ವಿವಿಗಳ ಪಠ್ಯಕ್ರಮ ಬದಲಾಯಿಸುವ ಅಗತ್ಯವಿದೆ: ಪ್ರಿಯಾಂಕ ಖರ್ಗೆ

Update: 2017-05-04 14:35 GMT

ಬೆಂಗಳೂರು, ಮೇ 4: ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುತ್ತಿರುವ ಪಠ್ಯಕ್ರಮ ಬದಲಾಯಿಸುವ ಅಗತ್ಯವಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜ್ಞಾನ ಆಯೋಗದ ಮಾಜಿ ಮುಖ್ಯಸ್ಥ ಡಾ. ಸ್ಯಾಮ್ ಪಿತ್ರೋಡ ಹಾಗೂ ದರ್ಶನ್ ಶಂಕರ್ ಸ್ಥಾಪಿಸಿರುವ ಇನ್‌ಸ್ಟಿಟ್ಯೂಟ್ ಆಫ್ ಟ್ರಾನ್ಸ್ ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಟಿಡಿಯು) ವಿಶ್ವವಿದ್ಯಾನಿಲಯದ ಅಕಾಡಮಿಕ್ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಗಳಲ್ಲಿ ಕಲಿಸುತ್ತಿರುವ ಪಠ್ಯಕ್ರಮ ಬದಲಾಯಿಸುವ ಅಗತ್ಯವಿದ್ದು, ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಪೂರೈಸಬೇಕಾದರೆ ಅವರಿಗೆ ಬೇಕಾದ ಪೂರ್ವ ತಯಾರಿಯನ್ನು ವಿಶ್ವವಿದ್ಯಾಲಯಗಳು ಕಲಿಸಬೇಕು ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣ ವೈಯಕ್ತಿಕ ಮತ್ತು ದೇಶದ ಪ್ರಗತಿಗೆ ಅನಿವಾರ್ಯ ಎಂದ ಅವರು, ಟಿಡಿಯು ವಿಶ್ವವಿದ್ಯಾನಿಲಯ ಆಧುನಿಕ, ಸಾಂಪ್ರದಾಯಿಕ ವಿಜ್ಞಾನವನ್ನು ಸಮಗ್ರವಾಗಿ ಕಲಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ವಿಶ್ವವಿದ್ಯಾನಿಲಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ಸರಕಾರದಿಂದ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಮಾತನಾಡಿ, ಯಾವುದೇ ವೃತ್ತಿಯಲ್ಲೂ ಬದ್ಧತೆ ಮತ್ತು ನೈತಿಕತೆ ಅತ್ಯಗತ್ಯ. ನ್ಯಾಯಾಂಗ ಮತ್ತು ಆರೋಗ್ಯ ಕ್ಷೇತ್ರ ಹೆಚ್ಚಿನ ನೈತಿಕತೆಯನ್ನು ಬಯಸುತ್ತದೆ. ಅಲ್ಲದೆ, ಹೊಸ ಚಿಂತನೆಯೊಂದಿಗೆ ಪಿತ್ರೋಡ ಅವರು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಸಾಂಪ್ರದಾಯಿಕ ಕಲಿಕೆಗಿಂತ ವಿಭಿನ್ನ ರೀತಿಯ ಅನುಭವ ಮತ್ತು ಜ್ಞಾನದ ಪರಿಕಲ್ಪನೆಯೊಂದಿಗೆ ಇದನ್ನು ಸ್ಥಾಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಸ್ಯಾಮ್ ಪಿತ್ರೋಡ ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆ ಈ ವಿಶ್ವವಿದ್ಯಾಲಯ ಸ್ಥಾಪಿಸುವ ಕನಸು ಕಂಡಿದ್ದೆ. ಇದೀಗ ಅದು ಸಾಕಾರಗೊಳ್ಳುತ್ತಿದೆ. ಆರೋಗ್ಯ ಕ್ಷೇತ್ರ ಜಗತ್ತಿನಲ್ಲಿಂದು ಅತ್ಯಂತ ಪ್ರಮುಖ ಕ್ಷೇತ್ರವಾಗಿ ರೂಪುಗೊಂಡಿದ್ದು, ಸಾರ್ವಜನಿಕರಿಗೆ ಗುಣಮಟ್ಟದ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ದೊರಕಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಾಲಕೃಷ್ಣ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಸುಂದರ ರಾಜು, ಪ್ರೊ.ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News