"ನಗು" ಉದ್ಯಮವಾಗಿರುವುದು ಕಾಲದ ವ್ಯಂಗ್ಯ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು, ಮೇ 7: ಸಹಜವಾಗಿ ಅರಳಬೇಕಾದ ನಗೆಯೂ ಉದ್ಯಮವಾಗಿ ಮಾರ್ಪಟ್ಟಿರುವುದು ನಮ್ಮ ಕಾಲದ ವ್ಯಂಗ್ಯ ಎಂದು ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ಉಪಾಸನಾ ಟ್ರಸ್ಟ್ ಮತ್ತು ಹಾಸ್ಯ ಸಾಹಿತಿ ಎಚ್.ಡುಂಡಿರಾಜ್ ಅಭಿನಂದನಾ ಸಮಿತಿ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಡುಂಡಿ-60’ ಅಭಿನಂದನಾ ಸಮಾರಂಭ ಹಾಗೂ ಡುಂಡಿರಾಜ್ ಬರೆದಿರುವ ‘ಇಡಿಕಿಡಿ’ ಹಾಗೂ ‘ಹನಿ ಖಜಾನೆ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗು ಎನ್ನುವುದು ಸನ್ನಿವೇಶ, ಸಂದರ್ಭಗಳಲ್ಲಿ ಸಹಜವಾಗಿ ಸೃಷ್ಟಿಯಾಗುವಂತಹದ್ದು. ಆದರೆ, ಇಂತಹ ಸನ್ನಿವೇಶಗಳು ನಮ್ಮಲ್ಲಿ ಕಣ್ಮರೆಯಾಗಿ ಹಣ ಕೊಟ್ಟು ನಗುವಂತಹ ಕೃತಕ ನಗೆಕೂಟಗಳು ಹೆಚ್ಚಾಗಿ, ಪರಸ್ಪರರ ನಡುವೆ ಪ್ರೀತಿ, ವಿಶ್ವಾಸ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗು ಹಾಗೂ ಪ್ರೀತಿ ಸಹಜವಾಗಿ ಹುಟ್ಟಬೇಕಾದರೆ ಪರಸ್ಪರರ ನಡುವೆ ನಂಬಿಕೆ, ವಿಶ್ವಾಸ ಹೆಚ್ಚಾಗಬೇಕು. ಇಂತಹ ವಾತಾವರಣ ನಿರ್ಮಿಸಿ ಸೌಹಾರ್ದ ಹಾಗೂ ಮುಕ್ತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಹನಿಗವನಗಳ ಚಕ್ರವರ್ತಿಯೆಂದೇ ಹೆಸರು ಪಡೆದಿರುವ ಡುಂಡಿರಾಜ್‌ರವರ ಹನಿಗವನಗಳನ್ನು ಓದುವ ಮೂಲಕ ಮನಸನ್ನು ಹಗುರ ಮಾಡಿಕೊಳ್ಳಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್, ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ಉಪಸ್ಥಿತರಿದ್ದರು. ಈ ವೇಳೆ ಉಪಾಸನಾ ಮೋಹನ್‌ರಿಂದ ಗೀತಾಗಾಯನ ಏರ್ಪಡಿಸಲಾಗಿತ್ತು