ಮನಾಪದ ಕೆಲಸಗಳ್ಳರಿಗೆ ಅಂಕುಶ, ಪ್ರವಾಸದ ದಿನಗಳಲ್ಲೂ ಪ್ರವಾಸಿಗರಿಲ್ಲ!
ವಿ.ವಿ. ಕ್ಯಾಂಪಸ್‌ನಲ್ಲಿ ಅನಧಿಕೃತ ಜೋಪಡಿಗಳ ಸರ್ವೇ ಮುಂಬೈ ವಿ.ವಿ. ಕಲೀನಾ ಕ್ಯಾಂಪಸ್ ಜಮೀನಿನಲ್ಲಿ ಅನಧಿಕೃತ ಜೋಪಡಿಗಳ ಬಗ್ಗೆ ಈಗ ಸರ್ವೇ ಆರಂಭವಾಗಿದೆ. ರಾಜ್ಯ ಮಂತ್ರಿಯವರು ಅಧಿಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸುತ್ತಾ ‘‘ಭಾರೀ ಸುರಕ್ಷೆ ಇದ್ದೂ ವಿಶ್ವವಿದ್ಯಾನಿಲಯದ ಜಮೀನಿನಲ್ಲಿ ಇಷ್ಟೊಂದು ಜೋಪಡಿಗಳು ಹೇಗೆ ಹುಟ್ಟಿಕೊಂಡವು?’’ ಎಂದು ವಿವರಣೆ ಕೇಳಿದ್ದಾರೆ. ಮುಖ್ಯವಾಗಿ ವಿಶ್ವವಿದ್ಯಾನಿಲಯ ಜಮೀನಿನಲ್ಲಿ ಅತಿಕ್ರಮಣಗೈದು ವಾಲ್ಮೀಕಿ ನಗರ ಸೃಷ್ಟಿಯಾಗಿದ್ದು ಈ ಜೋಪಡಿಗಳ ಸರ್ವೇ ನಡೆಸಲಾಗುತ್ತದೆ. ಯಾವ ಅಧಿಕಾರಿಯ ಕಾರ್ಯಾವಧಿಯಲ್ಲಿ ಈ ಅತಿಕ್ರಮಣ ನಡೆದಿದೆಯೋ ಅವರನ್ನೇ ಜವಾಬ್ದಾರಿಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ರಾಜ್ಯಮಂತ್ರಿ ರವೀಂದ್ರ ವಾಯ್ಕರ್ ಅವರು ಗೃಹ ನಿರ್ಮಾಣ ಮತ್ತು ಉನ್ನತ ತಾಂತ್ರಿಕ ಇಲಾಖೆಗೆ ಸರ್ವೇಯ ಆದೇಶ ನೀಡಿದ್ದಾರೆ.
ಕಳೆದ ವಾರ ವಿ.ವಿ. ಕಲೀನಾ ಕ್ಯಾಂಪಸ್‌ನ ವಾಲ್ಮೀಕಿ ನಗರದ ಅತಿಕ್ರಮಣವನ್ನು ಕೆಡವಿ ಹಾಕುವ ಬಗ್ಗೆ ಉನ್ನತ ಶಿಕ್ಷಣ ರಾಜ್ಯ ಮಂತ್ರಿ ಒಂದು ಬೈಠಕ್ ಕರೆದಿದ್ದರು. ವಿ.ವಿ.ಯ ಆ ಜಮೀನಿನಲ್ಲಿ ಗೋಡೆ ಯಾಕೆ ಕಟ್ಟಲಿಲ್ಲ? ಎಂದು ಅಲ್ಲಿ ಪ್ರಶ್ನಿಸಲಾಗಿತ್ತು.
ಕುಲಪತಿಯವರು ಹೇಳುವಂತೆ 1997ರಿಂದಲೇ ವಿಶ್ವವಿದ್ಯಾನಿಲಯ ಜಮೀನಿನಲ್ಲಿ ಅತಿಕ್ರಮಣ ನಡೆದಿದೆ. 2007ರಲ್ಲಿ ಪೊಲೀಸರ ಸಹಾಯದಿಂದ ಅನೇಕ ಜೋಪಡಿಗಳನ್ನು ಕೆಡವಿ ಹಾಕಲಾಗಿತ್ತು. ಆದರೆ ನಂತರ ರಾತ್ರೋರಾತ್ರಿ ಮತ್ತೆ ಜೋಪಡಿಗಳು ಎದ್ದವು. ವಿಭಾಗದ ಅಧಿಕಾರಿಗಳ ಅನುಸಾರ ವಿಶ್ವವಿದ್ಯಾನಿಲಯದ ಜಮೀನು ಆದ್ದರಿಂದ ಇಲ್ಲಿ ಎಸ್.ಆರ್.ಎ. ಯೋಜನೆ ಅನ್ವಯವಾಗುವುದಿಲ್ಲ.
