ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರ ವಿರುದ್ಧ ದೂರು

Update: 2017-05-04 13:10 GMT

ಬೆಂಗಳೂರು, ಮೇ 4: ಅನಗತ್ಯವಾಗಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 22 ಸಚಿವರ ವಿರುದ್ಧ ಕರ್ನಾಟಕ ಲೋಕಾಯುಕ್ತರಿಗೆ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ದೂರು ಸಲ್ಲಿಸಿದ್ದಾರೆ.

ಗುರುವಾರ ನಗರದ ಎಂಎಸ್ ಕಟ್ಟಡದಲ್ಲಿರುವ ಕರ್ನಾಟಕ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧ ಪ್ರಕಾಶ್‌ಸಿಂಗ್ ಮತ್ತು ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸೂಕ್ತ ನಿರ್ದೇಶನ ನೀಡಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳಾಗಲಿ, ರಾಜ್ಯ ಸರಕಾರದ ಪ್ರತಿನಿಧಿಗಳಾಗಲಿ ಹಸ್ತಕ್ಷೇಪ ಮಾಡಬಾರದು. ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ನಿರ್ದೇಶಿಸಿದೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 22 ಸಚಿವರು ರಾಜ್ಯದ ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ತಮಗೆ ಬೇಕಾದ ಅಧಿಕಾರಿಗಳನ್ನು ಬೇಕಾದೆಡೆಗೆ ನಿಯೋಜಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಸುಪ್ರೀಂ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಚಿವರು: ಯು.ಟಿ.ಖಾದರ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ವಿನಯ್‌ಕುಮಾರ್ ಸೊರಕೆ, ಎಚ್. ಆಂಜನೇಯ, ಬಾಬುರಾವ್ ಚಿಂಚನಸೂರ್, ಎಚ್.ಸಿ.ಮಹದೇವಪ್ಪ, ಉಮಾಶ್ರೀ, ಆರ್.ವಿ.ದೇಶಪಾಂಡೆ, ರಮಾನಾಥ ರೈ, ಪರಮೇಶ್ವರ್ ನಾಯಕ್ ಸೇರಿದಂತೆ ಒಟ್ಟು 22 ಸಚಿವರು ರಾಜ್ಯ ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಶಶಿಧರ್ ದೂರಿದರು.

ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧ ಪೊಲೀಸ್ ಇಲಾಖೆಗೆ ಸಚಿವರು ನೀಡಿರುವ ಶಿಫಾರಸ್ಸು ಪತ್ರಗಳನ್ನಾಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 22 ಸಚಿವರ ವಿರುದ್ದ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News