ಬಿಬಿಎಂಪಿ ಸಭೆಗೂ ಮುನ್ನ ರಾಷ್ಟ್ರಗೀತೆ ಕಡ್ಡಾಯ: ಮೇಯರ್ ಪದ್ಮಾವತಿ
ಬೆಂಗಳೂರು, ಎ.26: ಬಿಬಿಎಂಪಿ ಮಾಸಿಕ ಸಭೆ ಆರಂಭವಾಗುವ ಮುನ್ನ ಇನ್ನು ಮುಂದೆ ರಾಷ್ಟ್ರಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಗುವುದು ಎಂದು ಮೇಯರ್ ಪದ್ಮಾವತಿ ಅವರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿದರು.
ಬುಧವಾರ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಮಾಸಿಕ ಸಭೆಯಿಂದಲೇ ರಾಷ್ಟ್ರಗೀತೆ ಹಾಡುವ ಸಂಬಂಧ ಆದೇಶವನ್ನು ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುಹಮ್ಮದ್ ರಿಜ್ವಾನ್ ಮಾತನಾಡಿ, ಪಾಲಿಕೆ ಸಭೆ ಆರಂಭವಾಗುವ ಮುನ್ನ ರಾಷ್ಟ್ರಗೀತೆಯನ್ನು ಹಾಡುವ ಸಂಪ್ರದಾಯ ಆರಂಭಿಸುವಂತೆ ವಿಷಯ ಪ್ರಸ್ತಾಪಿಸಿದಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರೆನ್ನದೆ ಎಲ್ಲರೂ ಮೇಜುಕುಟ್ಟಿ ಸ್ವಾಗತಿಸಿದರು. ಹಾಗೂ ಸರಕಾರಿ ಮತ್ತು ಬಿಬಿಎಂಪಿ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವ ಸಂಪ್ರದಾಯವನ್ನು ಆರಂಭಿಸುವಂತೆ ಮನವಿ ಮಾಡಿದರು.
ಈ ವೇಳೆ ಬಿಜೆಪಿ ಹಿರಿಯ ನಾಯಕಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ವಿಮಲಾ ಗೌಡರಿಗೆ ಪಾಲಿಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೇಯರ್ ಪದ್ಮಾವತಿ, ಆಡಳಿತ ಪಕ್ಷದ ನಾಯಕ ಮುಹಮ್ಮದ್ ರಿಜ್ವಾನ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಬಿಜೆಪಿ ಸದಸ್ಯ ಸತ್ಯನಾರಾಯಣ, ಉಮೇಶ್ ಶೆಟ್ಟಿ ಮತ್ತಿತರ ಸದಸ್ಯರು ಮೃತರ ಗುಣಗಾನ ಮಾಡಿದರು. ನಂತರ ಮೃತರ ಗೌರವಾರ್ಥ ಸದಸ್ಯರು ಒಂದು ನಿಮಿಷ ಮೌನ ಆಚರಿಸಿದರು.