* * *
ಮನಪಾದ ಕೆಲಸಗಳ್ಳ ಸಿಬ್ಬಂದಿಗೆ ಅಂಕುಶ
ಮುಂಬೈ ಮಹಾನಗರ ಪಾಲಿಕೆಯ ಕಚೇರಿಗೆ ಯಾವುದಾದರೂ ಸರ್ಟಿಫಿಕೇಟ್ ಪಡೆಯಲು ಹೋದವರಿಗೆ ಒಂದು ಸಾಮಾನ್ಯ ಅನುಭವವೆಂದರೆ ಸಂಬಂಧಿತ ಅಧಿಕಾರಿ ಇನ್ನೂ ಸಹ ಕಚೇರಿಗೆ ಬಂದಿಲ್ಲ ಎನ್ನುವುದು. ಅನೇಕ ವರ್ಷಗಳಿಂದ ಕೇಳಿ ಬರುವ ಈ ಮಾತಿಗೆ ಇನ್ನು ವಿರಾಮ ಬೀಳಲಿದೆ. ಕಾರಣ ಮಹಾನಗರ ಪಾಲಿಕೆ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಿ ಇನ್ನು ಅನಿವಾರ್ಯವಾಗಲಿದೆ. ಮೇ ತಿಂಗಳ ಪ್ರಥಮ ವಾರದಿಂದ ಬಯೋಮೆಟ್ರಿಕ್ ವಿಧಾನದಿಂದ ಆಧಾರ್‌ಗೆ ಸಂಬಂಧಿಸಿದ ಸಿಸ್ಟಮ್‌ನಲ್ಲಿ ತಮ್ಮ ಉಪಸ್ಥಿತಿ ದಾಖಲಿಸುವುದು ಸಿಬ್ಬಂದಿಗೆ ಅನಿವಾರ್ಯವಾಗಿದೆ. ಈ ತನಕ ಡ್ಯೂಟಿ ರಿಜಿಸ್ಟರ್‌ನಲ್ಲಿ ತಮ್ಮ ಸಮಯ ಬರೆದು ಅನೇಕ ಸಿಬ್ಬಂದಿ ಮನೆಗೆ ಹೋಗುತ್ತಿದ್ದರು. ಕೆಲವರಂತೂ ತಮ್ಮ ಡ್ಯೂಟಿಗೆ ಬೇರೆಯವರನ್ನು ಇಡುತ್ತಿದ್ದರು. ಬಯೋ ಮೆಟ್ರಿಕ್ ಹಾಜರಿಯಿಂದ ಈ ದೃಶ್ಯಕ್ಕೆ ಕಡಿವಾಣ ಬೀಳಲಿದೆ.
ಮುಂಬೈ ಮನಪಾ ಈ ದಿಕ್ಕಿನಲ್ಲಿ ಅನೇಕ ತಿಂಗಳುಗಳಿಂದ ತಯಾರಿ ನಡೆಸಿದೆ. ಇದರಂತೆ ಪ್ರತೀ ಸಿಬ್ಬಂದಿಯು ಆಧಾರ್ ನಂಬರ್‌ನ ಜೊತೆಗೆ ತನ್ನ ಜನ್ಮದಿನ, ಸಿಬ್ಬಂದಿ ಕೋಡ್ ಸಹಿತ ಅನ್ಯ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡಬೇಕು. ಮುಂಬೈ ಮನಪಾದಲ್ಲಿ ಒಟ್ಟು ಒಂದು ಲಕ್ಷ 7 ಸಾವಿರ ಸಿಬ್ಬಂದಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರೆ ಇವರಲ್ಲಿ 79,202 ಸಿಬ್ಬಂದಿ ಕಳೆದ ವಾರದ ತನಕ ಆ್ಯಕ್ಟಿವ್ ಆಗಿರುವರು. ಇದಕ್ಕೆ ಅವಶ್ಯವಿರುವ ನಾಲ್ಕು ಸಾವಿರ ಮೆಷಿನ್‌ಗಳ ಖರೀದಿ ಪ್ರಕ್ರಿಯೆ ನಡೆದಿದೆ. ವರಿಷ್ಠ ಅಧಿಕಾರಿಗಳ ಅನುಸಾರ ಬಯೋಮೆಟ್ರಿಕ್ ಮೆಷಿನ್‌ಗಳು ಸರಿಯಾದ ಸಂಖ್ಯೆಯಲ್ಲಿ ದೊರೆಯುತ್ತಿಲ್ಲವಂತೆ. ಹಾಗಾಗಿ ಹೊಸ ಮೆಷಿನ್‌ಗಳಿಗಾಗಿ ಕಾಯಲಾಗಿದೆ.
