"ಭ್ರಷ್ಟಾಚಾರ ಸಮೀಕ್ಷೆ" ಮೋದಿ ನಾಟಕ ಮಂಡಳಿಯ ರಾಜಕೀಯ ಪ್ರೇರಿತ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 12: ‘ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ಒಂದನೆ ಸ್ಥಾನದಲ್ಲಿದೆ’ ಎಂಬ ಸಮೀಕ್ಷೆ ನರೇಂದ್ರ ಮೋದಿ ಕೃಪಾಪೋಷಿತ ನಾಟಕ ಮಂಡಳಿಯ ರಾಜಕೀಯ ಪ್ರೇರಿತ, ಆಧಾರ ರಹಿತ-ಸುಳ್ಳು ಆರೋಪವಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸುಳ್ಳನ್ನು ಒಂದು ನೂರು ಬಾರಿ ಹೇಳಿ ಅದನ್ನೇ ಸತ್ಯ ಮಾಡಲು ಯಡಿಯೂರಪ್ಪ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ತರಬೇತಿಯಾಗಿದೆ. ಭ್ರಷ್ಟಾಚಾರ ಪ್ರಕರಣ ಸಂಬಂಧ ಕಾರಾಗೃಹಕ್ಕೆ ಹೋಗಿ ಬಂದವರು ಹಾಗೂ ಜಾಮೀನಿನ ಮೇಲೆ ಇರುವ ಬಿಜೆಪಿ ಮುಖಂಡರಿಗೆ ತನ್ನ ವಿರುದ್ಧ ಆರೋಪ ಮಾಡುವ ಯಾವುದೇ ನೈತಿಕತೆ ಇಲ್ಲ. ಬಿಎಸ್‌ವೈ ಮೇಲೆ ಪೊಲೀಸರು ಎಷ್ಟು ಚಾರ್ಜ್‌ಶೀಟ್ ಹಾಕಿದ್ದಾರೆಂಬುದನ್ನು ಹಿಂದಿರುಗಿ ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖಂಡರು ಆರೋಪ ಮಾಡುತ್ತಾ ‘ಬೆಟ್ಟ ಅಗೆದು ಇಲಿ ಹಿಡಿಯಲು ಮುಂದಾಗಿದ್ದಾರೆ. ಆದರೆ, ಅವರಿಗೆ ಅಲ್ಲಿ ಇಲಿಯೂ ಸಿಗುವುದಿಲ್ಲ ಎಂದ ಅವರು, ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಇನ್ನೂ ಎಷ್ಟು ಪ್ರಕರಣಗಳು ಬಾಕಿಯಿವೆ ಎಂದು ಟೀಕಿಸಿದರು.
ಚರ್ಚೆಗೆ ಸಿದ್ಧ: ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಧಾನಸಭೆಯಲ್ಲೆ ಚರ್ಚೆ ಮಾಡಿದ್ದು, ಈ ಸಂಬಂಧ ಸಾರ್ವಜನಿಕ ಚರ್ಚೆಗೂ ಸಿದ್ಧ ಎಂದ ಅವರು, ಬಿಜೆಪಿ ಮುಖಂಡರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಒಗ್ಗೂಡಿಸುವ ಕೆಲಸ ಮಾಡುತ್ತಿಲ್ಲ ಎಂದರು.
ರಾಜ್ಯದ ಜನತೆಗೆ ನೀಡಿರುವ ಭರವಸೆಯಂತೆ ಅಕ್ರಮ ಗಣಿಕಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಸರಕಾರ ಬದ್ಧ. ವಿಶೇಷ ತನಿಖಾ ತಂಡ ಈ ಕುರಿತು ನಡೆಸುತ್ತಿರುವ ಪರಿಶೀಲನೆಯ ನಂತರ ಸ್ವೀಕೃತವಾಗುವ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ಅವರು ಸ್ಪಷ್ಟಪಡಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಲೂಟಿ ಮಾಡಿದ ಗಣಿ ಮಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವರದಿ ಆಧರಿಸಿ ಎಸ್‌ಐಟಿ ತಂಡ ರಚಿಸಲಾಗಿತ್ತು. ಇದೀಗ ವಿಶೇಷ ತನಿಖಾ ತಂಡ ತನಿಖೆಯನ್ನು ಚುರುಕುಗೊಳಿಸಿದೆ ಎಂದು ಹೇಳಿದರು.