​ಪಾತಾಳ ಗಂಗೆ ಯೋಜನೆಗೆ ಭೂ ವಿಜ್ಞಾನಿ, ಪರಿಸರವಾದಿಗಳ ವಿರೋಧ

Update: 2017-05-16 04:55 GMT

ಬೆಂಗಳೂರು, ಮೇ 15: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಪಾತಾಳ ಗಂಗೆ ಯೋಜನೆಗೆ ಭೂ ವಿಜ್ಞಾನಿಗಳು, ಪರಿಸರ ವಾದಿಗಳು, ಪತ್ರಕರ್ತರು ಹಾಗೂ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿದೆ.

ಸೋಮವಾರ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಪಾತಾಳ ಗಂಗೆ ಯೋಜನೆಯ ಸಾಧಕ-ಬಾಧಕ ಕುರಿತು ಆಯೋಜಿಸಿದ್ದ ಸಭೆಯಲ್ಲಿ, ಪಾತಾಳ ಗಂಗೆ ಯೋಜನೆಯಿಂದ ಭೂ ಗರ್ಭವೇ ಅಪಾಯಕ್ಕೆ ಸಿಲುಕಲಿದೆ. ಇಂತಹ ಅಪಾಯಕಾರಿ ಯೋಜನೆ ಯಾವ ಕಾರಣಕ್ಕೂ ರಾಜ್ಯ ಸರಕಾರ ಜಾರಿ ಮಾಡಬಾರದೆಂದು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ.

ಪಾತಾಳ ಗಂಗೆ ಯೋಜನೆಯನ್ನು ಜಾರಿ ಮಾಡಲು ಮುಂದೆ ಬಂದಿರುವ ಅಮೆರಿಕಾ ಮೂಲದ ಕಂಪೆನಿ ನಕಲಿಯಾಗಿದೆ. ಇಂತಹ ಕಂಪೆನಿಯ ಮಾತನ್ನು ಕೇಳಿ ರಾಜ್ಯ ಸರಕಾರ ಮುರ್ಖತನದ ನಿರ್ಧಾರ ಕೈಗೊಳ್ಳಬಾರದು. ಈ ಸಂಬಂಧ ರಾಜ್ಯ ಸರಕಾರ ಕೂಡಲೆ ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯ ಮಾಡಿದ್ದಾರೆ.

ಸಭೆಯ ನಂತರ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಪಾತಾಳ ಗಂಗೆ ಯೋಜನೆಯ ಕುರಿತು ಹಿರಿಯ ವಿಜ್ಞಾನಿ ಮಾಶಾಲ್ಕರ್ ನೀಡಿದ ವರದಿಯನ್ನು ಆಧರಿಸಿ ಕೇಂದ್ರ ಸರಕಾರ ಹಾಗೂ ಕೇಂದ್ರಿದ ನೀತಿ ಆಯೋಗ ಪ್ರಾಯೋಗಿಕವಾಗಿ ಎರಡು ಬೋರ್‌ವೆಲ್‌ಗಳನ್ನು ಹಾಕುವಂತೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಯೋಜನೆಗೆ ಮುಂದಾಗಿತ್ತೆಂದು ತಿಳಿಸಿದರು.

ಪಾತಾಳ ಗಂಗೆ ಯೋಜನೆ ಸಾಧಕ-ಬಾಧಕಗಳ ಕುರಿತು ಭೂ ವಿಜ್ಞಾನಿ, ಪರಿಸರವಾದಿಗಳು ಹಾಗೂ ಪತ್ರಕರ್ತರೊಂದಿಗೆ ನಡೆದ ಇಂದಿನ ಸಭೆಯಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಇವೆಲ್ಲಾ ಅಭಿಪ್ರಾಯಗಳನ್ನು ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಸಚಿವ ಸಂಪುಟದೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೇಮಠ್, ಹಿರಿಯ ಪತ್ರಕರ್ತ ರವೀಂದ್ರ ಭಟ್, ರಾಧಾಕೃಷ್ಣ ಭಡ್ತಿ ಸೇರಿದಂತೆ ಭೂ ವಿಜ್ಞಾನಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News