ಎನ್‌ಆರ್‌ಐಗಳ ಮೂಲಕ ನೋಟು ಬದಲಾವಣೆ? ನಾಗರಾಜನ ವಿಚಾರಣೆ ಚುರುಕು
ಬೆಂಗಳೂರು, ಮೇ 14: ಅಮಾನ್ಯಗೊಂಡಿರುವ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಬಂಧನವಾಗಿರುವ ರೌಡಿಶೀಟರ್ ವಿ.ನಾಗರಾಜ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ತಮಿಳುನಾಡಿನ ಪರಿಚಿತ ಐವರು ಎನ್‌ಆರ್‌ಐಗಳ ಮೂಲಕ ಹಳೆ ನೋಟು ಬದಲಾವಣೆ ಮಾಡಲು ಮುಂದಾಗಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಗರಾಜ್‌ನನ್ನು ತೀವ್ರ ವಿಚಾರಣೆ ಗೊಳಪಡಿಸಿದ್ದು, 40ಕ್ಕೂ ಹೆಚ್ಚು ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದರಲ್ಲಿ ನೋಟು ಬದಲಾವಣೆ ದಂಧೆ ಹಾಗೂ ಉದ್ಯಮಿ ಉಮೇಶ್ ಅಪಹರಣ, ಕೊಲೆ ಯತ್ನ ಪ್ರಕರಣಗಳು ಗಂಭೀರವಾಗಿ ಪರಿಗಣಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ವಿಧಾಸಭಾ ಚುನಾವಣೆಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಗರಾಜ್ ನಿರ್ಧರಿಸಿದಲ್ಲದೆ, ಇದಕ್ಕಾಗಿ ಹಣ ಸಂಗ್ರಹಿಸಲು ನೋಟು ಬದಲಾವಣೆ ದಂಧೆಗೆ ಮುಂದಾಗಿದ್ದ ಎನ್ನಲಾಗಿದ್ದು, ಈ ವ್ಯಾಪ್ತಿಯಲ್ಲಿ ಹೆಚ್ಚು ಸಮಾಜ ಸೇವಕನಂತೆ ಬಿಂಬಿಸಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ನಾಗ ಹಾಗೂ ಆತನ ಇಬ್ಬರು ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮೂವರನ್ನು ಪ್ರತ್ಯೇಕವಾಗಿ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಸಮಾಜ ಸೇವಕ: ನಾಗರಾಜ್ ಈ ಹಿಂದೆ ಶ್ರೀರಾಮಪುರದಲ್ಲಿ ಹಾಲು ಮಾರಾಟ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಆತನಿಗೆ ಹಲವಾರು ಮಂದಿ ಸ್ನೇಹಿತರಿದ್ದರು. ಅವರ ಪ್ರಭಾವದ ಮೂಲಕ ಬಿಬಿಎಂಪಿ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದ. ಸಾಮಾನ್ಯ ಪೊಲೀಸ್ ಪೇದೆಯಿಂದ ಹಿಡಿದು ಸಂಸದರ ಪ್ರಭಾವ ಹೊಂದಿದ್ದ. ಅಲ್ಲದೆ, ತನ್ನ ಮನೆಯ ಸಮೀಪದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಎಂದು ತಿಳಿದುಬಂದಿದೆ.
ಸ್ಥಳೀಯರು ಯಾರೇ ಮತಪಟ್ಟರೂ ಅವರ ಕುಟುಂಬಗಳಿಗೆ 10 ಸಾವಿರ ರೂ. ಧನ ಸಹಾಯ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಅವರ ವಿಶ್ವಾಸಗಳಿಸಿಕೊಳ್ಳುತ್ತಿದ್ದ. ಇದರಿಂದಾಗಿ ಸ್ಥಳೀಯರು ಸದಾ ನಾಗನ ಬೆಂಬಲಕ್ಕೆ ನಿಂತಿದ್ದರು. ನಾಗರಾಜ್‌ನ ಪತ್ನಿ ಲಕ್ಷ್ಮೀಯೂ ಒಂದು ಬಾರಿ ಕಾರ್ಪೊರೇಟರ್ ಆಗಿದ್ದು, ಸಾಕಷ್ಟು ಜನರ ಬೆಂಬಲ ಹೊಂದಿದ್ದರು.
ವಿಚಾರಣೆಗೆ ಸಹಕಾರ: ಜಾಮೀನು ಸಿಗುತ್ತದೆ ಎಂಬ ಗುಂಗಿನಲ್ಲಿ ತಲೆಮರೆಸಿಕೊಂಡಿದ್ದು ಎಂದು ವಿಚಾರಣೆ ವೇಳೆ ನಾಗರಾಜ್ ತಿಳಿಸಿದ್ದು, ಪೊಲೀಸರ ಕಾಲಿಗೆ ಬಿದ್ದು, ಪರಿ ಪರಿಯಾಗಿ ತನ್ನನ್ನು ಏನೂ ಮಾಡದಂತೆ ಅಂಗಲಚಿದ್ದಾನೆ. ಮೊದಲು ತನಿಖೆಗೆ ಸರಿಯಾಗಿ ಸ್ಪಂದಿಸದೆ, ತನಿಖೆಯ ಹಾದಿ ತಪ್ಪಿಸುತ್ತಿದ್ದ ನಾಗ ಈಗ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.