ಮುಂಬೈ ಮನಪಾದ 24 ವಾರ್ಡ್‌ಗಳಲ್ಲಿ ಕೆಲಸ ಮಾಡುವ ಇಂಜಿನಿಯರ್‌ರ ಕೆಲಸದ ಅವಧಿಯಲ್ಲ್ಲೂ ಬದಲಾವಣೆ ಕೈಗೊಳ್ಳಲಾಗಿದೆ. ಆಧಾರ್ ಕಾರ್ಡ್‌ನಿಂದ ಸಿಸ್ಟಮ್‌ನ್ನು ಜೋಡಿಸಿರುವ ಈ ಪ್ರಕ್ರಿಯೆಯಲ್ಲಿ ಏಕಕಾಲಕ್ಕೆ ನೇರವಾಗಿ ಮುಖ್ಯ ಸರ್ವರ್ ಜೊತೆ ಸಂಪರ್ಕದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆಗಳೂ ಕಂಡು ಬಂದಿವೆ. ಇನ್ನು ಮುಂದೆ ಯಾವುದಾದರೂ ಮೀಟಿಂಗ್ ಅಥವಾ ಸೈಟ್‌ಗೆ ತೆರಳುವ ಮೊದಲು ಆ ಸಿಬ್ಬಂದಿ ಸಂಬಂಧಿತ ವಿಭಾಗದ ಪ್ರಮುಖರಿಂದ ಔಟ್‌ಡೋರ್ ಡ್ಯೂಟಿಯ ಅನುಮತಿ ಪಡೆಯಬೇಕು. ಸಿಬ್ಬಂದಿ ಕಂಪ್ಯೂಟರ್ ಹೊರತಾಗಿ ಮೊಬೈಲ್ ಆ್ಯಪ್ ಮೂಲಕವೂ ಇದರ ಸೂಚನೆ ತಿಳಿಸಬಹುದಾಗಿದೆ. ‘‘ಇನ್ನು ಮುಂದೆ ಮನಪಾದ ಎಲ್ಲಾ ದಾಖಲೆ ಪತ್ರಗಳು ಆನ್ ಲೈನ್ ಆಗಿರುತ್ತದೆ. ಹೀಗಾಗಿ ಎಲ್ಲಾ ವ್ಯವಸ್ಥೆ ಪಾರದರ್ಶಕವಾಗಿರುತ್ತದೆ’’ ಎನ್ನುತ್ತಾರೆ ಅಧಿಕಾರಿಗಳು. * * *
ಮೆಟ್ರೋ ರೈಲು: ನೌಕರರಿಗೆ ಟ್ಯಾಟೂ ನಿಷೇಧ
ಮುಂಬೈ ಮೆಟ್ರೋ ರೈಲ್ ಕಾರ್ಪೋರೇಶನ್ (ಎಂ.ಎಂ.ಆರ್.ಸಿ.) ತನ್ನ ನೌಕರರಿಗಾಗಿ ಡ್ರೆಸ್‌ಕೋಡ್ ಜಾರಿಗೊಳಿಸಿದೆ. ಹಾಗೂ ನೌಕರರು ಯಾರೂ ಶರೀರದಲ್ಲಿ ಟ್ಯಾಟೂ - ಹಚ್ಚೆ ಹಾಕಿಸಿಕೊಳ್ಳುವುದಕ್ಕೂ ನಿಷೇಧಿಸಿದೆ. ವೆಸ್ಟ್‌ರ್ನ್ ಡ್ರೆಸ್‌ಗೂ ನಿಷೇಧಿಸಿದೆ. ಇದೀಗ ಮೆಟ್ರೋ - ಎ ಪ್ರೊಜೆಕ್ಟ್‌ಗಾಗಿ ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು -ಅಧಿಕಾರಿಗಳನ್ನು ಭರ್ತಿಗೊಳಿಸಲಾಗುತ್ತಿದೆ. ಹಾಗೂ ಡ್ರೆಸ್‌ಕೋಡ್ ಅನಿವಾರ್ಯಗೊಳಿಸಿದೆ. ತನ್ನ ಜಿ.ಆರ್. ಅನುಸಾರ ಎಲ್ಲಾ ಮಹಿಳಾ ಮತ್ತು ಪುರುಷ ನೌಕರರು ಜೀನ್ಸ್, ಟೀ ಶರ್ಟ್ ಹೊರತಾಗಿ ಯಾವುದೇ ಫ್ಯಾನ್ಸಿ ಉಡುಪು ಧರಿಸುವುದಕ್ಕೆ ನಿಷೇಧಿಸಿದೆ. ಟ್ಯಾಟೂ ಕೂಡಾ ಯಾರೂ ಹಚ್ಚಿಸಿಕೊಳ್ಳಬಾರದು ಎಂದಿದೆ.
