ವರಿಷ್ಠರಿಗೆ ದೂರು ನೀಡಲು ಬಿಎಸ್‌ವೈ ದಿಲ್ಲಿಗೆ ದೌಡು

Update: 2017-04-28 17:57 GMT

ಬೆಂಗಳೂರು, ಎ. 28: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ವೈಷಮ್ಯ, ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಇದೀಗ ವರಿಷ್ಠರ ಅಂಗಳಕ್ಕೆ ತಲುಪಿದ್ದು, ರಾಷ್ಟ್ರೀಯ ಮುಖಂಡರು ಯಾವ ಕ್ರಮ ಕೈಗೊಳ್ಳಲಿದ್ದಾರೆಂಬ ಕುತೂಹಲ ಸೃಷ್ಟಿಸಿದೆ.

ಪಕ್ಷದಲ್ಲಿನ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ದೂರು ನೀಡುವ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಂಜೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಬಸವ ಪುರಸ್ಕಾರ ಮತ್ತು ವಚನ ಸಂಪುಟ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ ಎರಡು ದಿನಗಳ ಕಾಲ ಹೊಸದಿಲ್ಲಿಯಲ್ಲಿಯೇ ಇರಲಿದ್ದಾರೆ. ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾರನ್ನು ಭೇಟಿ ಮಾಡಲಿದ್ದಾರೆ.

ಈಶ್ವರಪ್ಪ ತಲೆದಂಡಕ್ಕೆ ಪಟ್ಟು: ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನದಿಂದ ಈಶ್ವರಪ್ಪ ಅವರನ್ನು ಕೂಡಲೇ ಕಿತ್ತುಹಾಕಬೇಕು. ಆ ಮೂಲಕ ಪಕ್ಷದಲ್ಲಿನ ಭಿನ್ನಮತ ಸೃಷ್ಟಿಸಲು ಕಸರತ್ತು ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಟಕ್ಕೆ ತೆರೆ ಎಳೆಯಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ.

‘ಸಂಘಟನೆ ಉಳಿಸಿ’ ಸಮಾವೇಶದ ನೆಪದಲ್ಲಿ ಪಕ್ಷ ವಿರೋಧಿ ಚುಟುವಟಿಕೆಯಲ್ಲಿ ತೊಡಗಿರುವ ಸಂತೋಷ್, ಮೇಲ್ಮನೆ ಸದಸ್ಯ ಭಾನುಪ್ರಕಾಶ್, ಸೊಗಡು ಶಿವಣ್ಣ, ಸೋಮಣ್ಣ ಬೇವಿನಮರದ, ರವೀಂದ್ರನಾಥ್ ಸೇರಿದಂತೆ ಇನ್ನಿತರ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಎಸ್‌ವೈ ವರಿಷ್ಠರನ್ನು ಆಗ್ರಹಿಸಲಿದ್ದಾರೆ.

ಈಶ್ವರಪ್ಪ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ಕಾರ್ಯತಂತ್ರ ರೂಪಿಸಿರುವ ಯಡಿಯೂರಪ್ಪ, ಶುಕ್ರವಾರ ಬೆಳಗ್ಗೆಯಿಂದಲೇ ತಮ್ಮ ನಿವಾಸದಲ್ಲಿ ಮೇಲ್ಮನೆ ಸದಸ್ಯರು ಹಾಗೂ ತನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ, ಈಶ್ವರಪ್ಪ ಸ್ಥಾನಕ್ಕೆ ಬಿಜೆಪಿ ಉಪ ನಾಯಕ ಕೆ.ಬಿ.ಶ್ಯಾಣಪ್ಪ ಅವರನ್ನು ಕೂರಿಸಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ವರಿಷ್ಠರಿಗೆ ವರದಿ: ಭಿನ್ನರ ಸಮಾವೇಶದಲ್ಲಿ ಈಶ್ವರಪ್ಪನವರ ಹೇಳಿಕೆ, ಸಮಾವೇಶದ ನಿರ್ಣಯಗಳು ಸೇರಿದಂತೆ ಎಲ್ಲ ವಿವರಗಳನ್ನು ಸಂಗ್ರಹಿಸಲಾಗಿದೆ. ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ಆದೇಶವನ್ನು ಧಿಕ್ಕರಿಸಿ ಭಿನ್ನರ ಸಭೆ ನಡೆಸಲಾಗಿದೆ. ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಸಾಧ್ಯತೆಗಳಿವೆ.

ಬೆರಳೆಣಿಕೆಯಷ್ಟು ಬೆಂಬಲಿಗರ ಜೊತೆ ಸೇರಿ ‘ಸಂಘಟನೆ ಉಳಿಸಿ’ ಸಮಾವೇಶದ ನೆಪದಲ್ಲಿ ವರಿಷ್ಠರಿಗೆ ಮೇ 10ರ ಗಡುವು ನೀಡಿರುವುದು ಸೇರಿದಂತೆ ಎಲ್ಲ ಭಿನ್ನರ ಚಟುವಟಿಕೆಗ ಬಗ್ಗೆ 10 ಪುಟಗಳ ವರದಿ ಸಿದ್ಧಪಡಿಸಿದ್ದು, ವರಿಷ್ಠರಿಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ವರಿಷ್ಠರ ಸೂಚನೆಯಂತೆ ಈಗಾಗಲೇ ಪದಾಧಿಕಾರಿಗಳ ಪಟ್ಟಿ ಬದಲಾವಣೆ, ನಾಲ್ಕೈದು ಜಿಲ್ಲೆಗಳ ಅಧ್ಯಕ್ಷರು. ಮಹಿಳೆ ಮೋರ್ಚಾ ಸೇರಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಆದರೂ, ಪಕ್ಷದಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟುಪಕ್ಷ ವಿರೋಧಿ ಚಟುವಟಿಕೆ ನಡೆಸಲಾಗಿದೆ ಎಂದು ವರಿಷ್ಠರಿಗೆ ಮಾಹಿತಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News