ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ: ಝಮೀರ್ ಅಹ್ಮದ್
ಬೆಂಗಳೂರು, ಮೇ 7: "ಮುಂದಿನ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಈ ಬಗ್ಗೆ ಈಗಾಗಲೇ ರಾಹುಲ್ ಗಾಂಧಿಯವರ ಜೊತೆ ಮಾತುಕತೆ ನಡೆಸಿದ್ದೇನೆ" ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
"ಕುಮಾರಸ್ವಾಮಿಯವರಿಗೆ ಒಳ್ಳೆಯದಾಗಲಿ. ಇನ್ನೊಬ್ಬ ಝಮೀರ್ ನನ್ನು ಹುಟ್ಟುಹಾಕಲು ಕುಮಾರಸ್ವಾಮಿಗೆ ಸಾಧ್ಯವಿಲ್ಲ. ಅವರನ್ನು ನೋಡಿದರೆ ನನಗೆ ಅಯ್ಯೋ ಪಾಪ ಎನಿಸುತ್ತದೆ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳಲು ಕುಮಾರಸ್ವಾಮಿ ಸಿದ್ಧವಾಗಿದ್ದಾರೆ" ಎಂದವರು ಲೇವಡಿ ಮಾಡಿದರು.
"ಜಿ.ಎ.ಬಾವಾ ಜೆಡಿಎಸ್ ನಿಂದ ಕಣಕ್ಕಿಳಿಯಲಿ. ಕಳೆದ ಚುನಾವಣೆಯಲ್ಲಿ ನಾನು ಗೆದ್ದ ಅಂತರದಷ್ಟು ಮತವನ್ನು ಬಾವಾ ಪಡೆದಿಲ್ಲ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಠೇವಣಿ ಬಂದಿಲ್ಲ. ಮುಂದಿನ ಬಾರಿಯೂ ನಾನೇ ಗೆಲ್ಲುತ್ತೇನೆ. ನಾನು ಕ್ಷೇತ್ರದ ಮನೆ ಮಗನಾಗಿದ್ದು, ಜನರು ನನ್ನ ಕೈ ಬಿಡಲ್ಲ" ಎಂದರು.
ದೇವೇಗೌಡರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ಕುಮಾರಸ್ವಾಮಿ ಮೈತ್ರಿ ಅಂದರೆ ರಾಜಕೀಯ ನಿವೃತ್ತಿ ಎನ್ನುತ್ತಾರೆ. ಗೊಂದಲ ಸೃಷ್ಟಿಸುವುದೇ ಕುಮಾರಸ್ವಾಮಿ ಮತ್ತು ದೇವೇಗೌಡರ ಕೆಲಸವಾಗಿದ್ದು, ಇದು ಪಕ್ಷದ ಗೊಂದಲವಲ್ಲ. ಬದಲಾಗಿ, ಇವರಿಬ್ಬರ ಗೊಂದಲವಾಗಿದೆ. ಈ ಬಾರಿಯೂ ಸಿಎಂ ಆಗಬಹುದು ಎಂಬ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ಅವರು ಗೆಲ್ಲುವ ನೂರು ಅಭ್ಯರ್ಥಿಗಳನ್ನು ಮೊದಲು ತೋರಿಸಲಿ ಎಂದು ಝಮೀರ್ ಜಮೀರ್ ಸವಾಲು ಹಾಕಿದರು.