* * *
ಕೈದಿಗಳು ತಯಾರಿಸಿದ ಚಪ್ಪಲಿ ಮಾರಾಟ
ಈ ತನಕ ಜೈಲುಗಳಲ್ಲಿ ಸಜೆ ಅನುಭವಿಸುತ್ತಿರುವ ಕೈದಿಗಳು ನಾನಾ ರೀತಿಯ ಉತ್ಪಾದನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಗೊತ್ತು. ಅವುಗಳಲ್ಲಿ ಟೈಲರಿಂಗ್, ಬಡಗಿ ಕೆಲಸ ಇತ್ಯಾದಿಗಳು ಸೇರಿದ್ದುವು. ಆದರೆ ಮೇ 1 ಮಹಾರಾಷ್ಟ್ರ ದಿನದಿಂದ ಮಹಾರಾಷ್ಟ್ರದ ವಿಭಿನ್ನ ಜೈಲುಗಳಲ್ಲಿ ಕೈದಿಗಳು ಚಪ್ಪಲಿ ತಯಾರಿಸಲಿರುವ ದೃಶ್ಯ ಕಂಡು ಬಂದಿದೆ. ಮಹಾರಾಷ್ಟ್ರ ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿದೆ. ಈ ಕೈದಿಗಳು ತಯಾರಿಸಿದ ಚಪ್ಪಲಿ - ಶೂ ಜೈಲುಗಳ ಹೊರಗಡೆ ದೇಶದ ವಿವಿಧೆಡೆ ಅಂಗಡಿಗಳಲ್ಲಿ ಮಾರಾಟಕ್ಕೆ ಬರಲಿದೆ. ಇದರ ಆರಂಭ ಪುಣೆಯ ಯೆರವಾಡ ಜೈಲ್‌ನಿಂದ ಆಗಿದೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕ ಬಿ.ಕೆ. ಉಪಾಧ್ಯಾಯ ಇದರ ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ಕೈದಿಗಳ ಶ್ರಮಕ್ಕೆ ಉತ್ತಮ ಸಂಬಳವೂ ನೀಡಲಾಗುವುದು ಎನ್ನುತ್ತಾರೆ ಮಹಾನಿರ್ದೇಶಕರು.
ಇದಕ್ಕಾಗಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯು ಯೆರವಾಡ ಸೆಂಟ್ರಲ್ ಜೈಲ್ ಮತ್ತು ಟೆರಗೂಸ್ ವರ್ಕ್ಸ್ ಪೈ. ಲಿ. ಹೆಸರಿನ ಕಂಪೆನಿಯ ಸಹಯೋಗ ಪಡೆಯಲಿದೆ. ಈ ರೀತಿಯ ಪ್ರಯೋಗ ದೇಶದಲ್ಲೇ ಮೊದಲನೆಯದ್ದಾಗಿದೆ ಎನ್ನುತ್ತಾರೆ ಟೆರಗೂಸ್ ಕಂಪೆನಿಯ ನಿರ್ದೇಶಕರು.
