ಸಣ್ಣ-ಮಧ್ಯಮ ಕೈಗಾರಿಕೆ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಬದ್ಧ: ಸಚಿವ ಕಲ್‌ರಾಜ್ ಮಿಶ್ರಾ
ಬೆಂಗಳೂರು, ಮೇ 16: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅನುತ್ಪಾದಕ ಆಸ್ತಿ (ಎನ್‌ಪಿಎ) ರೂಪದ ಸಾಲದಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಾಗಿರುವ ಕೈಗಾರಿಕೆಗಳನ್ನು ಬಳಪಡಿಸಲು ಕೇಂದ್ರ ಸರಕಾರ ಕಾರ್ಯೋನ್ಮುಖವಾಗಿದೆ ಎಂದು ಕೇಂದ್ರ ಎಂಎಸ್‌ಎಂಇ ಸಚಿವ ಕಲ್‌ರಾಜ್ ಮಿಶ್ರಾ ಎಂದು ತಿಳಿಸಿದ್ದಾರೆ.
ಮಂಗಳವಾರ ಕಾಸಿಯಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಹಮ್ಮಿಕೊಂಡಿದ್ದ ಕಾಸಿಯಾ ಮೊಬೈಲ್ ಆ್ಯಪ್ ಮತ್ತು ಸಣ್ಣ ಕೈಗಾರಿಕೆಗಳ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು,ದೇಶದಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ರೋಗಗ್ರಸ್ಥ ಎಂದು ಗುರುತಿಸಲಾಗಿದೆ. ಅವುಗಳ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರದ ಸಾಲ 12 ಲಕ್ಷ ಕೋಟಿಯಷ್ಟಿದೆ. ಈ ಪೈಕಿ ಎನ್‌ಪಿಎ ಪ್ರಮಾಣವು 54 ಸಾವಿರ ಕೋಟಿ ರೂ.ಇದೆ ಎಂದು ಅಂದಾಜಿಸಲಾಗಿದೆ. ಸಣ್ಣ ಕೈಗಾರಿಕೆಗಳ ಎನ್‌ಪಿಎ ರೂಪದ ಸಾಲ ಪ್ರಮಾಣ ಹೆಚ್ಚಾಗುತ್ತಿದ್ದು, ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಷ್ಟದ ಹಾದಿ ಹಿಡಿದು ರೋಗಗ್ರಸ್ಥವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಸಿಯಾ ಅಧ್ಯಕ್ಷ ಎ. ಪದ್ಮನಾಭ, ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕ್‌ಗಳಿಂದ ನೀಡಲಾಗಿರುವ ಸಾಲ ಮರುಪಾವತಿಗಿರುವ 90 ದಿನಗಳ ಕಾಲಾ ವಕಾಶವನ್ನು 180 ದಿನಗಳಿಗೆ ವಿಸ್ತರಣೆ ಮಾಡಬೇಕು. 90 ದಿನದೊಳಗೆ ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿ ಎಂದು ಘೋಷಣೆ ಮಾಡುತ್ತಾರೆ. ಇದರಿಂದ ಕೈಗಾರಿಕೆಗಳು ಸಂಕಷ್ಟಕ್ಕೊಳಗಾಗುತ್ತವೆ. ಹೀಗಾಗಿ ಸಾಲ ಮರುಪಾವತಿ ದಿನವನ್ನು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಐಸಿ ಅಧ್ಯಕ್ಷ ರವೀಂದ್ರನಾಥ್, ಕಾಸಿಯಾ ಉಪಾಧ್ಯಕ್ಷ ಆರ್.ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.