ಬ್ರಾಹ್ಮಣಶಾಹಿ-ಕಾರ್ಪೊರೇಟ್ ಶಕ್ತಿ ಒಂದೇ ನಾಣ್ಯದ ಎರಡು ಮುಖ: ಡಾ.ಪ್ರದೀಪ್ ರಮಾವತ್

Update: 2017-04-23 14:04 GMT

ಬೆಂಗಳೂರು, ಎ.23: ಬ್ರಾಹ್ಮಣಶಾಹಿ ಹಾಗೂ ಕಾರ್ಪೊರೇಟ್ ಶಕ್ತಿಗಳು ಒಂದು ನಾಣ್ಯದ ಎರಡು ಮುಖಗಳಾಗಿದ್ದು, ದೇಶದ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದು ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ಉಪನಿರ್ದೇಶಕ ಡಾ.ಪ್ರದೀಪ್ ರಮಾವತ್ ತಿಳಿಸಿದ್ದಾರೆ.

ದಲಿತ ಹಕ್ಕುಗಳ ಸಮಿತಿ, ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಸಮಿತಿ ನಗರದ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಮಾಜವಾದಿ ಕ್ರಾಂತಿ ಮತ್ತು ಸಾಮಾಜಿಕ ನ್ಯಾಯ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ರಾಹ್ಮಣಶಾಹಿ ಹಾಗೂ ಕಾರ್ಪೊರೇಟ್ ಶಕ್ತಿಗಳು ಅಗ್ರಹಾರಗಳನ್ನು ರೂಪಿಸಿಕೊಂಡು ತಮಗೆ ಬೇಕಾದ ರೀತಿಯಲ್ಲಿ ದೇಶದ ನೀತಿಗಳನ್ನು ರೂಪಿಸಿ, ಸ್ವಾರ್ಥ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುತ್ತಿವೆ ಎಂದು ಹೇಳಿದರು.

ಸಂಘಪರಿವಾರದ ಮುಖವಾಣಿಗಳಾದ ‘ಪಾಂಚಜನ್ಯ’ ಹಾಗೂ ‘ಆರ್ಗನೈಝ್’ ಪತ್ರಿಕೆಗಳು ಅಂಬೇಡ್ಕರ್ ಜನ್ಮದಿನಾಚರಣೆಯ ಪ್ರಯುಕ್ತ ಬಂಡವಾಳಶಾಹಿ ಹಾಗೂ ಕಾರ್ಪೊರೇಟ್ ಶಕ್ತಿಗಳಿಗೆ ಪೂರಕವಾಗಿ ಅಂಬೇಡ್ಕರ್ ಚಿಂತನೆಗಳನ್ನು ತಿರುಚುವುದಕ್ಕಾಗಿ ವಿಶೇಷ ಸಂಚಿಕೆಗಳನ್ನು ತರುತ್ತವೆ. ಈ ಬಗ್ಗೆ ದಲಿತ ಸಮುದಾಯ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ನಮ್ಮ ವಿಶ್ವವಿದ್ಯಾಲಯಗಳು ಕೇವಲ ಕಾರ್ಪೊರೇಟ್ ಶಕ್ತಿಗಳ ವ್ಯವಹಾರಕ್ಕೆ ಅಗತ್ಯವಾದ ಶಿಕ್ಷಣವನ್ನು ಮಾತ್ರ ಕಲಿಸುತ್ತಿವೆ ಹೊರತು, ದೇಶದ ಆಗು-ಹೋಗುಗಳನ್ನು ಸಮಗ್ರವಾಗಿ ಗ್ರಹಿಸುವಂತಹ, ಅಭಿವೃದ್ಧಿಯತ್ತ ಕೊಂಡೊಯ್ಯವಿಕೆಗೆ ಅಗತ್ಯವಾದ ಶಿಕ್ಷಣವನ್ನು ನೀಡುತ್ತಿಲ್ಲ. ಇದರಿಂದಾಗಿ ದೇಶದ ಯುವ ಶಕ್ತಿ ವ್ಯರ್ಥ್ಯವಾಗಿ ಪೋಲಾಗುತ್ತಿದೆ. ದೇಶದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕೋಮುವಾದಿ ಶಕ್ತಿಗಳು ಇದನ್ನೇ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಎಲ್ಲೆಲ್ಲೂ ಗಲಭೆಗಳನ್ನು ಸೃಷ್ಟಿಸಿ ದೇಶದಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿದೆ. ಇಂತಹ ಸ್ಥಿತಿಯಲ್ಲಿರುವ ಸಮಾಜದಲ್ಲೂ ದಲಿತ, ಪ್ರಗತಿಪರ ಚಳವಳಿಗಳು ನಮ್ಮ ನಡುವೆ ಆಶಾಭಾವನೆಯನ್ನು ಮೂಡಿಸಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಧ್ಯಾಪಕಿ ಡಾ.ಅನುಸೂಯ ಕಾಂಬ್ಳೆ ಮಾತನಾಡಿದರು.

ಈ ವೇಳೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಮತ್ತಿತರ ದಲಿತ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News