* * *
ಲೈಸನ್ಸ್‌ರಹಿತ ಖಾಸಗಿ ಸುರಕ್ಷಾ ಏಜನ್ಸಿಗಳತ್ತ ಪೊಲೀಸ್ ನಿಗಾ
ನವಿ ಮುಂಬೈಯಲ್ಲಿ ಈಗ ಲೈಸನ್ಸ್‌ರಹಿತ ಖಾಸಗಿ ಸುರಕ್ಷಾ ಏಜನ್ಸಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ಸುರಕ್ಷಾ ಗಾರ್ಡ್‌ಗಳನ್ನು ಬಹಿರಂಗವಾಗಿ ಶೋಷಣೆ ಕೂಡಾ ಮಾಡಲಾಗುತ್ತಿದೆ. ಇವರೆಲ್ಲ ಯಾವುದೇ ನಿಯಮಗಳನ್ನು ಪಾಲನೆ ಮಾಡಲಾರರು. ಪೊಲೀಸ್ ಇಲಾಖೆ ಕೂಡಾ ಈ ಬಗ್ಗೆ ಹೆಚ್ಚಿನ ಗಮನ ನೀಡಿರಲಿಲ್ಲ.
ಶ್ರಮ ಮಂತ್ರಾಲಯದ ನಿಯಮಾನುಸಾರ ಖಾಸಗಿ ಸುರಕ್ಷಾ ಏಜನ್ಸಿಗಳು ನೋಂದಣಿ ಮಾಡಿಸಿಕೊಳ್ಳುವುದು ಅವಶ್ಯ. ಇಲ್ಲಿ ಕೆಲಸ ಮಾಡುವ ಗಾರ್ಡ್‌ಗಳು 60 ದಿನಗಳ ನಂತರ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಏಜನ್ಸಿಯೇ ನೋಂದಣಿ ಆಗಿಲ್ಲ. ಹಾಗಿರುವಾಗ ಅದರಲ್ಲಿನ ಗಾರ್ಡ್ ಗಳು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳುವುದಾದರೂ ಹೇಗೆ?. ಖಾಸಗಿ ಸುರಕ್ಷಾ ಏಜನ್ಸಿಗಳಿಗೆ ಲೈಸನ್ಸ್ ನೀಡುವ ಜವಾಬ್ದಾರಿ ಪೊಲೀಸ್ ಆಯುಕ್ತಾಲಯದ್ದು. ಆದರೆ ಎಂದೂ ಕೂಡಾ ಪೊಲೀಸ್ ಆಯುಕ್ತಾಲಯ ಇದರ ಸರ್ವೇಯನ್ನು ನಡೆಸುವುದು ಅಗತ್ಯವೆಂದು ಮನಗಂಡಿಲ್ಲ!
ಈ ಖಾಸಗಿ ಸುರಕ್ಷಾ ಏಜನ್ಸಿಗಳು ಯಾವುದೇ ವ್ಯಕ್ತಿಗಳನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಆದರೆ ಅವರಿಗೆ ಯಾವುದೇ ತರಬೇತಿಯನ್ನೂ ನೀಡುವುದಿಲ್ಲ.
* * *
ಪ್ರವಾಸದ ಸೀಸನ್ ಆದರೂ ಪ್ರವಾಸಿಗರು ನಾಪತ್ತೆ!
ಎಪ್ರಿಲ್, ಮೇ ಅಂದರೆ ಪ್ರವಾಸದ ಕಾಲ. ಮಕ್ಕಳಿಗೆ ರಜಾ ದಿನಗಳು. ಎಲ್ಲಾದರೂ ಪ್ರವಾಸ ಮಾಡೋಣ ಅಂತ ಏನಾದರೂ ಯೋಜನೆ ಹಾಕಿಕೊಳ್ಳುವುದು ಸಾಮಾನ್ಯ. ಮುಂಬೈಯ ಆಸುಪಾಸಿನ ಪ್ರವಾಸ ತಾಣಗಳ ಜೊತೆ ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ತಾಣಗಳಾದ ಮಾಥೆರಾನ್, ಶಿರ್ಡಿ, ಕಾರ್ಲಾ, ತಾಡೋಬಾ, ಮಹಾಬಲೇಶ್ವರ, ಗಣಪತಿ ಪುಲೆ.... ಇತ್ಯಾದಿ ಪ್ರವಾಸಿ ಸ್ಥಳಗಳಲ್ಲಿ ಈಗ ನಿರೀಕ್ಷಿತ ಪ್ರವಾಸಿಗರು ಬರುತ್ತಿಲ್ಲವಂತೆ. ಇದಕ್ಕೆ ಕಾರಣ ರಾಜ್ಯದಲ್ಲಿನ ಭೀಕರ ಸೆಖೆ. ಪ್ರವಾಸಿಗರು ಹೊರಗೆ ತಿರುಗಾಡಲು ಹೆದರುತ್ತಿದ್ದಾರೆ.
