವನ್ನು ಸಮರ್ಥವಾಗಿ ಮುಂದುವರೆಸಲು 400ಕ್ಕೂ ಹೆಚ್ಚು ಭಾಷಣಕಾರರು ಸಿದ್ಧವಾಗಿದ್ದು, ಈ ಪೈಕಿ ಮಹಿಳೆಯರು ಇದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ಸಾಹಿತ್ಯ, ಕಿರುಹೊತ್ತಿಗೆಗಳನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮುದ್ರಿಸಿ ಹಂಚಲಾಗುವುದು. ಅಲ್ಲದೆ, ಈ ಸಂಬಂಧ ಶುಕ್ರವಾರದಂದು ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ವೇಳೆ ಮಾಡಬೇಕಾದ ಪ್ರವಚನವನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ಏಕರೂಪ ನಾಗರಿಕ ಸಂಹಿತೆ: ಏಕರೂಪ ನಾಗರಿಕ ಸಂಹಿತೆ ಕೇವಲ ಮುಸ್ಲಿಮರಿಗಷ್ಟೆ ಸಂಬಂಧಿಸಿದಲ್ಲ. ದಲಿತರು ಹಾಗೂ ಕೆಲ ಮುಂದುವರೆದ ಸಮುದಾಯಗಳು ಇದರ ವಿರುದ್ಧವಿದ್ದಾರೆ. ಅಂತಹ ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿ ನಾವು ಮುಂದುವರೆಯುತ್ತಿದ್ದೇವೆ ಎಂದು ಯೂಸುಫ್ ಕುಂಞಿ ತಿಳಿಸಿದರು.
ಈ ಅಭಿಯಾನದಡಿಯಲ್ಲಿ ಪ್ರತಿಯೊಬ್ಬ ಪ್ರಮುಖರು ಕನಿಷ್ಠ 100 ಮಂದಿಯನ್ನು ಭೇಟಿ ಮಾಡಿ ಚರ್ಚೆ ನಡೆಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಎ.29ರಂದು ಬೆಂಗಳೂರಿನಲ್ಲಿ ಅಮೀರೆ ಶರಿಯತ್ ವೌಲಾನ ಮುಫ್ತಿ ಅಶ್ರಫ್ ಅಲಿ ಅಧ್ಯಕ್ಷತೆಯಲ್ಲಿ ವಕೀಲರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರ ವಕೀಲ ಝಫರಿಯಾ ಜಿಲಾನಿ ಸೇರಿದಂತೆ ಅನೇಕ ನ್ಯಾಯವಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಮೇ 5ರಂದು ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ಉಮ್ರಿ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಭಿಯಾನದ ಸಂಚಾಲಕ ವೌಲಾನ ವಹಿದುದ್ದೀನ್ ಖಾನ್ ಉಮ್ರಿ, ಅಂಜುಮನ್ ಎ ಖುದ್ದಾಮುಲ್ ಮುಸ್ಲಿಮೀನ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.