ವಂಚಕ ಕಂಪೆನಿಗಳ ಆಸ್ತಿ ಜಫ್ತಿಗೆ ಸೂಚನೆ: ಕಾನೂನು ಸಚಿವ ಜಯಚಂದ್ರ

Update: 2017-05-16 15:41 GMT

ಬೆಂಗಳೂರು, ಮೇ 16: ಜನರಿಗೆ ಹೆಚ್ಚಿನ ಬಡ್ಡಿ ಆಸೆ-ಆಮಿಷವೊಡ್ಡಿ ವಂಚನೆ ಮಾಡುವ ಕಂಪೆನಿಗಳು ಮತ್ತು ಸಂಸ್ಥೆಗಳ ಆಸ್ತಿ ಜಪ್ತಿಗೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಮಂಗಳವಾರ ವಿಧಾನ ಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ಹೆಸರಿನಲ್ಲಿ ವಂಚನೆ ಮಾಡುವ ಕಂಪೆನಿಗಳ ಆಸ್ತಿಯನ್ನು ಹದಿನೈದು ದಿನಗಳಲ್ಲಿ ಜಪ್ತಿ ಮಾಡಲು ಸೂಚಿಸಲಾಗಿದೆ ಎಂದರು ಹೇಳಿದರು.
 

ರಾಜ್ಯದಲ್ಲಿ ಅಗ್ರಿ ಗೋಲ್ಡ್, ಮೈತ್ರಿ ಪ್ಲಾಂಟೇಷನ್ ಆರ್ಟಿಕಲ್ಚರ್ ಪ್ರೈವೇಟ್ ಲಿ.ನಂತಹ ಸಂಸ್ಥೆಗಳು ಜನರಿಗೆ ಬಡ್ಡಿ ಆಮಿಷವೊಡ್ಡಿ ಕೋಟ್ಯಂತರ ರೂ. ಹಣ ಸಂಗ್ರಹಿಸಿವೆ. ಆದರೆ, ಅನಂತರ ಬಡವರಿಗೆ ಠೇವಣಿ-ಬಡ್ಡಿಯನ್ನು ನೀಡದೆ ವಂಚಸಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ವಿವರಿಸಿದರು.

ಹೀಗಾಗಿ ‘ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟ್ರೆಸ್ಟ್ ಆಫ್ ಡಿಪಾಸಿಟ್ ಇನ್ ಫೈನಾನ್ಷಿಯಲ್ ಎಸ್ಟಾಬ್ಲಿಷ್‌ಮೆಂಟ್-2004’ ರ ಕಾಯ್ದೆಯಡಿ ವಂಚಕ ಕಂಪೆನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ತುಮಕೂರು, ಚಿತ್ರದುರ್ಗ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದ್ದು, ಶಿರಾ, ಮಧುಗಿರಿ ತಾಲೂಕಿನಲ್ಲಿ ವಂಚನೆಗೊಳಗಾದವರು ನೀಡಿದ ದೂರಿನನ್ವಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಈ ಬಗ್ಗೆ ಸಿಐಡಿ ಸಮಗ್ರವಾಗಿ ತನಿಖೆ ನಡೆಸಿದೆ.

ಜನರಿಂದ ಸಂಗ್ರಹಿಸಿದ ಹಣವನ್ನು ಕೇರಳ ಹಾಗೂ ಆಂಧ್ರದಲ್ಲಿ ಜಮೀನು ಖರೀದಿಗೆ ಹೂಡಿಕೆ ಮಾಡಲಾಗಿರುವುದು ಪತ್ತೆಯಾಗಿದೆ. ಹಾಗೆಯೇ ರಾಜ್ಯದ ಕೆಲವೆಡೆ ಜಮೀನು ಖರೀದಿಸಿರುವುದು ಪತ್ತೆಯಾಗಿದೆ. ಇಂತಹ ಜಮೀನನ್ನು ಜಫ್ತಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 400 ಕೋಟಿ ರೂ.ಗಳಷ್ಟು ವಂಚನೆಯಾಗಿದೆ ಎಂಬ ಅಂದಾಜಿಸಿದ್ದು, ವಂಚಕ ಕಂಪೆನಿಗಳು ಹೆಚ್ಚಿನ ಪ್ರಮಾಣದಲ್ಲಿ ಆಂಧ್ರ, ತೆಲಂಗಾಣ ಹಾಗೂ ಕೇರಳದಲ್ಲಿ ವ್ಯವಹಾರ ಮಾಡುತ್ತಿರುವುದರಿಂದ ಮುಖ್ಯ ಕಾರ್ಯದರ್ಶಿ ಮೂಲಕ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಸಿ ವಂಚಕ ಕಂಪೆನಿಗಳ ಆಸ್ತಿಯನ್ನು ಜಪ್ತಿ ಮಾಡುವಂತೆ ಕೋರಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರಿನಲ್ಲೂ ಗ್ರೀನ್ ಬರ್ಡ್ಸ್ ಎಂಬ ಕಂಪೆನಿ ಬಡವರಿಂದ ಹಣ ಸಂಗ್ರಹಿ ವಂಚನೆ ಮಾಡಿದೆ ಎಂಬ ದೂರುಗಳಿವೆ. ಹೀಗಾಗಿ ಈ ಕಂಪೆನಿ ವ್ಯವಹಾರದ ಬಗ್ಗೆಯೂ ನಿಗಾ ವಹಿಸಲು ಸಿಐಡಿಗೆ ತಿಳಿಸಲಾಗಿದೆ ಎಂದ ಅವರು, ಅಗ್ರಿ ಗೋಲ್ಡ್ ಕಂಪೆನಿ 1 ಸಾವಿರ ಕೋಟಿ ರೂ. ಸಂಗ್ರಹ ಮಾಡಿದ್ದರೆ, ಮೈತ್ರಿ ಸಂಸ್ಥೆ 500 ಕೋಟಿ ರೂ. ಸಂಗ್ರಹಿಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದರು.
ಜನರು ಹೂಡಿಕೆ ಮಾಡಿರುವ ಹಣವನ್ನು ಹಿಂಪಡೆಯಲು ಹೋದರೆ ರೌಡಿಗಳಿಂದ ಬೆದರಿಕೆ ಹಾಕಿಸಲಾಗುತ್ತಿರುವುದರಿಂದ ಹಣ ಠೇವಣಿ ಮಾಡಿದವರು ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದ ಅವರು, ಇದೀಗ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದರಿಂದ ಈಗ ಬಹುತೇಕರು ಧೈರ್ಯದಿಂದ ದೂರು ನೀಡುತ್ತಿದ್ದಾರೆ ಎಂದರು.

‘ಜನರಿಗೆ ಆಮಿಷವೊಡ್ಡಿ ಹಣ ಸುಲಿಗೆ ಮಾಡುವ ಕಂಪೆನಿಗಳ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ, ಇಂತಹ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಪ್ರಬಲ ಕಾನೂನು ಜಾರಿಗೆ ತರಬೇಕು. ವಂಚಕ ಕಂಪೆನಿಗಳ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ ಮೂಲಕ ತನಿಖೆ ನಡೆಸಿ, ವಂಚನೆಗೆ ಕಡಿವಾಣ ಹಾಕಬೇಕು’
-ಟಿ.ಬಿ.ಜಯಚಂದ್ರ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News