ಮಹಾರಾಷ್ಟ್ರ ಪರ್ಯಟನ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ 3 ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಈ ತನಕ ಹನ್ನೊಂದು ಪ್ರತಿಶತ ಇಳಿಕೆಯಾಗಿರುವುದು ದಾಖಲಿಸಲಾಗಿದೆ.
ಶಾಲಾ ಪರೀಕ್ಷೆಗಳು ಮುಗಿಯಿತು. ಬೇಸಿಗೆ ರಜೆ ಶುರುವಾಗಿದೆ. ಆದರೆ ಸೆಖೆ ಮಾತ್ರ 40 ಸೆಲ್ಸಿಯಸ್ ತನಕ ಕೆಲವೆಡೆ ತಲುಪಿದೆ. ರಾಜ್ಯದಲ್ಲಿ ಮಹಾರಾಷ್ಟ್ರ ಪರ್ಯಟನ ಇಲಾಖೆಯ 23 ಕ್ಕೂ ಅಧಿಕ ರಿಸಾರ್ಟ್ಸ್‌ಗಳಿವೆ. ಹಿಂದಿನ ವರ್ಷಗಳಲ್ಲಿ ಪ್ರವಾಸಿಗರ ಕ್ಯೂ ಇರುತ್ತಿತ್ತು. ಈ ಬಾರಿ ಅಂತಹ ಕ್ಯೂ ಇಲ್ಲವಂತೆ.
* * *
ಪಾನ್ ತಿನ್ನುವವರ ಅಸಹಕಾರ
ಸ್ವಚ್ಛ ಭಾರತ ಅಭಿಯಾನವನ್ನು ಮುಂದಿಟ್ಟು ಜಾಗೃತ ಅಭಿಯಾನವನ್ನು ಮೋದಿ ಸರಕಾರ ಹಮ್ಮಿಕೊಂಡ ನಂತರ ರೈಲ್ವೆ ಮಂತ್ರಾಲಯ ಕೂಡಾ ತನ್ನ ಸ್ಟೇಷನ್‌ಗಳಲ್ಲಿ ಇದನ್ನು ಭರ್ಜರಿಯಾಗಿಯೇ ಆರಂಭಿತು. ಆದರೆ ಮುಂಬೈಯ ಲೋಕಲ್ ರೈಲು ಪ್ರಯಾಣಿಕರು ಮಾತ್ರ ಸ್ಪಂದಿಸುವಂತೆ ಕಾಣಿಸುತ್ತಿಲ್ಲ. ಇತ್ತೀಚೆಗೆ ಮುಂಬೈಯ ಲೋಕಲ್ ರೈಲ್ವೆ ಸ್ಟೇಷನ್‌ಗಳಲ್ಲಿ ಚಿತ್ರ ರಚನೆಗಳ ಮೂಲಕ ಗೋಡೆಗಳನ್ನು ಅಲಂಕರಿಸಲಾಗುತ್ತಿದೆ. ಅನೇಕ ಚಿತ್ರ ಕಲಾವಿದರು ಸ್ವಇಚ್ಛೆಯಿಂದ ಚಿತ್ರ ಬಿಡಿಸಿ ಜನರಿಗೆ ಸ್ವಚ್ಛತೆಯ ಕುರಿತಂತೆ ಪಾಠ ಹೇಳುತ್ತಿದ್ದಾರೆ. ಆದರೆ ಮುಂಬೈಯ ಲೋಕಲ್ ರೈಲು ಪ್ರಯಾಣಿಕರಲ್ಲಿ ಪಾನ್-ಗುಟ್ಕಾ ಸೇವನೆ ಮಾಡುವವರು ಇದನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ.