ಕಾನೂನು ಬಾಹಿರ ಆರ್ಥಿಕ ವ್ಯವಹಾರಕ್ಕೆ ತಡೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮೇ 2: ಕಾನೂನುಬಾಹಿರವಾಗಿ ಆರ್ಥಿಕ ವ್ಯವಹಾರ ನಡೆಸುವ ಸಂಘ, ಸಂಸ್ಥೆಗಳ ವಿರುದ್ಧ ಜನತೆಗೆ ಜಾಗೃತಿ ಮೂಡಿಸುವ ಸಲುವಾಗಿ ಐ-ವಿವೇಕ್ ವೆಬ್‌ಸೈಟ್‌ನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಆರ್ಥಿಕ ಇಲಾಖೆ ಸಿದ್ಧಪಡಿಸಿದ್ದ ‘ಐ-ವಿವೇಕ್’ ವೆಬ್‌ಸೈಟ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ಕೆಲವು ಸಂಘ-ಸಂಸ್ಥೆಗಳು ಕಾನೂನು ಬಾಹಿರವಾಗಿ ಆರ್ಥಿಕ ವ್ಯವಹಾರ ನಡೆಸಿ ಜನತೆಯ ಹಣವನ್ನು ದೋಚುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಂತಹ ಸಂಘ, ಸಂಸ್ಥೆಗಳ ಕುರಿತು ಜನತೆ ಮಾಹಿತಿ ನೀಡುವ ಸಲುವಾಗಿ ಐ-ವಿವೇಕ ವೆಬ್‌ಸೈಟ್‌ನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಅಗ್ರಿಗೋಲ್ಡ್ ಕಂಪೆನಿ ಜನತೆಯ ಸಾಕಷ್ಟು ಸಂಪತ್ತನ್ನು ದೋಚಿದೆ. ವಿನಿವಿಂಕ್ ಶಾಸ್ತ್ರಿಯಂತೆ ಜನರಿಗೆ ಮೋಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಇಂತವರ ಕುರಿತು ಜನತೆಗೆ ಮೊದಲೇ ಮಾಹಿತಿ ನೀಡುವ ಮೂಲಕ ಜನತೆಯನ್ನು ರಕ್ಷಿಸಬೇಕಾಗಿದೆ. ಹೀಗಾಗಿ ಐ-ವಿವೇಕ್ ವೆಬ್‌ಸೈಟ್‌ನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು ಈ ವೆಬ್‌ಸೈಟ್ ಮೂಲಕ ಕಾನೂನು ಬಾಹಿರ ವ್ಯವಹಾರ ನಡೆಸುವ ಸಂಘ, ಸಂಸ್ಥೆ ಹಾಗೂ ವ್ಯಕ್ತಿಗಳ ವಿರುದ್ಧ ದೂರುಗಳನ್ನು ಸಲ್ಲಿಸಬಹುದು. ಹಾಗೂ ದೂರಿನ ಕುರಿತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ಈ ವೆಬ್‌ಸೈಟ್‌ನ್ನು ಬಳಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸರಕಾದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಠಿಯಾ ಸೇರಿದಂತೆ ಅನೇಕ ಹಿರಿಯ ಅಧಿಕಾರಿ ಭಾಗವಹಿಸಿದ್ದರು.
ವೆಬ್‌ಸೈಟ್‌ನ ವಿಶೇಷತೆ
- ಸರಕಾರದ ಮುಖ್ಯಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ‘ಐ-ವಿವೇಕ್’ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತದೆ.
- ಆರ್‌ಬಿಐ, ಸೆಬಿ, ಆರ್‌ಒಸಿ, ಪೊಲೀಸ್ ಇಲಾಖೆ, ಸಹಕಾರ ಸಂಘಗಳ ನಿಬಂಧಕರು ಈ ವೆಬ್‌ಸೈಟ್‌ನ್ನು ನಿಯಂತ್ರಣ ಮಾಡುತ್ತಿರುತ್ತಾರೆ.
- ಈ ವೆಬ್‌ಸೈಟ್ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ.
- ದೂರುದಾರರು ಹಾಗೂ ಮಾಹಿತಿದಾರರ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗುವುದು.
- ಈ ವೆಬ್‌ಸೈಟ್‌ನಲ್ಲಿ ಗ್ರಾಹಕ ಜಾಗೃತಾ ವಿಭಾಗ ಹಾಗೂ ಪ್ರಮುಖ ಶಾಸನಗಳನ್ನು ಅವಲೋಕಿಸಲು ಮಾಹಿತಿ ವಿಭಾಗವನ್ನು ಹೊಂದಿದೆ.