ಬಿಜೆಪಿ ಪಕ್ಷವನ್ನೂ, ರಾಜಕಾರಣವನ್ನೂ ಆರೆಸ್ಸೆಸ್ ನಿಯಂತ್ರಿಸುತ್ತಿದೆ: ದಿನೇಶ್‌ ಗುಂಡೂರಾವ್

Update: 2017-04-28 18:00 GMT

ಬೆಂಗಳೂರು, ಎ.28: ಆರೆಸ್ಸೆಸ್ ಸ್ವಯಂಸೇವ ಸಂಘಟನೆ ಎಂದು ಹೇಳಿಕೊಂಡು, ರಾಜಕೀಯ ಮತ್ತು ಬಿಜೆಪಿ ಪಕ್ಷವನ್ನೂ ನಿಯಂತ್ರಣ ಮಾಡುತ್ತಿದೆ. ಅಲ್ಲದೆ, ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಅವರಿಗೂ ಅನುಮಾನ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಇಂದಿಲ್ಲಿ ಹೇಳಿದ್ದಾರೆ.

ನಗರದ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಅಧಿಕಾರದ ದಾಹ ಜಾಸ್ತಿಯಾಗಿದೆ. ಹೀಗಾಗಿಯೇ, ದಿನನಿತ್ಯ ಕಚ್ಚಾಟ ನಡೆಯುತ್ತಿದೆ. ಇದರ ಹಿಂದೆ ಕಾಂಗ್ರೆಸ್‌ನ ಕೈವಾಡವಿದೆ ಎನ್ನುವುದು ಸತ್ಯಕ್ಕೆ ದೂರ. ಬಿಜೆಪಿಯ ಜಗಳ ಬೀದಿಗೆ ಬಂದಿದೆ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ಪರಸ್ಪರ ಕೆಟ್ಟ ಮಾತುಗಳ ಕಾದಾಟಕ್ಕಿಳಿದಿರುವುದರಿಂದ ರಾಜ್ಯದ ಜನರು ಛೀ, ಥೂ ಎನ್ನುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿಯಲ್ಲಿ ಯಾವುದೇ ಒಳ ಜಗಳವಿಲ್ಲ. ಇದಕ್ಕೆ ಉಪಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದ ಅವರು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಎಐಸಿಸಿಗೆ ಬಿಟ್ಟಿದ್ದು, ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನತೆಯ ಆಶೀರ್ವಾದವೇ ಮಿಷನ್ ಆಗಿದೆ. ಆದರೆ, ಬಿಜೆಪಿ 150 ನಮ್ಮ ಮಿಷನ್ ಎಂದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಮಿಷನ್-150 ಎಂದು ಹೇಳಿದ್ದರೂ, ಕರ್ನಾಟಕದಲ್ಲಿ ಯಶಸ್ವಿಯಾಗುವುದಿಲ್ಲ. ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಿಗೆ ಪ್ರಜೆಗಳು ಬೆಂಬಲ ಸೂಚಿಸಿದ್ದಾರೆ ಎಂದರು.

ಭ್ರಷ್ಟಾಚಾರ ಇಲ್ಲ: ಹೊಸದಿಲ್ಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ಸಮೀಕ್ಷೆಯಲ್ಲಿ ಭ್ರಷ್ಟಾಚಾರದಲ್ಲಿ ಕರ್ನಾಟಕ್ಕೆ ಅಗ್ರಸ್ಥಾನ ನೀಡಿದ್ದಾರೆ. ಜತೆಗೆ ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಲಾಗಿದೆ. ಆದರೆ, ಉತ್ತರಭಾರತದಲ್ಲಿ ಭ್ರಷ್ಟಾಚಾರ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಲೋಕಾಯುಕ್ತ ಹಾಗೂ ಎಸಿಬಿ, ಭ್ರಷ್ಟಾಚಾರ ತಡೆಯುವಲ್ಲಿ ಯಶಸ್ವಿಯಾಗಿವೆ. ಅಲ್ಲದೆ, ಕಾಂಗ್ರೆಸ್ ಮುಖಂಡರ ವಿರುದ್ಧವೂ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲು ಮಾಡಲಾಗಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

‘ತಟ್ಟೆ ಮೇಲೆ ಬಹುಮಾನ ಬಂದರೆ ಬಿಡುವುದಿಲ್ಲ’
ಬಿಜೆಪಿ ಕಚ್ಚಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ ಸಿಗಲಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿನೇಶ್‌ಗುಂಡೂರಾವ್, ನಮಗೆ ಯಾರಾದರೂ ತಟ್ಟೆ ಮೇಲೆ ಬಹುಮಾನ ತಂದು ಕೊಟ್ಟರೆ ಸ್ವೀಕಾರ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News