ಡಾ.ರಾಜ್ ಜೀವನದ ತತ್ವಾದರ್ಶಗಳು ಮುಂದಿನ ವರ್ಷದಿಂದ ಪಠ್ಯ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಎ. 24: ಕನ್ನಡ ನಾಡಿನ ಖ್ಯಾತ ನಟ ಡಾ.ರಾಜ್‌ಕುಮಾರ್‌ರ ಜೀವನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮುಂಬರುವ ಶೈಕ್ಷಣಿಕ ವರ್ಷದಿಂದ ಪಠ್ಯಗಳಲ್ಲಿ ಅಳವಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ವರನಟ ಡಾ.ರಾಜ್‌ಕುಮಾರ್‌ರ 89ನೆ ಜನ್ಮದಿನಾಚರಣೆ ಅಂಗವಾಗಿ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿಗೆ ನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರೋದ್ಯಮ ಲೋಕದಲ್ಲಿ ಮಿಂಚಿದ ಧೃವತಾರೆ ಡಾ.ರಾಜ್‌ಕುಮಾರ್. ಅವರ ಜೀವನ ಆದರ್ಶಗಳು ಇಂದಿನ ಪೀಳಿಗೆಗೆ ಸಂದೇಶವಾಗಿದೆ. ಹೀಗಾಗಿ ಅವರ ಜೀವನದ ಮೌಲ್ಯಗಳನ್ನು ಯುವ ಸಮುದಾಯಕ್ಕೆ ಪರಿಚಯಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ದಾದಾ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಕಲಾಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಅವರ ಕುಟುಂಬದವರಿಗೆ ಸರಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಡಾ.ರಾಜ್‌ಕುಮಾರ್ ಪುತ್ರ ಶಿವರಾಜ್ ಕುಮಾರ್ ಮಾತನಾಡಿ, ರಾಜ್‌ಕುಮಾರ್ ಮಕ್ಕಳಾಗಿ ಜನಿಸಿದ ನಾವು ಧನ್ಯರಾಗಿದ್ದೇವೆ. ನಾಡಿನ ಜನರು ನಮ್ಮ ತಂದೆಯ ಮೇಲೆ ಇಟ್ಟಿರುವ ಅಭಿಮಾನಕ್ಕೆ ಋಣಿಗಳು. ಸರಕಾರ ಕಲಾವಿದನಿಗೆ ಇಷ್ಟು ದೊಡ್ಡ ಗೌರವ ನೀಡುತ್ತಿರುವುದಕ್ಕೆ ನಮ್ಮ ಕುಟುಂಬ ಆಭಾರಿಯಾಗಿದೆ ಎಂದರು.
ನಟ ಪುನೀತ್‌ರಾಜ್‌ಕುಮಾರ್ ಮಾತನಾಡಿ, ಅಪ್ಪನವರ ಬದುಕು ನಮಗೆ ಜೀವನದಲ್ಲಿ ಸ್ಪೂರ್ತಿಯಾಗಿದೆ. ಅವರ ಶಿಸ್ತು, ಸಂಯಮ ಯಶಸ್ಸಿಗೆ ಕಾರಣವಾಗಿತ್ತು. ಅದನೇ ನಾವಿಂದು ಅಳವಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಈ ವೇಳೆ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ರಾಘವೇಂದ್ರರಾಜ್ ಕುಮಾರ್ ಹಾಗೂ ಡಾ.ರಾಜ್ ಕುಟುಂಬದ ಎಲ್ಲಾ ಪ್ರಮುಖರು ಹಿರಿ-ಕಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ವರ್ಗದವರು ಇದ್ದರು. ಹಾಗೂ ನಾಡಿನ ವಿವಿಧ ಮೂಲೆಗಳಿಂದ ಅಭಿಮಾನಿಗಳ ಜನಸಾಗರವೇ ಸೇರಿದ್ದರಿಂದ ನೂಕು ನುಗ್ಗಲಾಯಿತು.
ರಾಜ್ಯ ಸರಕಾರ ಅಪ್ಪಾಜಿಯ ಜೀವನದ ತತ್ವ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಪಠ್ಯದಲ್ಲಿ ಅಳವಡಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹವಾದುದು. ಈ ವೇಳೆ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಸಿಡಿ ಬಿಡುಗಡೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ‘ಟಗರು’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುವುದು.
-ಶಿವರಾಜ್‌ಕುಮಾರ್, ರಾಜ್‌ಕುಮಾರ್‌ರ ಪುತ್ರ