​ಸಿದ್ದಲಿಂಗ ಸ್ವಾಮಿಯಿಂದ ದಲಿತರಿಗೆ ಪ್ರಾಣ ಬೆದರಿಕೆ: ಆರೋಪ

Update: 2017-05-05 13:04 GMT

ಬೆಂಗಳೂರು, ಮೇ 5: "ನಮ್ಮ ಜಮೀನನ್ನು ನಮಗೆ ನೀಡಿ" ಎಂದು ಕೇಳಲು ಹೋದ ದಾಸನಪುರ ಹೋಬಳಿಯ ಕದರನಹಳ್ಳಿ ಗ್ರಾಮದ ದಲಿತರಿಗೆ ಸಿದ್ಧಗಂಗಾ ಮಠದ ಕಿರಿಯ ಸ್ವಾಮಿ ಸಿದ್ದಲಿಂಗ ಸ್ವಾಮೀಜಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಮಾಜ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ಆರೋಪಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಕದರನಹಳ್ಳಿ ಗ್ರಾಮದಲ್ಲಿ 1982 ರಲ್ಲಿ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದ ದಲಿತ ಕುಟುಂಬಗಳಿಗೆ ಅಂದಿನ ಸರಕಾರ ಕುಟುಂಬಕ್ಕೆ 3 ಎಕರೆಯಂತೆ 12 ಎಕರೆ ಜಮೀನು ಮಂಜೂರು ಮಾಡಿದೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಲಿಂಗಾಯತ ಮುಖಂಡರು ಈ ಕುಟುಂಬಗಳಿಗೆ ಯಾವುದೇ ನೋಟಿಸ್ ನೀಡದೆ ಮಠದ ಪ್ರಸಾದ ನಿಲಯಕ್ಕಾಗಿ ಮಂಜೂರು ಮಾಡಲು ಪ್ರಸ್ತಾಪ ಸಲ್ಲಿಸಿದ್ದು, ಸರಕಾರ ಅದಕ್ಕೆ ಅನುಮೋದನೆ ನೀಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ರಮವಾಗಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿರುವುದನ್ನು ತಿಳಿದುಕೊಳ್ಳಲು ಅನಕ್ಷರಸ್ಥ ದಲಿತ ಕುಟುಂಬಗಳಿಗೆ 6 ವರ್ಷಗಳು ಬೇಕಾಯಿತು. ಈ ವೇಳೆ ದಲಿತ ಕುಟುಂಬಗಳು ಕೆಎಟಿ ನ್ಯಾಯಾಲಯದಲ್ಲಿ ದಾವೆ ಹೂಡಿ ಮಠವು ಅತಿಕ್ರಮ ಪ್ರವೇಶ ಮಾಡದಂತೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು. ಇದನ್ನು ಗಮನಿಸಿದ ಮಠದ ಹಿರಿಯ ಸ್ವಾಮೀಜಿ "ದಲಿತರ ಭೂಮಿ ದಾಸೋಹಕ್ಕೆ ಅಗತ್ಯವಿಲ್ಲ. ಹೀಗಾಗಿ ನಾನು ಲಿಖಿತವಾಗಿ ಬರೆದುಕೊಡುತ್ತೇನೆ, ಕಿರಿಯ ಸ್ವಾಮಿಗಳಿಂದ ಪತ್ರ ತನ್ನಿ" ಎಂದು ಹೇಳಿ ಕಳಿಸಿದ್ದರು.

ದಲಿತ ಕುಟುಂಬಗಳು ಸಿದ್ದಲಿಂಗ ಸ್ವಾಮಿ ಬಳಿ ಪತ್ರಕ್ಕಾಗಿ ಮಾತುಕತೆ ಮಾಡಲು ಬಂದಾಗ "ನಿಮಗೆ ಭೂಮಿ ವಾಪಸ್ಸು ನೀಡಲು ಆಗುವುದಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ತಮ್ಮ ಕಚೇರಿಗೆ ಕರೆಸಿ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದಾರೆ. ಹೀಗಾಗಿ ನಿಮಗೆ 10 ಲಕ್ಷ ರೂ. ಪರಿಹಾರ ನೀಡುತ್ತೇವೆ. ಜಮೀನು ಬಿಟ್ಟು ಕೊಡಿ ಎಂದಿದ್ದಾರೆ. ಅಲ್ಲದೆ, ನೀವು ಜಮೀನು ನೀಡಲಿಲ್ಲ ಎಂದರೆ ನಿಮ್ಮನ್ನು ಏನು ಮಾಡುತ್ತೇವೆ ನೋಡಿ" ಎಂದು ದಮಕಿ ಹಾಕಿದ್ದಾರೆ ಎಂದವರು ಆರೋಪಿಸಿದರು.

ಸರಕಾರ ಕೂಡಲೇ ಅಕ್ರಮವಾಗಿ ಮಠಕ್ಕೆ ಜಮೀನು ಮಂಜೂರು ಮಾಡಲು ಸಹಕರಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ದಲಿತರ ಹೆಸರಿಗೆ ದಾಖಲೆಗಳನ್ನು ಮಾಡಿಸಿಕೊಡಬೇಕು. ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭೂಮಿ ಕಳೆದುಕೊಂಡ ಲಕ್ಷ್ಮಮ್ಮ, ಗೋವಿಂದಪ್ಪ, ಸೀತಾರಾಮಯ್ಯ, ವೆಂಕಟಹನುಮಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News