ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ ಕೊಟ್ಟವನಿಗೆ ಏನಾಯಿತು ನೋಡಿ
ಬೆಂಗಳೂರು,ಮೇ 12 : ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ 47 ವರ್ಷದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಧುಸೂದನ್ ರಾವ್ ವೈಟ್ ಫೀಲ್ಡ್ ನಲ್ಲಿರುವ ಸಾಫ್ಟ್ ವೇರ್ ಕಂಪೆನಿಯೊಂದರ ಉದ್ಯೋಗಿಯೆಂದು ತಿಳಿದು ಬಂದಿದೆ.
ಘಟನೆ ಬುಧವಾರ ಸಂಜೆ ನಡೆದಿದ್ದು, ನಗರದ ಖ್ಯಾತ ಐಟಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಬೆಂಗಳೂರು ನಿವಾಸಿ 29 ವರ್ಷದ ಯುವತಿ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ.
ಕೂಡಲೇ ಆಕೆ ಬೆಂಗಳೂರು ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ ‘ನೋ ಯುವರ್ ಪೊಲೀಸ್ ಸ್ಟೇಶನ್’ ಆ್ಯಪ್ ಉಪಯೋಗಿಸಿ ಸಂಬಂಧಿತ ಪೊಲೀಸ್ ಠಾಣೆಯ ಅಧಿಕಾರಿ ಬಳಿ ದೂರು ದಾಖಲಿಸಿದ್ದಳು. ಮಹಿಳೆಯರ ಸುರಕ್ಷತೆಗೆಂದೇ ಬೆಂಗಳೂರು ಪೊಲೀಸರು ಇತ್ತೀಚೆಗೆ ಆರಂಭಿಸಿದ್ದ ‘ಪಿಂಕ್ ಹೊಯ್ಸಳ’ ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿ ಬಸ್ಸಿನಲ್ಲಿರುವಾಗಲೇ ಆತನನ್ನು ಬಂಧಿಸಿದೆ. ಯುವತಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಆರೋಪಿ ಆಕೆಗೆ ಕಿರುಕುಳ ನೀಡಿದ್ದನೆನ್ನಲಾಗಿದೆ. ಆತನ ವಿರುದ್ಧ ಐಪಿಸಿ ಯ ಸೆಕ್ಷನ್ 354 ಅನ್ವಯ ಪ್ರಕರಣ ದಾಖಲಿಸಲಾಗಿದೆಯಲ್ಲದೆ ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.