ವಿಪ್ರೋಗೆ ಬಾಂಬ್ ಬೆದರಿಕೆ
ಬೆಂಗಳೂರು, ಮೇ 6: ಇಪ್ಪತ್ತು ದಿನಗಳಲ್ಲಿ 500 ಕೋಟಿ ರೂ. ನೀಡದಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ವಿಪ್ರೋ ಕಚೇರಿಗಳಿಗೆ ಬಾಂಬ್ ಇಟ್ಟು ಸ್ಫೋಟಿಸುವ ಜೊತೆಗೆ ವಿಪ್ರೋ ಕಂಪೆನಿಯ ಸಿಬ್ಬಂದಿಯನ್ನು ಹತ್ಯೆ ಮಾಡಲಾಗುವುದೆಂದು ದುಷ್ಕರ್ಮಿಗಳು ಇ-ಮೇಲ್ ಮೂಲಕದ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.
ನಗರದ ಸರ್ಜಾಪುರ ರಸ್ತೆಯಲ್ಲಿರುವ Ramesh2@protonmail.com ಇ-ಮೇಲ್ ಮುಖಾಂತರ ವಿಪ್ರೋ ಸ್ವಾಗತ ಕಚೇರಿಯಲ್ಲಿರುವ ಮೇಲ್ ಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಅಲ್ಲದೆ, ಮೇ 25ರಂದು ಎಲ್ಲ ವಿಪ್ರೋ ಕಚೇರಿಗಳ ಮೇಲೆ ಭಯಾನಕ ದಾಳಿಗಳನ್ನು ನಡೆಸಿ ಉದ್ಯೋಗಿಗಳನ್ನು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆದರಿಕೆ ಪ್ರಕರಣ ಸಂಬಂಧ ವಿಪ್ರೋ ಆಡಳಿತ ಮಂಡಳಿ ಮಾಹಿತಿ ಆಧಾರವಾಗಿ ಸೆಕ್ಷನ್ 66ರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಇ-ಮೇಲ್ ಕಳುಹಿಸಿರುವ ಐಪಿ ವಿಳಾಸ ಆಧರಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.