ಯುವಜನರಿಗೆ ಉದ್ಯೋಗ ಕಲ್ಪಿಸಲು ‘ಕೌಶಲ್ಯ ನೀತಿ’ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-05-15 13:49 GMT

ಬೆಂಗಳೂರು, ಮೇ 15: ರಾಜ್ಯದ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೆ ‘ಕೌಶಲ್ಯ ನೀತಿ’ಯೊಂದನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಆಶ್ರಯದಲ್ಲಿ ಏರ್ಪಡಿಸಿದ್ದ  ‘ಕೌಶಲ್ಯ ಕರ್ನಾಟಕ’ ವೆಬ್ ಪೋರ್ಟಲ್, ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

2030ರ ವೇಳೆ 1.80 ಕೋಟಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಉದ್ದೇಶಿಸಿದ್ದು, ಆ ಪೈಕಿ ಶೇ. 50ರಷ್ಟು ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದ ಅವರು, ರಾಜ್ಯಾದ್ಯಂತ ಕೌಶಲ್ಯ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. 2017-18ನೆ ಸಾಲಿನಲ್ಲಿ ಕನಿಷ್ಠ 1 ಲಕ್ಷ ಯುವಜನತೆಗೆ ಉದ್ಯೋಗ ಒದಗಿಸುವುದು ಎಂದರು.

ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲನೆ ಸ್ಥಾನದಲ್ಲಿದ್ದು, ವಿದೇಶಿ ಬಂಡವಾಳ ಹೂಡಿಕೆಯಲ್ಲಿಯೂ ರಾಜ್ಯ ಮೂರನೆ ಸ್ಥಾನದಲ್ಲಿದೆ ಎಂದ ಅವರು, ಹೊಸ ಕೈಗಾರಿಕೆ ಮತ್ತು ಹೊಸ ಉದ್ಯಮಗಳಿಗೆ ಬೇಡಿಕೆಯನ್ನು ಆಧರಿಸಿ ಆಧುನಿಕ ತಂತ್ರಜ್ಞಾನ ಒಳಗೊಂಡ ಕೌಶಲ್ಯ ತರಬೇತಿಗೆ ಆದ್ಯತೆ ನೀಡಲಾಗುವುದು ಎಂದರು.

ಕೌಶಲ್ಯಾಭಿವೃದ್ಧಿ ವೆಬ್‌ಸೈಟ್, ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅನ್ನು ಒಳಸಿಕೊಂಡು ಯುವಜನರು ನೋಂದಣಿ ಮಾಡಿಕೊಂಡು ಕೌಶಲ್ಯಾಭಿವೃದ್ಧಿಗೆ ಸಹಕರಿಸಬೇಕು ಎಂದ ಅವರು, ನೋಂದಣಿ ಮಾಡಿಕೊಂಡವರಿಗೆ 3ರಿಂದ 6 ತಿಂಗಳ ಸರಕಾರದಿಂದಲೇ ಉಚಿತ ತರಬೇತಿ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಪದವೀಧರರ ಪ್ರಮಾಣ ಇದೀಗ ಕೇಲವ 29ರಷ್ಟಿದ್ದು, ಅದನ್ನು 2030ರ ವೇಳೆ ಶೇ.70ಕ್ಕೆ ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸಿದೆ ಎಂದ ಅವರು, ಯುವಜನರಿಗೆ ಉದ್ಯೋಗ ಕಲ್ಪಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ಮಾತ್ರವಲ್ಲ, ಒಟ್ಟಾರೆ ತಲಾ ಆದಾಯವೂ ಹೆಚ್ಚಲಿದೆ ಎಂದರು.

‘ಕಾಯಕವೇ ಕೈಲಾಸ’ ಎಂಬ ಬಸವಣ್ಣನ ತತ್ವದಂತೆ ಕಾಯಕದೊಂದಿಗೆ ಕೌಶಲ್ಯವೂ ಅಗತ್ಯ. ಆ ನಿಟ್ಟಿನಲ್ಲಿ ಸರಕಾರ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದ ಅವರು, ಕೌಶಲ್ಯ ಅಭಿಯಾನ ಯೋಜನೆಯನ್ನು ಯುವಕ-ಯುವತಿಯರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ‘ಕೌಶಲ್ಯ ಕರ್ನಾಟಕ’ ರಾಯಭಾರಿ, ನಟ ಪುನೀತ್ ರಾಜ್ ಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಣ್ಣ ಕೈಗಾರಿಕಾ ಸಚಿವ ರುದ್ರಪ್ಪ ಲಮಾಣಿ, ಸ್ಪೀಕರ್ ಕೆ.ಬಿ.ಕೋಳಿವಾಡ್, ಕೆ. ಗೋವಿಂದರಾಜ್, ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ, ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ, ಅಭಿವೃದ್ಧಿ ಆಯುಕ್ತ ವಿಜಯ ಭಾಸ್ಕರ್, ಸಮೀರ್ ಶುಕ್ಲ, ಸಂಜೀವ್ ಕುಮಾರ್ ಹಾಜರಿದ್ದರು.

‘ಕೌಶಲ್ಯ ಯೋಜನೆಯನ್ನು ಯುವಕ-ಯುವತಿಯರು ಸದ್ಬಳಕೆ ಮಾಡಿಕೊಂಡು ಕೌಶಲ್ಯ ತರಬೇತಿ ಪಡೆದುಕೊಳ್ಳುವ ಮೂಲಕ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ಸಾಗಿಸಬೇಕು. ಈ ಯೋಜನೆಗೆ ತಾನು ರಾಯಭಾರಿ ಆಗಿರುವುದು ನನ್ನ ಪುಣ್ಯ, ಇಂತಹದೊಂದು ಮಹತ್ವದ ಯೋಜನೆ ರೂಪಿಸಿದ ಸರಕಾರದಕ್ಕೆ ಅಭಿನಂದನೆ’
-ಪುನೀತ್ ರಾಜ್‌ಕುಮಾರ್ ನಟ, ಕೌಶಲ್ಯ ಯೋಜನೆ ರಾಯಭಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News