ಬದುಕಿ ಬರಲಿಲ್ಲ ಕಾವೇರಿ
Update: 2017-04-24 18:22 GMT
ಬೆಳಗಾವಿ, ಎ.24: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಕಾವೇರಿಯನ್ನು ರಕ್ಷಣಾ ಸಿಬ್ಬಂದಿಯ ತಂಡ 54 ಗಂಟೆಗಳ ಕಾರ್ಯಾಚರಣೆಯ ನಂತರ ರಾತ್ರಿ11:34ರ ಸುಮಾರಿಗೆ ಹೊರತೆಗೆದಿದ್ದು, ಬಾಲಕಿ ಮೃತಪಟ್ಟಿದ್ದಾಳೆ.
ಸೋಮವಾರ ಅಂತಿಮ ಹಂತದ ಕಾರ್ಯಾಚರಣೆ ನಡೆದಿದ್ದು, ರಕ್ಷಣಾ ಸಿಬ್ಬಂದಿಯ ಸತತ ಕಾರ್ಯಾಚರಣೆಯ ನಂತರ ಕೊನೆಗೂ ಬಾಲಕಿಯನ್ನು ಹೊರತೆಗೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ 6 ವರ್ಷದ ಕಾವೇರಿ ಕೊಳವೆ ಬಾವಿಗೆ ಬಿದ್ದಿದ್ದಳು. 2 ದಿನಗಳ ಕಾಲ ಕಾರ್ಯಾಚರಣೆ ನಡೆಸಿದರೂ ಬಾಲಕಿಯನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಬಾಲಕಿಯ ಚಲನವಲನಗಳನ್ನು ಗಮನಿಸಲು ಸಿಸಿ ಕ್ಯಾಮರಾವನ್ನು ಇಳಿಬಿಡಲಾಗಿತ್ತು. ಆಳದಲ್ಲಿ ಸಿಲುಕಿದ್ದ ಕಾವೇರಿ ಆಮ್ಲಜನಕದ ಕೊರತೆಯಿಂದಾಗಿ ಬದುಕಿ ಉಳಿಯುವ ಸಾಧ್ಯತೆ ಕ್ಷೀಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಕೊನೆಗೂ 54 ಗಂಟೆಗಳ ಸತತ ಕಾರ್ಯಾಚರಣೆಯಿಂದ ಕಾವೇರಿಯ ಮೃತದೇಹವನ್ನು ಹೊರತೆಗೆಯಲು ಸಾಧ್ಯವಾಗಿದೆ.