ಮಲತಾಯಿ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವಿಲ್ಲ: ಹೈಕೋರ್ಟ್ ಆದೇಶ
ಬೆಂಗಳೂರು, ಮೇ 2: ಮಲತಾಯಿ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ಸಂಬಂಧ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಆದೇಶವನ್ನು ಪ್ರಶ್ನಿಸಿ 41 ವರ್ಷದ ಬೆಂಗಳೂರಿನ ವೈ.ಆರ್.ರಘು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರ ವಿಭಾಗಿಯ ಪೀಠ ಈ ಆದೇಶ ನೀಡಿ, ಅರ್ಜಿಯನ್ನು ವಜಾಗೊಳಿಸಿತು.
ಕಾನೂನು ಪ್ರಕಾರ ತಂದೆ ತಾಯಿಗೆ ಮಕ್ಕಳು ಜೈವಿಕವಾಗಿ ಜನಿಸಿದವರಿಗೆ ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪರಿಗಣಿಸಬಹುದೇ ಹೊರತು, ಮಲತಾಯಿ ಮಕ್ಕಳಿಗಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕರ್ನಾಟಕ ನಾಗರಿಕ ಸೇವಾ(ಅನುಕಂಪದ ನೇಮಕ) ನಿಯಮ 1996ರ ಪ್ರಕಾರ ದತ್ತು ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೇಳಲು ಯಾವುದೇ ಹಕ್ಕಿಲ್ಲ. ನಿಯಮ 2(1)(ಎ)ರಲ್ಲಿ ಹೇಳಿರುವಂತೆ ದತ್ತು ಪಡೆದ ಮಗ,ಮಗಳು ಅಥವಾ ಮಲತಾಯಿಯ ಮಕ್ಕಳಿಗೆ, ಅವರ ತಂದೆ ತಾಯಿ ಸೇವೆಯಲ್ಲಿದ್ದಾಗಲೇ ಮೃತಪಟ್ಟರೆ ಅಂತಹವರಿಗೆ ನಿಯಮದ ಪ್ರಕಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ದೊರಕುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತ್ತು.
ಸುಜಾತಾ ಎಂಬುವರು ಸರಕಾರಿ ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದರು. ಮಲತಾಯಿಯಾದ ಸುಜಾತಾ ಅವರ ಹುದ್ದೆ ನೀಡುವಂತೆ ರಘು ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕಾಗಿ ಸರಕಾರದಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ಸರಕಾರ ತಿರಸ್ಕರಿಸಿತ್ತು.